Follow Us On

WhatsApp Group
Big NewsImportant
Trending

ಅಪರೂಪದ ಬಂಗಾರದ ಮೂರ್ತಿ ದರ್ಶನಕ್ಕೆ ಭಕ್ತರ ಕಾತರ: ಹೇಗಿದೆ ನೋಡಿ ಬಾಂಗ್ರಾ ಮಹಮಾಯಾ ಉತ್ಸವ

ಅಲ್ಲಿ ನಡೆದಿತ್ತು ಮಹಾ ಪವಾಡ

ಅಂಕೋಲಾ: ನಾಡಿನ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣವೊಂದರಲ್ಲಿ  ಸುಮಾರು ಏಳು ವರ್ಷಗಳ ನಂತರ   ಬಾಂಗ್ರಾ ಮಹಮಾಯಾ ಎಂಬ ಉತ್ಸವ ಆರಂಭವಾಗಿದ್ದು,ಅಪರೂಪದ ಬಂಗಾರದ ಮೂರ್ತಿ ದರ್ಶನಕ್ಕೆ  ದೇಶ ವಿದೇಶಗಳಿಂದ ಸಹಸ್ರಾರು ಭಕ್ತರುಆಗಮಿಸುತ್ತಿದ್ದಾರೆ. ಬಂಗಾರದ ವ್ಯಾಪಾರಿಯ ಸಂತಾನ ಭಾಗ್ಯಕ್ಕೆ  ದೈವಾನುಗ್ರಹವಾದ ವಿಶೇಷ ಪ್ರತೀತಿ ಇಲ್ಲಿ ನೆಲೆಸಿದ್ದು,ಸುಮಾರು 19 ದಿನಗಳ ಕಾಲ ಹಬ್ಬದ ವಾತಾವರಣ ಕಂಡುಬರಲಿದೆ.

ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಣೆ: ಉಚಿತ ಪಾಸ್ ಪಡೆಯಲು ಹೀಗೆ ಮಾಡಿ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹನುಮಟ್ಟದಲ್ಲಿರುವ ನಾಗ್ಪೆ ಸಂಸ್ಥಾನದ ಶ್ರೀ ಲಕ್ಷ್ಮೀನಾರಾಯಣ ಮಹಾಮಾಯ ದೇವಾಲಯ ನಾಡಿನ  ಸುಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣವಾಗಿ ಗಮನ ಸೆಳೆದಿದೆ. ರಾಷ್ಟ್ರೀಯ ಹೆದ್ದಾರಿ 66 ರಿಂದ ಅತೀ ಹತ್ತಿರದಲ್ಲಿರುವ ಈ ಭವ್ಯ ದೇವಾಲಯಕ್ಕೆ ಲಕ್ಷಾಂತರ ಭಕ್ತರು ನಡೆದುಕೊಳ್ಳುತ್ತಿದ್ದು ವಿಶೇಷವಾಗಿ ಗೋವಾ, ಮಹಾರಾಷ್ಟ್ರ ಸೇರಿದಂತೆ ಇತರೆ  ರಾಜ್ಯಗಳ ಹಾಗೂ ಕರ್ನಾಟಕದ ಉತ್ತರ ಕನ್ನಡ, ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿ ಅಪಾರ ಸಂಖ್ಯೆಯ ಕುಳಾವಿಗಳನ್ನು  ಹೊಂದಿದೆ. ಜಿಲ್ಲೆಯ ಧಾರ್ಮಿಕ ಹಾಗೂ ಪ್ರವಾಸೋದ್ಯಮ  ತಾಣಗಳಲ್ಲಿ ಒಂದಾಗಿ, ವಿಶಾಲವಾದ ಪ್ರಾಗಂಣ, ಭವ್ಯವಾದ ದೇಗುಲ, ಕುಸುರಿ ಕೆತ್ತನೆ, ಶುಚಿತ್ವ ಮತ್ತು ಶಾಂತತೆಗೆ ಹೆಸರಾಗಿದೆ. 

