ಹಾವು ಕಡಿದು ರೈತ ಸಾವು| ಆಧಾರ ಸ್ಥಂಭ ವಿಲ್ಲದೇ ರೋಧಿಸುತ್ತಿರುವ ತಾಯಿ ಮತ್ತು ಹೆಂಡತಿ
ಬಡ ಕುಟುಂಬಕ್ಕೆ ಬೇಕಿದೆ ಮಾನವೀಯ ನೆರವು ಮತ್ತು ಪರಿಹಾರ
ಅಂಕೋಲಾ: ವಿಷಕಾರಿ ಹಾವು ಕಡಿದು ರೈತನೋರ್ವ ಮೃತ ಪಟ್ಟ ಘಟನೆ ತಾಲೂಕಿನ ಹೆಗ್ರೆಯಲ್ಲಿ ರವಿವಾರ ಸಂಜೆ ನಡೆದಿದೆ. ಹೆಗ್ರೆ ನಿವಾಸಿ ಮಾದೇವ ನಾರಾಯಣ ಗೌಡ (47) ಮೃತ ದು ದುರ್ದೈವಿಯಾಗಿದ್ದು ಭತ್ತದ ಗದ್ದೆಯಲ್ಲಿ ನೀರು ಬಿಟ್ಟು ಕೃಷಿ ಚಟುವಟಿಕೆ ನಡೆಸಿ ಸಂಜೆ 7ಗಂಟೆ ಸುಮಾರಿಗೆ ಮನೆಗೆ ಮರಳುತ್ತಿರುವ ಸಂದರ್ಭದಲ್ಲಿ ಬಲಕಾಲಿನ ಪಾದದ ಮೇಲ್ಬಾಗದಲ್ಲಿ ಯಾವುದೋ ಜಾತಿಯ ಹಾವು ಕಚ್ಚಿದೆ.
ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಕುಮಟಾ ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿರುವ ಸಂದರ್ಭದಲ್ಲಿ ದಾರಿಮಧ್ಯೆ ರಾತ್ರಿ 8.15 ರ ಸುಮಾರಿಗೆ (ಗೋಕರ್ಣ ರೂಟ್) ಹಿತ್ತಲಮಕ್ಕಿ ಸಮೀಪ ತಲುಪುತ್ತಿದ್ದಂತೆ ವಾಂತಿ ಮಾಡಿಕೊಂಡು ಮೃತ ಪಟ್ಟಿರುವುದಾಗಿ ಸ್ಥಳೀಯ ವಿನಾಯಕ ನಾರಾಯಣಗೌಡ ಇವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಯೋವೃದ್ಧೆ ತಾಯಿ ಮತ್ತು ತನ್ನ ಹೆಂಡತಿಯೊಂದಿಗೆ ಸಂಸಾರ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ಮಾದೇವ ಗೌಡ ,ಕಷ್ಟಪಟ್ಟು ರೈತಾಬಿ ಕೆಲಸ ಮಾಡಿಕೊಂಡಿದ್ದ.ಮನೆಗೆ ಆದರ ಸ್ತಂಭವಾಗಿದ್ದ ಆತನ ಅಕಾಲಿಕ ನಿಧನದಿಂದ ಬಡ ಕುಟುಂಬ ದುಃಖ ಸಾಗರದಲ್ಲಿ ಮುಳುಗುವಂತಾಗಿದೆ.
ಊರಿನ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳಿ ಬದುಕಿದ್ದ ಮಾದೇವ ಗೌಡನ ಸಾವು,ಗಣೇಶ ಹಬ್ಬದ ಸಂಭ್ರಮದಲ್ಲಿದ್ದ ಹೆಗ್ರೆ ಹಾಗೂ ಸುತ್ತಮುತ್ತಲಿನ ನಾಗರಿಕರಲ್ಲಿ ಶೋಕದ ವಾತಾವರಣ ಮೂಡಿಸಿದೆ.ಮಾದೇಗೌಡ ಈತನ ಸಾವಿಗೆ,ಶಾಸಕಿ ರೂಪಾಲಿ ನಾಯ್ಕ, ಸ್ಥಳೀಯ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಎಮ್ ಗೌಡ, ತಾ.ಪಂ ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ, ಸಾಮಾಜಿಕ ಕಾರ್ಯಕರ್ತ ವಿನಾಯಕ ಗಾಂವಕರ,ಬೆಳಂಬರ್ ಗ್ರಾಪ್ಪಂ ಮಾಜಿ ಅಧ್ಯಕ್ಷ ಮಾದೇವ್ ಗೌಡ ಸೇರಿದಂತೆ ಇತರೆ ಸ್ಥಳೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.
ರೈತನ ಅಕಾಲಿಕ ಸಾವಿನಿಂದ ಕಂಗೆಟ್ಟಿರುವ ಬಡ ಕುಟುಂಬಕ್ಕೆ ಸರ್ಕಾರ – ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಪರಿಹಾರ ರೂಪದಲ್ಲಿ ನೆರವಿನ ಹಸ್ತ ಕೈ ಚಾಚಬೇಕಿದೆ ಎಂಬ ಮಾತು ಸ್ಥಳೀಯರಿಂದ ಕೇಳಿ ಬಂದಿದೆ.