ಶಿರಸಿ: ಇಬ್ಬರು ಕಾಲೇಜು ವಿದ್ಯಾರ್ಥಿಗಳು ಮತ್ತು ಓರ್ವ ಕೂಲಿಕಾರ್ಮಿಕ, ಓರ್ವ ಕೃಷಿಕ ಸೇರಿ ಮನೆ ಕಳ್ಳತನ ನಡೆಸುತ್ತಿದ್ದ ನಾಲ್ವರನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ 7ರಂದು ಬನವಾಸಿಯ ಖಲೀಲ್ ಅಬ್ದುಲ್ ಎನ್ನುವವರ ಮನೆಯಲ್ಲಿಟ್ಟಿದ್ದ 2.55 ಲಕ್ಷ ನಗದು ಮತ್ತು 4 ಸಾವಿರ ಮೌಲ್ಯದ ಉಂಗುರಗಳನ್ನ ಬೆಳ್ಳಂಬೆಳಿಗ್ಗೆ ಕಳ್ಳತನ ಮಾಡಲಾಗಿತ್ತು. ಈ ಕುರಿತು ಮನೆಯ ಮಾಲೀಕ ಬನವಾಸಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಇದೀಗ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮನೆಗಳ್ಳತನ ಪ್ರಕರಣ: ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸೇರಿ ನಾಲ್ವರ ಬಂಧನ
ತಾಲೂಕಿನ ಬನವಾಸಿ ನಿವಾಸಿಗಳಾದ ಮಹಮ್ಮದ್ ಕೈಫ್ (19), ವಿಶ್ವ ಪಾವಸ್ಕರ್ (21), ಯಾಸಿನ್ ಭಾಷಾ ಸಾಬ್ (18) ಹಾಗೂ ರಿಯಾಜ್ ಇಕ್ಬಾಲ್ ಚೌದರಿ (19) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಕೈಫ್ ಕೂಲಿ ಕೆಲಸ ಮಾಡಿಕೊಂಡಿದ್ದು, ರಿಯಾಜ್ ಕೃಷಿ ಕೆಲಸ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ವಿಶ್ವ ಹಾಗೂ ಯಾಸಿನ್ ಇಬ್ಬರೂ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ.
ಅಲ್ಲದೆ, ಪೊಲೀಸ್ ತನಿಖೆ ವೇಳೆ ಮಹಮ್ಮದ್ ಕೈಫ್ ಫೆಬ್ರುವರಿ 16ರಂದು ಬನವಾಸಿಯ ಸುವರ್ಣಾ ಮಾಲತೇಶ ಎಂಬುವವರ ಮನೆಯಲ್ಲಿಯೂ ಸಹ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಹೀಗಾಗಿ ಮತ್ತೊಂದು ಕಳ್ಳತನ ಪ್ರಕರಣವೂ ಬೇಧಿಸಿದಂತಾಗಿದೆ. ಬಂಧಿತ ಆರೋಪಿಗಳಿಂದ 2.75 ಲಕ್ಷ ನಗದು ಹಾಗೂ 10 ಗ್ರಾಂ ಬಂಗಾರದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಸ್ಮಯ ನ್ಯೂಸ್, ಶಿರಸಿ