ಹುತ್ತದ ರೂಪದಲ್ಲಿ ನೆಲೆ ನಿಂತ ಮಹಾಮಾಯೆ

ದೇವಾಲಯದ ಗರ್ಭಗುಡಿಯ ಒಂದು ಬದಿಯಲ್ಲಿ ಲಕ್ಷ್ಮೀ ನಾರಾಯಣ ದೇವರ ವಿಗ್ರಹವಿದ್ದು ಇನ್ನೊಂದು ಬದಿಯಲ್ಲಿ ಹುತ್ತದ ರೂಪದಲ್ಲಿ ಶ್ರೀಮಹಾಮಾಯೆ ನೆಲೆ ನಿಂತಿದೆ. ವರ್ಷದುದ್ದಕ್ಕೂ ಇಲ್ಲಿ ನಾನಾ ರೀತಿಯ ಧಾರ್ಮಿಕ ಸೇವೆ, ಪೂಜೆ ಮತ್ತಿತರ ಕಾರ್ಯಕ್ರಮಗಳು ನಡೆದು ಕೊಂಡು ಬರುತ್ತಿದೆ ಆದರೆ ಅವೆಲ್ಲವುಗಳಿಗಿಂತ ಬಲು ಅಪರೂಪ ಮತ್ತು ಬಲು ವಿಶೇಷ ಎಂಬಂತೆ  ಶ್ರೀದೇವರ ಪ್ರಸಾದದ ಅಪ್ಪಣೆಯಂತೆ 5 ಅಥವಾ 7 ವರ್ಷಗಳಿಗೆ ಒಮ್ಮೆ ಇಲ್ಲಿ ಬಾಂಗ್ರಾ ಎಂದು ಕರೆಯಿಸಿ ಕೊಳ್ಳುವ ಬಂಗಾರದ ಮಹಾಮಾಯಾ ಉತ್ಸವ  ನಡೆಸುತ್ತಾ ಬರಲಾಗಿದೆ.

2015 ರ ನಂತರ ಇದೀಗ ಈ ವರ್ಷ ಬಂಗಾರದ ಮಹಮಾಯಾ ಮೂರ್ತಿಯ ದರ್ಶನ ಭಾಗ್ಯ ಭಕ್ತರಿಗೆ ಸಿಗುವಂತಾಗಿದ್ದು. ನವರಾತ್ರಿಯ ಮಹಾ ನವಮಿಯಂದು ಬಂಗಾರದ ಮಹಾಮಾಯಿಯ ವಿಶೇಷ ಮೂರ್ತಿಯನ್ನು ಹೊರ ತೆಗೆದು ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಸುಮಾರು 19 ದಿನಗಳ ಕಾಲ ನಡೆಯಲಿರುವ ಈ ಉತ್ಸವ ಮೂರ್ತಿಯನ್ನು ಕಣ್ತುಂಬಿಸಿಕೊಳ್ಳಲು  ಅಕ್ಟೋಬರ್ 22 ರ ವರೆಗೆ ದರ್ಶನದ ವ್ಯವಸ್ಥೆ ಮಾಡಲಾಗಿದ್ದು ಅಕ್ಟೋಬರ್ 21 ರಂದು ಮಾತ್ರ ಒಂದು ದಿನ ಬಿಡುವು ಇರುತ್ತದೆ.  ಉಳಿದ ದಿನಗಳಲ್ಲಿ ಬಂಗಾರದ ಮಹಾಮಾಯಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಪ್ರತಿದಿನ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಬೇರೆ ಬೇರೆ ದಿನಗಳಂದು ಹಲವು ಮಠಾಧೀಶರು  ದೇವಾಲಯಕ್ಕೆ ಆಗಮಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾಂಗ್ರಾ ಉತ್ಸವದ ಹಿಂದೆ ಬಂಗಾರದ ಮಹಮಾಯೆಗೆ ಸಂಬಂಧಿಸಿದಂತೆ ಪ್ರತೀತಿಯೊಂದು ಜನಜನಿತವಾಗಿದ್ದು ಬಂಗಾರದ ವ್ಯಾಪಾರಿ ಜೀವನದಲ್ಲಿ ನಡೆದಿತ್ತೆನ್ನಲಾದ ದೈವೀ ಕೃಪೆಯ ಮಹಿಮೆ ತಿಳಿಸುತ್ತದೆ.

