ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ 60 ಜನರಿದ್ದ ಬಸ್ ಪಲ್ಟಿ: 18 ಮಂದಿಗೆ ಗಾಯ

ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ

ಹೊನ್ನಾವರ: ಕಾಲೇಜು ವಿದ್ಯಾರ್ಥಿಗಳಿದ್ದ ಬಸ್ ಪಲ್ಟಿಯಾಗಿ 18 ಜನರು ಗಾಯಗೊಂಡ ಘಟನೆ ತಾಲೂಕಿನ ಸೂಳೆಮುರ್ಕಿ ಕ್ರಾಸ್ ಹತ್ತಿರ ನಡೆದಿದೆ. ಅಪಘಾತದಲ್ಲಿ 05 ವಿದ್ಯಾರ್ಥಿಗಳು, 11 ವಿದ್ಯಾರ್ಥಿನಿಯರು, 02 ಜನ ಉಪನ್ಯಾಸಕರು ಸೇರಿ ಒಟ್ಟು 18 ಜನರು ಗಾಯಗೊಂಡಿದ್ದಾರೆ.. ಗಾಯಾಳುಗಳನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳು ಹೊನ್ನಾವರ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸುದ್ದಿ ಓದಿ: ಉತ್ತರಕನ್ನಡ ಜನರು ಬೆಚ್ಚಿ ಬೀಳುವ ಮಾಹಿತಿ: ಬಂದೂಕು ತಯಾರಿಕಾ ಶೆಡ್ ಮೇಲೆ ಪೊಲೀಸರ ದಾಳಿ

ಯಾದಗಿರಿ ಜಿಲ್ಲೆಯ ಶಹಾಪುರದ ಪ್ರಾರ್ಥನಾ ಪದವಿ & ಪದವಿ ಪೂರ್ವ ಕಾಲೇಜಿನ 50 ವಿಧ್ಯಾರ್ಥಿಗಳು, 08 ಉಪನ್ಯಾಸಕರು ಹಾಗೂ 02 ಆಡಳಿತ ಮಂಡಳಿಯ ಸದಸ್ಯರು ಸೇರಿ ಒಟ್ಟು 60 ಜನರು, ಎಮ್.ಆರ್ ಟೂರ್ಸ್ & ಟ್ರಾವೆಲ್ಸ್ ಬಸ್ ನಲ್ಲಿ ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದರು. ಜೋಗದಿಂದ ಮುರ್ಡೇಶ್ವರಕ್ಕೆ ಬರುವಾಗ ಹೊನ್ನಾವರದ ಸೂಳೆಮುರ್ಕಿ ಕ್ರಾಸ್ ಹತ್ತಿರ ರಸ್ತೆಯ ತಿರುವಿನಲ್ಲಿ ಪಲ್ಟಿಯಾಗಿದೆ. ಬಸ್ ಚಾಲಕನು ಅತಿವೇಗ ಅಜಾಗರೂಕತೆಯಿಂದ ಬಸ್ ಚಲಾಯಿಸಿದ್ದೇ ಈ ಅವಘಡಕ್ಕೆ ಕಾರಣ ಎಂದು ತಿಳಿದುಬಂದಿದೆ.

ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಊಟದ ವ್ಯವಸ್ಥೆ

ಅಪಘಾತಕ್ಕೀಡಾದ ಬಸ್ ನಲ್ಲಿದ್ದ ಇನ್ನುಳಿದ ವಿಧ್ಯಾರ್ಥಿಗಳು ಹಾಗೂ ಉಪನ್ಯಾಸಕರನ್ನು ಪ್ರತ್ಯೇಕ ವಾಹನದಲ್ಲಿ ಹೊನ್ನಾವರಕ್ಕೆ ಕರೆತಂದು ತಹಶೀಲ್ದಾರರ ಸಹಕಾರದೊಂದಿಗೆ ಬಿ.ಸಿ.ಎಮ್ ಹಾಸ್ಟೆಲ್ ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳ ಪಾಲಕರು ಅನವಶ್ಯಕ ಆತಂಕಕ್ಕೆ ಒಳಗಾಗಬಾರದೆಂಬ ಉದ್ದೇಶದಿಂದ ಅಪಘಾತದ ಬಗ್ಗೆ ಉಪ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಕಾರವಾರ ರವರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಹಾಪುರ ರವರಿಗೆ ಮಾಹಿತಿ ನೀಡಲಾಗಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version