ಭಟ್ಕಳ: ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘದ 23ನೇ ವಾರ್ಷಿಕ ಮಹಾ ಸಭೆಯು ಶಿರಾಲಿಯ ಶ್ರೀ ಮಾರುತಿ ದೇವಸ್ಥಾನದ ಸಭಾಗೃಹದಲ್ಲಿ ಸೆಪ್ಟೆಂಬರ್ 18 ರಂದು ಜರುಗಿತು. ಸಂಘದ ಅಧ್ಯಕ್ಷರಾದ ಶ್ರೀ ಅಶೋಕ ಪೈ ಯವರು ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಸಂಘವು ಪ್ರಸ್ತುತ ಸಾಲಿನಲ್ಲಿ 73.69 ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಿಸಿ ಸದಸ್ಯರಿಗೆ ರೂ. 66.60 ಕೋಟಿ ಸಾಲವನ್ನು ನೀಡಿ 98.33% ಸಾಲ ವಸೂಲಾತಿಯೊಂದಿಗೆ ಸುಮಾರು 2.12 ಕೋಟಿಗೂ ಮಿಕ್ಕಿ ಲಾಭಗಳಿಸಿ ಸುಧೃಢವಾಗಿದೆ ಎನ್ನುತ್ತಾ ಸದಸ್ಯರಿಗೆ 13% ಲಾಭಾಂಶ ಘೋಷಿಸಿದರು.
ಸಂಘದ ಲೆಕ್ಕ ಪರಿಶೋಧನಾ ವರದಿಯಲ್ಲಿ ಸತತ 11 ವರ್ಷಗಳಿಂದ ಸಂಘವು “ಅ” ದರ್ಜೆ ಪಡೆದಿದೆ ಎನ್ನುತ್ತಾ ಪ್ರತಿ ವರ್ಷದಂತೆ ಈ ಬಾರಿಯೂ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಯಲ್ಲಿ ಗರಿಷ್ಟ ಅಂಕ ಪಡೆದ 37 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಿದರು. ಸಂಘದ ಉಪಾಧ್ಯಕ್ಷರಾದ ಶ್ರೀ ಸುಬ್ರಾಯ ಕಾಮತ ಸಾಂದರ್ಭಿಕವಾಗಿ ಮಾತನಾಡುತ್ತ ಯಾವುದೇ ಭಿನ್ನಾಬಿಪ್ರಾಯವಿಲ್ಲದೇ ಎಲ್ಲಾ ನಿರ್ದೇಶಕರು ಏಕಮನಸ್ಸಿನಿಂದ ಸಲ್ಲಿಸಿದ ನಿಸ್ವಾರ್ಥ ಸೇವೆಯೇ ಸಂಘದ ಏಳಿಗೆಗೆ ಕಾರಣ ಎಂದು ಅಭಿಪ್ರಾಯಪಟ್ಟರು. ನಮ್ಮ ಕ್ರಿಯಾಶೀಲ ಸಿಬ್ಬಂದಿಗಳು ಉತ್ತಮ ತ್ವರಿತ ಸೇವೆಯನ್ನು ಸಲ್ಲಿಸುತ್ತಿದ್ದು ಸದಸ್ಯರಿಗೆ ಇನ್ನೂ ಏನಾದರೂ ಅನಾನುಕೂಲತೆ ಇದ್ದಲ್ಲಿ ಆಡಳಿತ ಮಂಡಳಿಯ ಗಮನಕ್ಕೆ ತರುವಂತೆ ನಿರ್ದೇಶಕರಾದ ನರೇಂದ್ರ ನಾಯಕ ಮನವಿ ಮಾಡಿದರು.
ನಿರ್ದೇಶಕರಾದ ರವೀಂದ್ರ ಪ್ರಭು ಮಾತನಾಡುತ್ತ ಇತರ ಪತ್ತಿನ ಸಂಘಗಳಿಗೆ ಹೋಲಿಸಿದಲ್ಲಿ ನಾವು ಗ್ರಾಹಕರಿಗೆ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತಾ ಉತ್ತಮ ಸೇವೆಯನ್ನು ನೀಡುತ್ತಿದ್ದೇವೆ ಎನ್ನುತ್ತಾ ಅತೀ ಶೀಘ್ರದಲ್ಲಿ ನಮ್ಮ ಪ್ರಧಾನ ಕಛೇರಿ ಹಾಗೂ ಶಿರಾಲಿ ಶಾಖೆಯನ್ನು ನಮ್ಮ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದರು ಹಿರಿಯ ಸದಸ್ಯರಾದ ಡಿ.ಜೆ. ಕಾಮತ, ನಾರಾಯಣ ಸರಾಫ್, ಗೋಪಾಲಕೃಷ್ಣ ಆಚಾರ್ಯ, ಶ್ರೀನಿವಾಸ ಮಹಾಲೆ, ಮುಂತಾದವರು ಸಂಘವು ನೀಡಿದ ಸೇವೆಯನ್ನು ಶ್ಲಾಘಿಸುತ್ತಾ ತಮ್ಮ ಸಲಹೆ ಸೂಚನೆಗಳನ್ನಿತ್ತರು. ಸಂಘದ ಮುಖ್ಯಕಾರ್ಯನಿರ್ವಾಹಕರಾದ ರಾಜೇಂದ್ರ ಶಾನಭಾಗ ವರದಿಯನ್ನು ವಾಚಿಸಿದರು.
ಪ್ರಾರಂಭದಲ್ಲಿ ಸಂಘದ ನಿರ್ದೇಶಕರಾದ ನಾಗೇಶ ಪೈ ಸ್ವಾಗತಿಸಿದರೆ ಕೊನೆಯಲ್ಲಿ ನಿರ್ದೇಶಕರಾದ ವಾಮನ ಕಾಮತ ವಂದನಾರ್ಪಣೆಗೈದರು. ಸಿಬ್ಬಂದಿ ಶ್ಯಾಮಸುಂದರ್ ಪ್ರಭು ಪ್ರಾರ್ಥಿಸಿದರೆ ಭಟ್ಕಳ ಶಾಖೆಯ ಪ್ರಬಂಧಕರಾದ ಪ್ರಸನ್ನ ಪ್ರಭುರವರು ಸಭೆಯ ಕಾರ್ಯಕಲಾಪವನ್ನು ನಿರ್ವಹಿಸಿದರು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