Follow Us On

WhatsApp Group
Big NewsImportant
Trending

ಹೊರರಾಜ್ಯದ ಕಾರ್ಮಿಕರ ಅಸಭ್ಯ ವರ್ತನೆ ಆರೋಪ: ಅಕ್ಕಪಕ್ಕದ ನಿವಾಸಿಗಳಲ್ಲಿ ಶುರುವಾದ ಆತಂಕ

ರೆಸಾರ್ಟ್ ವಿರುದ್ಧ ಕೇಳಿಬಂದಿದೆ ಆಕ್ರೋಶ

ಕಾರವಾರ: ಅದು ಪ್ರವಾಸಿಗರ ಉಳಿಯುವಿಕೆಗಾಗಿ ಪ್ರಾರಂಭಿಸಿದ ರೆಸಾರ್ಟ್. ಆದರೆ ಸದ್ಯ ಆ ರೆಸಾರ್ಟ್ ಸುತ್ತಮುತ್ತ ಸ್ಥಳೀಯರು ಓಡಾಡುವುದಕ್ಕೂ ಭಯ ಪಡೋ ಪರಿಸ್ಥಿತಿ ನಿರ್ಮಾಣವಾಗಿದೆ. ರೆಸಾರ್ಟ್ ನಲ್ಲಿ ಪ್ರವಾಸಿಗರ ಉಳಿವಿಕೆಯ ಬದಲು ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಹೊರ ರಾಜ್ಯದ ಸುಮಾರು ಐನೂರಕ್ಕೂ ಅಧಿಕ ಕಾರ್ಮಿಕರು ನೆಲೆಯೂರಿದ್ದು, ಸುತ್ತಮುತ್ತಲಿನ ಜನರು ಅದರಲ್ಲೂ ಮಹಿಳೆಯರು ರಾತ್ರಿಯಾದರೆ ಓಡಾಡುವುದಕ್ಕೂ ಭಯಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವ ಆರೋಪ ಕೇಳಿ ಬಂದಿದ್ದು ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಬೈಕ್ ಕದ್ದವನನ್ನು 24 ತಾಸಿನಲ್ಲಿ ವಶಕ್ಕೆ ಪಡೆದ ಪೊಲೀಸರು | 22 ರ ಪೋರನ ಮೇಲೆ ದಾಖಲಾಗಿದೆಯಂತೆ ಒಟ್ಟೂ 21 ಕೇಸ್!

ರೆಸಾರ್ಟ್ ಅಂದರೆ ಸಾಮಾನ್ಯಾವಾಗಿ ನಿರ್ದಿಷ್ಟ ಪ್ರವಾಸಿಗರು ಉಳಿಯುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡದಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಸುಮಾರು ಐನೂರಕ್ಕೂ ಅಧಿಕ ಹೊರರಾಜ್ಯದ ಕಾರ್ಮಿಕರು ವಾಸ ಮಾಡುತ್ತಿದ್ದು ರೆಸಾರ್ಟ್ ಗೆ ಅನುಮತಿ ನೀಡಿದ ಜಾಗದಲ್ಲಿ ಕಾರ್ಮಿಕರು ಉಳಿಯಲು ಅವಕಾಶ ನೀಡಿದ್ದಾದ್ದರೂ ಯಾರು ಎನ್ನುವ ಪ್ರಶ್ನೆಯನ್ನು ಸ್ಥಳೀಯರು ಮಾಡುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಚಾಲ್ತಿಯಲ್ಲಿದ್ದ ರೆಸಾರ್ಟ್ ನಲ್ಲಿ ಕದಂಬ ನೌಕಾನಲೆ ಎರಡನೇ ಹಂತದ ವಿಸ್ತರಣೆ ಕಾಮಗಾರಿ ಗುತ್ತಿಗೆ ಪಡೆದ ಐಟಿಡಿಸಿ ಎನ್ನುವ ಕಂಪನಿಯ ಬಿಹಾರ ಸೇರಿದಂತೆ ಉತ್ತರ ಭಾರತದ ರಾಜ್ಯದ ಸುಮಾರು ಐನೂರಕ್ಕೂ ಅಧಿಕ ಕಾರ್ಮಿಕರನ್ನು ಉಳಿಸಲಾಗಿದೆ.

