ರೈಲ್ವೆ ಸುರಂಗ ಮಾರ್ಗದಲ್ಲಿ ವ್ಯಕ್ತಿಯ ಮೃತ ದೇಹ ಪತ್ತೆ: ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ
ಅಂಕೋಲಾ: ರೈಲ್ವೆ ಟನೆಲ್ ಬಳಿ ವ್ಯಕ್ತಿಯೋರ್ವನ ಮೃತ ದೇಹ ಕಂಡು ಬಂದು ಸ್ಥಳೀಯರಲ್ಲಿ ಕೆಲಕಾಲ ಆತಂಕದ ವಾತಾವರಣ ಮೂಡಿತ್ತು. ಅಂಕೋಲಾ ತಾಲೂಕಿನ ಹುಲಿದೇವರವಾಡಾ ವ್ಯಾಪ್ತಿಯಲ್ಲಿ ಕೊಂಕಣ ರೈಲ್ವೆ ಮಾರ್ಗದಲ್ಲಿ ಹುಲಿ ದೇವರವಾಡಾ ಹತ್ತಿರ (ಸುರಂಗ ಮಾರ್ಗದಲ್ಲಿ ) ರೈಲ್ವೆ ಹಳಿಪಕ್ಕ ವ್ಯಕ್ತಿ ಯೋರ್ವರ ಮೃತದೇಹ ಬಿದ್ದಿರುವ ಸುದ್ದಿ ತಿಳಿದು ಪಿಎಸ್ ಐ ಪ್ರವೀಣ ಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತ ವ್ಯಕ್ತಿಯ ಮೊಬೈಲ್ ಮೂಲಕ ಆತನ ಪರಿಚಿತರ ಸಂಪರ್ಕ ಮಾಡಿ ವಿಳಾಸ ಪತ್ತೆ ಮಾಡಲಾಯಿತು.
ಕೊಡಗು(ಮಡಿಕೇರಿ) ಮೂಲದ ಸದ್ಯ ಉಡುಪಿಯಲ್ಲಿ ನೆಲೆಸಿರುವ ರವಿಸುಂದರ ರಾಮಪ್ಪ (57) ಮೃತ ದುರ್ದೈವಿ ಎನ್ನಲಾಗಿದೆ. ಗೋವಾದ ಪೆಟ್ರೋಲ್ ಪಂಪ್ ಒಂದರಲ್ಲಿ ಕೆಲಸಕ್ಕಿದ್ದ ಎನ್ನಲಾದ ಈತ ಗೋವಾದಿಂದ ಮಂಗಳೂರು ಮಾರ್ಗವಾಗಿ ಊರಿಗೆ ರೈಲ್ವೆಯಲ್ಲಿ ಪ್ರಯಾಣಿಸುತ್ತಿರಬೇಕಾದರೆ,ಮಾರ್ಗ ಮಧ್ಯೆ ಅಂಕೋಲಾದಲ್ಲಿ ಪ್ರಾಣಹಾನಿ ಸಂಭವಿಸಿದೆ. ಚಲಿಸುತ್ತಿರುವ ರೈಲಿನಿಂದ ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಕೇಳಿ ಬಂದಿದೆ.
ಮೃತ ದೇಹದ ಪಕ್ಕದಲ್ಲಿ ನ್ಯೂಸ್ ಪೇಪರ್,ಚಕ್ಕುಲಿ ಪಾಕೆಟ್,ಚಪ್ಪಲಿ ಮತ್ತು ಛತ್ರಿ ಕಂಡುಬಂದಿದ್ದು, ತರಚಿದ ಗಾಯಗಳಾಗಿವೆ. 112 ತುರ್ತು ವಾಹನ ಸಿಬ್ಬಂದಿ ಸಂತೋಷ್ ನಾಯ್ಕ ಮತ್ತು ಅಂಕೋಲಾ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಸುರೇಶ ಬಳ್ಳುಳ್ಳಿ, ಸಲೀಂ ಮುಕಾಸಿ ಇತರರು ಕರ್ತವ್ಯ ನಿರ್ವಹಿಸಿದರು.ಶಾಸಕಿ ರೂಪಾಲಿ ನಾಯ್ಕ ತಮ್ಮ ಕುಟುಂಬದ ನೀಲ- ಪ್ರಭಾ ಟ್ರಸ್ಟ್ ವತಿಯಿಂದ ನೀಡಿದ ಶ್ರದ್ಧಾಂಜಲಿ ವಾಹನದಲ್ಲಿ ಮೃತದೇಹವನ್ನು ಸಾಗಿಸಲಾಯಿತು. ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸದಸ್ಯ ಮತ್ತು ಸಾಮಾಜಿಕ ಕಾರ್ಯಕರ್ತ ನಾಗರಾಜ್ ಐಗಳ, ಅವರ್ಸಾದ ಶಿವಾ ನಾಯ್ಕ ಮಾರ್ಗದರ್ಶನದಲ್ಲಿ ಸಂತೋಷ ಶೆಟ್ಟಿ ಮತ್ತು ಗೆಳೆಯರು ಮೃತ ದೇಹವನ್ನು ತಾಲೂಕ ಆಸ್ಪತ್ರೆ ಶವಗಾರಕ್ಕೆ ಸಾಗಿಸಲು ಸಹಕರಿಸಿದರು.
ಮೃತನ ಕುಟುಂಬಸ್ಥರು ಇಲ್ಲವೇ ಕೆಲಸ ಮಾಡುತ್ತಿದ್ದ ಪೆಟ್ರೋಲ್ ಪಂಪ್ ಮಾಲಕರು ಬಂದ ನಂತರ ಹಾಗೂ ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಾಗಿದೆ.ರೈಲ್ವೆ ಸುರಂಗ ಮಾರ್ಗದ ಒಳಗಡೆ ನಾಯಿಗಳು,ಆಕಳ ಕಳೆಬರ ಕಂಡುಬರುತ್ತಿದ್ದು ಮಳೆಯ ಈ ದಿನಗಳಲ್ಲಿ ಸುರಂಗದ ಒಳಗಡೆ ದುರ್ನಾತ ಮತ್ತು ಉಸಿರುಗಟ್ಟಿವಿಕೆ ವಾತಾವರಣದ ನಡುವೆಯೂ ಪೊಲೀಸ್ ಸಿಬ್ಬಂದಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಕರ್ತವ್ಯ ಮತ್ತು ಸೇವೆಯನ್ನು ಸ್ಥಳೀಯರು ಕೊಂಡಾಡಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