ಪದ್ಮಶ್ರೀ ಪುರಸ್ಕೃತ ಹೊನ್ನಳ್ಳಿಯ ತುಳಸಿ ಗೌಡರ ಸಮಸ್ಯೆಗೆ ಸ್ಪಂದಿಸಿದ ಶಾಸಕರು: ರಸ್ತೆ ಅಭಿವೃದ್ಧಿ ಮತ್ತು ಕಾಲು ಸಂಕ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ

ಅಂಕೋಲಾ: ಮಳೆಗಾಲದಲ್ಲಿ ಹಳ್ಳ ದಾಟಿ ತಮ್ಮ ಮನೆಗೆ ಹೋಗಲು ಪ್ರಯಾಸ ಪಡುತ್ತಾ ಬಂದಿದ್ದ ಪದ್ಮಶ್ರೀ ಪುರಸ್ಕೃತ ಹೊನ್ನಳ್ಳಿಯ ತುಳಸಿ ಗೌಡರ ಮನೆಗೆ ಹೋಗುವ ರಸ್ತೆ ಅಭಿವೃದ್ಧಿ ಮತ್ತು ಕಾಲು ಸಂಕ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಶಾಸಕಿ ರೂಪಾಲಿ ನಾಯ್ಕ, ಪದ್ಮಶ್ರೀ ಗೌಡರ ಕುಟುಂಬದವರಿಗೆ ಸಂತಸ ತಂದರು. ವೃಕ್ಷ ಮಾತೆ ಎಂದು ಗುರುತಿಸಿಕೊಂಡ, ಅಂಕೋಲಾ ತಾಲೂಕಿನ ಅಗಸೂರು ಗ್ರಾಮ ಪಂಚಾಯಿತ ವ್ಯಾಪ್ತಿಯ ಹೊನ್ನಳ್ಳಿಯ ಪದ್ಮಶ್ರೀ ತುಳಸಿ ಗೌಡ ಅವರು, ರಾ.ಹೆ 63 ರಂಚಿನ ತಮ್ಮ ಮನೆಗೆ ಹೋಗಿ ಬರುವಾಗ ಇಕ್ಕಟ್ಟಾದ ರಸ್ತೆ ಮತ್ತು ದಾರಿ ಮಧ್ಯೆ ಹಳ್ಳ ದಾಟಿ ಸಾಗಬೇಕಾದ ಅನಿವಾರ್ಯತೆ ಇತ್ತು. ಮತ್ತು ಪದ್ಮಶ್ರೀ ಗೌರವದಿಂದ ಮತ್ತಷ್ಟು ಖ್ಯಾತರಾದ ತುಳಸಿ ಗೌಡ ಅವರ ಮನೆಗೆ ಬಂದು ಹೋಗುವವರು ಸಹ ಹೆಚ್ಚಿದ್ದರಿಂದ ಬಹುತೇಕರು ಇಲ್ಲಿಯ ರಸ್ತೆ ಸಂಪರ್ಕ ವ್ಯವಸ್ಥೆ ಕುರಿತು ಮಾತನಾಡಿಕೊಳ್ಳುವಂತಾಗಿತ್ತು.

ಹಸೆ ಮಣೆ ಏರಿ ವರ್ಷವಾಗುವುದರೊಳಗೆ ಮಸಣದ ಹಾದಿ ತುಳಿದ ಮಹಿಳೆ| ಗಂಡ ಮತ್ತು ಗಂಡನ ಮನೆಯವರಿಂದಲೇ ಆತ್ಮಹತ್ಯೆಗೆ ಪ್ರೇರಣೆ ಆರೋಪ ?

ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ್ದ ಶಾಸಕಿ ರೂಪಾಲಿ ನಾಯ್ಕ,ಸುಗಮ ರಸ್ತೆ ಸಂಪರ್ಕ ವ್ಯವಸ್ಥೆಗೆ ತನ್ನದೇ ಯೋಚನೆ ಹಾಗೂ ಯೋಜನೆ ರೂಪಿಸಿದಂತಿತ್ತು. ಈ ನಡುವೆ ಮಳೆಗಾಲದ ಅವಧಿಯಾದ್ದರಿಂದ ಹಳ್ಳದ ನೀರಿನ ಹರಿವಿನ ಪ್ರಮಾಣ ಏರಿಕೆಯಾಗುವ ಸಂದರ್ಭಗಳಲ್ಲಿ ಪದ್ಮಶ್ರೀ ಪುರಸ್ಕೃತ ತುಳಸಜ್ಜಿ ಮತ್ತು ಅವಳ ಮೊಮ್ಮಕ್ಕಳು ಹಳ್ಳ ದಾಟಿ ಮನೆ ತಲುಪುವುದು,ಇಲ್ಲವೇ ಮನೆಯಿಂದ ಹೆದ್ದಾರಿ ಕಡೆ ಸಾಗುವುದು ತುಂಬಾ ಕಷ್ಟದಾಯಕ ಮತ್ತು ಅಪಾಯಕಾರಿಯಾಗಿತ್ತು.ತನ್ನ ಈ ಸಂಕಟವನ್ನು ಸ್ವತ: ಪದ್ಮಶ್ರೀ ತುಳಸಿ ಗೌಡ ರವರೇ ಸಾಮಾಜಿಕ ಜಾಲತಾಣಗಳ ಮೂಲಕ ಅಳಲು ರೂಪದಲ್ಲಿ ತೋಡಿಕೊಂಡಿದ್ದರು.