ಪವಾಡ ಸದೃಶ ಘಟನೆ

ಗೋವಾದ ಬಂಗಾರದ ವ್ಯಾಪಾರಿ ನಾಗ್ವೇಕರ ಶೇಟ್ ಎನ್ನುವವರು ತಮಗೆ ಸಂತಾನ ಪ್ರಾಪ್ತಿ ಆದಲ್ಲಿ ಬಂಗಾರದ ಮಹಮಾಯಾ ಮೂರ್ತಿ ನೀಡುವುದಾಗಿ ಹರಕೆ ಹೊತ್ತಿ ಕೊಂಡಾಗ, ಅವರ ಇಷ್ಟಾರ್ಥ ಸಿದ್ಧಿಸಿ ಅವರಿಗೆ ಒಂದು ಹೆಣ್ಣು ಮಗು ಜನಿಸಿ, ಇದರಿಂದ ಖುಷಿಗೊಂಡ  ಬಂಗಾರದ  ವ್ಯಾಪಾರಿ ತನ್ನ ಮಗುವನ್ನು ಹೋಲುವ ಮೂರ್ತಿಯೊಂದಿಗೆ ದೇವಾಲಯಕ್ಕೆ ಬಂದು ಹರಕೆ ಸಮರ್ಪಿಸಿದ  ನಂತರ ಮಗು ಪ್ರಾಣ ಬಿಟ್ಟಿತ್ತು ಎನ್ನಲಾಗಿದೆ. ಇದರಿಂದ ನೊಂದ ಕುಟುಂಬದರಿಗೆ  ತಾಯಿಯು ದರ್ಶನ ಸೇವೆಯಲ್ಲಿ ಮಗು ಕರುಣಿಸುವುದಾಗಿ ಭಕ್ತನಿಗೆ ಅಭಯ ನೀಡಿ ,  ಅದರಂತೆ ಮುಂದೆ ಅದೇ ಬಂಗಾರದ ವ್ಯಾಪಾರಿಗೆ ಮತ್ತೊಂದು ಮಗು ಜನಿಸಿ, ವ್ಯಾಪಾರಿಯ  ಸಂಪತ್ತು  ಸಹ ಮತ್ತಷ್ಟು ವೃದ್ಧಿಯಾಗಿ ಆತನ ಜೀವನದಲ್ಲಾದ ಪವಾಡ ಸದೃಶ  ಈ ಮಹತ್ತರ ಬದಲಾವಣೆ , ನಂಬಿದ ಭಕ್ತರನ್ನು ಪೊರೆವ  ತಾಯಿಯ ಮಹಿಮೆ ಕುರಿತು ಪ್ರತೀತಿ ಇದೆ.  ಅಕ್ಟೋಬರ್ 14 ರಂದು  ದೇವಾಲಯದಲ್ಲಿ ನಡೆಯುವ ವಡೆ ಪಂಚಮಿ ಕಾರ್ಯಕ್ರಮದಲ್ಲಿ ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ತೆಗೆಯುವ ವಡೆ ಪ್ರಸಾದ ಸ್ವೀಕರಿಸಲು ಸಹಸ್ರಾರು ಭಕ್ತರು ಆಗಮಿಸುತ್ತರೆ.  