ರೆಸಾರ್ಟಿನ ಬೋರ್ಡನ್ನು ತೆಗೆದು ಕಂಪನಿಯ ಬೋರ್ಡನ್ನು ಹಚ್ಚಿ ಉಳಿಯಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಕಳೆದ ಒಂದು ವರ್ಷದಿಂದ ರೆಸಾರ್ಟ್ ಸುತ್ತಮುತ್ತ ಮಿನಿ ಬಿಹಾರ ಆದಂತಾಗಿದ್ದು ಸಂಜೆ ಸಮಯವಾದರೆ ಸುತ್ತಮುತ್ತಲಿನ ಮನೆಯವರು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವ ಆರೋಪ ಸ್ಥಳೀಯರದ್ದಾಗಿದೆ. ಕೆಲಸ ಮುಗಿಸಿಕೊಂಡು ಬರುವ ಕಾರ್ಮಿಕರು ಸುತ್ತಮುತ್ತಲಿನ ಮನೆಗಳ ಹೆಣ್ಣು ಮಕ್ಕಳು ಓಡಾಡುವಾಗ ಅಸಭ್ಯ ವರ್ತನೆ ತೋರುವ ಘಟನೆಗಳು ನಡೆದಿದ್ದು ಸ್ಥಳೀಯರು ಈ ಅವ್ಯವಸ್ಥೆ ವಿರುದ್ದ ಕಿಡಿಕಾರುತ್ತಿದ್ದಾರೆ.
ಇನ್ನು ರೆಸಾರ್ಟ್ ಇರುವ ಶಿರವಾಡ ಭಾಗದ ಕೆಲ ಮನೆಗಳಿಗೆ ಇಂದಿಗೂ ಶೌಚಾಲಯಗಳಿಲ್ಲ. ಬಹಿರ್ದಸೆಗೆ ಕಾಡಿನತ್ತ ಹೋಗುತ್ತಾರೆ.

ಶೌಚಾಲಯಕ್ಕೆ ಮಹಿಳೆಯರು ತೆರಳಿದ ಸಂಧರ್ಭದಲ್ಲಿ ಇದೇ ಹೊರ ರಾಜ್ಯದ ಕಾರ್ಮಿಕರು ಫೋಟೋ ಹೊಡೆದಿದ್ದಾರೆ ಎನ್ನುವ ಆರೋಪ ಕೆಲ ತಿಂಗಳ ಹಿಂದೆ ಕೇಳಿ ಬಂದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲನ್ನು ಸಹ ಏರಿದ್ದು ಕಾರ್ಮಿಕರಿಗೆ ಪೊಲೀಸರು ವಾರ್ನಿಂಗ್ ಸಹ ಮಾಡಿದ್ದರು ಎನ್ನಲಾಗಿದೆ. ಆದರೂ ಹೊರ ರಾಜ್ಯದ ಕಾರ್ಮಿಕರು ತಮ್ಮ ಅಸಭ್ಯ ವರ್ತನೆಗಳನ್ನು ಮುಂದುವರೆಸಿದ್ದಾರೆ ಎನ್ನಲಾಗಿದ್ದು, ಇದು ಸ್ಥಳೀಯರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡಿದೆ.

ರೆಸಾರ್ಟ್ ನಲ್ಲಿ ಪ್ರವಾಸೋದ್ಯಮ ಬದಲು ಕಾರ್ಮಿಕರನ್ನು ಉಳಿಸಿಕೊಳ್ಳಲು ರೆಸಾರ್ಟ್ ಮಾಲಿಕರು ಸ್ಥಳೀಯ ಪಂಚಾಯತ್ ನಲ್ಲಾಗಲಿ, ತಾಲೂಕು ಆಡಳಿತದಲ್ಲಾಗಲಿ ಅನುಮತಿ ಪಡೆಯದೇ ಹಾಗೇ ಉಳಿಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನುವ ಪ್ರಶ್ನೆ ಸ್ಥಳೀಯರದ್ದು. ಇನ್ನು ಈ ಬಗ್ಗೆ ಸ್ಥಳೀಯ ಶಾಸಕರ ಬಳಿ ಕೇಳಿದರೆ ಈಗಾಗಲೇ ಸಮಸ್ಯೆ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು ಪೊಲೀಸ್ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಮೇಲಾಗಿ ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎನ್ನುತ್ತಾರೆ.

ಕೊರೋನಾ ಸಂದರ್ಭದಲ್ಲಿ ರೆಸಾರ್ಟ್ ನಲ್ಲಿ ವ್ಯವಹಾರ ಇಲ್ಲದ ಕಾರಣ ರೆಸಾರ್ಟ್ ಮಾಲಿಕರು ಕಾರ್ಮಿಕರು ಉಳಿಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನುವುದು ಶಾಸಕರ ಅಭಿಪ್ರಾಯ. ಹೊರ ರಾಜ್ಯದ ನೂರಾರು ಕಾರ್ಮಿಕರನ್ನ ತಂದು ಹಳ್ಳಿಯೊಂದರಲ್ಲಿ ಇಟ್ಟರೇ ಜನರು ಹೇಗೆ ಇರಬೇಕು ಎನ್ನುವುದು ಸ್ಥಳೀಯರ ಆಗ್ರಹ. ಒಟ್ಟಿನಲ್ಲಿ ಪ್ರವಾಸಿಗರ ಬಳಕೆಗೆಂದು ಪ್ರಾರಂಭಿಸಿದ ರೆಸಾರ್ಟ್ ನಲ್ಲಿ ಐನೂರಕ್ಕೂ ಅಧಿಕ ಕಾರ್ಮಿಕರನ್ನ ಉಳಿಯಲು ಅವಕಾಶ ಮಾಡಿಕೊಟ್ಟಿದ್ದು ಮೇಲ್ನೋಟಕ್ಕೆ ಇದು ಅನಧಿಕೃತ ಎನ್ನುವುದು ಕಾಣುತ್ತಿದ್ದು ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನ ಕಾದು ನೋಡಬೇಕಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button