ಇದು ಹಲವೆಡೆ ವೈರಲ್ ಆಗಿ ಪದ್ಮಶ್ರೀ ಮನೆಗೆ ಮೂಲಸೌಕರ್ಯ ಅಭಿವೃದ್ಧಿ ಯಾರ ಹೊಣೆ ಎಂಬಷ್ಟರ ಮಟ್ಟಿಗೆ ಚರ್ಚೆಗೆ ಕಾರಣವಾದಂತಿತ್ತು.ಸಮಸ್ಯೆಗೆ ತುರ್ತು ಪರಿಹಾರ ಎಂಬoತೆ ಶಾಸಕಿ ರೂಪಾಲಿ ನಾಯ್ಕ ವಿಶೇಷ ಕಳಕಳಿಯಿಂದ,ಈ ಭಾಗದಲ್ಲಿ ಮರ ಮಟ್ಟು ಬಿದಿರು ಮತ್ತಿತರ ತಾತ್ಕಾಲಿಕ ಕಾಲು ಸಂಕ ನಿರ್ಮಿಸಿ ಓಡಾಟಕ್ಕೆ ಅನುಕೂಲ ಕಲ್ಪಿಸಲಾಗಿತ್ತು. ಈಗ ಮಳೆಗಾಲ ಕಳೆದಿದ್ದು ಪೂರ್ವ ನಿರ್ದಾರಿತ ಯೋಜನೆಯಂತೆ ಶಾಸಕಿ ರೂಪಾಲಿ ನಾಯ್ಕ, ಶಾಶ್ವತ ಕಾಲು ಸಂಕ ನಿರ್ಮಿಸಲು ಮತ್ತು ರಸ್ತೆ ಅಭಿವೃದ್ಧಿಗೆ ಒಟ್ಟಾರೆಯಾಗಿ ಅಂದಾಜು 40 ಲಕ್ಷ ರೂ ಕಾಮಗಾರಿಗೆ ಡಿಸೆಂಬರ್ 9 ರಂದು ಶುಕ್ರವಾರ ಶುಭ ಘಳಿಗೆಯಲ್ಲಿ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ತನ್ನ ಕ್ಷೇತ್ರ ವ್ಯಾಪ್ತಿಯ ಅಂಕೋಲಾ ತಾಲೂಕಿನ ಅದರಲ್ಲೂ ಮುಖ್ಯವಾಗಿ ಇಬ್ಬರು ಬಡ ಹಾಲಕ್ಕಿ ಮಹಿಳೆಯರು ಪದ್ಮಶ್ರೀ ಪುರಸ್ಕಾರ ಪಡೆದ ಸಾಧನೆ ನಾವೆಲ್ಲರೂ ಹೆಮ್ಮೆ ಪಡುವಂತದ್ದು. ಅವರ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಗುರುತಿಸಿ ಗೌರವಿಸಿದ್ದಾರೆ. ತುಳಸಜ್ಜಿ ಮನೆಗೆ ತೆರಳಲು ಮಳೆಗಾಲದ ಸಂದರ್ಭದಲ್ಲಿ ತೀವ್ರ ಸಮಸ್ಯೆ ಎದುರಾಗುತ್ತಿರುವುದನ್ನು ಕಂಡು ಕಾಲು ಸಂಕ ನಿರ್ಮಾಣ ಮಾಡಿಕೊಡುವ ಭರವಸೆಯಂತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪದ್ಮಶ್ರೀ ತುಳಸಿ ಗೌಡ ಮಾತನಾಡಿ ಕಾಲುಸಂಕ ನಿರ್ಮಾಣ ಕಾಮಗಾರಿ ಕುರಿತು ಸಂತಸ ವ್ಯಕ್ತಪಡಿಸಿದರು.

ಸ್ಥಳೀಯ ಗ್ರಾಪಂ ನ ಕೆಲ ಸದಸ್ಯರು, ಸಂಬoಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು,ಬಿಜೆಪಿ ಪಕ್ಷದ ಹಿರಿಕಿರಿಯ ಮುಖಂಡರು,ಇತರೆ ಗಣ್ಯರು,ಊರ ನಾಗರಿಕರು ಪಾಲ್ಗೊಂಡಿದ್ದರು. ತಮ್ಮ ಮನೆಗೆ ಸಾಗು ರಸ್ತೆ ಅಭಿವೃದ್ಧಿ ಮತ್ತು ಕಾಲು ಸಂಕ ನಿರ್ಮಾಣಕ್ಕೆ ನುಡಿದಂತೆ ನಡೆದು ಅನುದಾನ ಒದಗಿಸಿ ಕೊಟ್ಟ ಶಾಸಕಿ ರೂಪಾಲಿ ನಾಯ್ಕ ಅವರನ್ನು ಪದ್ಮಶ್ರೀ ತುಳಿಸಿ ಗೌಡ, ಮೊಮ್ಮಗ ಶೇಖರ ಗೌಡ ಅವರು ತಮ್ಮ ಕುಟುಂಬದ ಪರವಾಗಿ ಸನ್ಮಾನಿಸಿ ಗೌರವ ಹಾಗೂ ಕೃತಜ್ಞತೆ ಸಲ್ಲಿಸಿ , ಪ್ರೀತಿ ಹಾಗೂ ಸಂತಸ ಹಂಚಿಕೊoಡರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version