ಹುನುಮಟ್ಟದ ಶ್ರೀಲಕ್ಷ್ಮೀ ನಾರಾಯಣ ಮಹಾಮಾಯಾ ದೇವಾಲಯ, ಪರಿವಾರ ದೇಗುಲಗಳು, ಸುತ್ತ ಮುತ್ತಲ ಪ್ರಾಂಗಣ, ಬಂಗಾರದ ಮಹಾಮಾಯಾ ಉತ್ಸವಕ್ಕಾಗಿ ಸುಣ್ಣ ಬಣ್ಣಗಳೊಂದಿಗೆ ಸುಂದರವಾಗಿ ಶೃಂಗರಿಸಲ್ಪಟ್ಟಿದೆ.  ವಾಹನ ನಿಲುಗಡೆಗೆ ವಿಶೇಷ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಸ್ವಚ್ಚತೆಗೆ ಆದ್ಯತೆ ಮತ್ತಿತರ ಪೂರಕ ವ್ಯವಸ್ಥೆಗಳನ್ನು ಕುಳಾವಿಗಳು ಹಾಗೂ ಸದ್ಭಕ್ತರ ಸಹಕಾರದಲಿ ದೇವಸ್ಥಾನ ಆಡಳಿತ ಮಂಡಳಿಯವರು ಅಚ್ಚುಕಟ್ಟಾಗಿ ನೆರವೇರಿಸುತ್ತಿದ್ದಾರೆ. ಕುಳಾವಿ ಭಕ್ತರಿಗಷ್ಟೇ ಅಲ್ಲದೇ ಕೆಲ ವಿಶೇಷ ದಿನಗಳಂದು ಇತರೆ ಸಾರ್ವಜನಿಕರು ಮತ್ತು ಭಕ್ತಾದಿಗಳಿಗೂ ಪ್ರಸಾದ ಭೋಜನ ವ್ಯವಸ್ಥೆ ಮಾಡಲಾಗುತ್ತಿದೆ.

ನುರಿತ ಅಡುಗೆ ಸಿಬ್ಬಂದಿಗಳು, ಸ್ವಯಂ ಸೇವಕರು ಹಗಲಿರುಳು ಪ್ರಸಾದ ಭೋಜನ ತಯಾರಿಗೆ ಸೇವೆ ಸಲ್ಲಿಸುತ್ತಿದ್ದು ವಿವಿಧ ಬಗೆಯ  ರಾಶಿ ರಾಶಿ ತರಕಾರಿಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಸಂಗ್ರಹಿಸಿಟ್ಟಿರುವುದನ್ನು ನೋಡಿದರೆ ಇಲ್ಲಿಯ  ಅಡುಗೆ ಮನೆಯ ಶುಚಿತ್ವ, ರುಚಿ ಗುಣಮಟ್ಟ ಎತ್ತಿ ತೋರಿಸುವಂತಿದೆ. ಒಟ್ಟಾರೆಯಾಗಿ ಇಲ್ಲಿ ಭಾಂಗ್ರ ಉತ್ಸವ ಕಳೆ ಗಟ್ಟುತ್ತಿದ್ದು, ಭಕ್ತರನ್ನು ಕೈಬೀಸಿ ಕರೆಯುತ್ತಿದೆ. ತಾಯಿ ಮಹಾಮಾಯೆಯ ಕೃಪೆ ಇದ್ದರೆ ಶ್ರೀ ದೇವರ ದರ್ಶನ ಭಾಗ್ಯ ಮತ್ತು ಪ್ರಸಾದ ಸೇವನೆಯಿಂದ ತಮ್ಮೆಲ್ಲ ಕಷ್ಟ-ನಷ್ಟಗಳು ದೂರವಾಗಿ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಹಲವು ಭಕ್ತರಲ್ಲಿದ್ದರೆ,ಬೇಡಿದ ಭಕ್ತರೆಲ್ಲರ ಕಷ್ಟ ಪೊರೆವ ತಾಯಿ ಮಹಾ ಮಾಯೆ ಹಾಗೂ ಶ್ರೀ ಲಕ್ಷ್ಮಿ ನಾರಾಯಣ  ದೈವಾನುಗ್ರಹ ಸಕಲ ಭಕ್ತರ ಮೇಲೇರಲಿ ಎನ್ನುತ್ತಾರೆ ದೇವಸ್ಥಾನದ ಪ್ರಮುಖರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ  ಅಂಕೋಲಾ

Back to top button