Big NewsImportant
Trending

18 ದೇವಸ್ಥಾನಗಳಲ್ಲಿ ಕಳ್ಳತನ: ಖರ್ತರ್ನಾಕ್ ಕಳ್ಳರು ಅಂದರ್: ಪಾಠ ಮಾಡಬೇಕಾದ ಶಿಕ್ಷಕನೇ ಕಳ್ಳತನಕ್ಕೆ ಇಳಿದಿದ್ದ!

ಅಂಕೋಲಾ:ಕಳೆದ 3-4 ವರ್ಷಗಳಿಂದ ರಾಜ್ಯದ ವಿವಿಧ ಜಿಲ್ಲೆಗಳ ದೇವಸ್ಥಾನಗಳನ್ನು ಕಳ್ಳತನ ಮಾಡುತ್ತ ಈ ವರೆಗೆ ಎಲ್ಲಿಯೂ ಸಿಕ್ಕಿ ಬೀಳದೇ ಶೋಕಿ ಜೀವನ ನಡೆಸಲು ಮುಂದಾಗಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಉತ್ತರ ಕನ್ನಡ ಜಿಲ್ಲಾ ಪೋಲೀಸರು ಯಶಸ್ವಿಯಾಗಿದ್ದು, ಆರೋಪಿಗಳಿಂದ,ಕಳ್ಳತನ ಕೃತ್ಯಕ್ಕೆ ಬಳಸುತ್ತಿದ್ದ ಐಷಾರಾಮಿ ಕಾರು ಸಹಿತ  ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.   

ಖಾಸಗಿ ಪಿ.ಯು ಕಾಲೇಜ್ ವಿದ್ಯಾರ್ಥಿ ಅಕಾಲಿಕ ನಿಧನ: ಶೈಕ್ಷಣಿಕ ಪ್ರವಾಸ ಮುಗಿಸಿ ಬಂದಿದ್ದವ ಕೊನೆಯುಸಿರೆಳೆದಿದ್ದೆಲ್ಲಿ?

ಕಳೆದ ಮೂರು ನಾಲ್ಕು ವರ್ಷಗಳಿಂದೀಚೆಗೆ ಹಾವೇರಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲಾ  ವ್ಯಾಪ್ತಿಯ ಹಲವು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ  ದೇವಸ್ಥಾನ ಕಳ್ಳತನ ಪ್ರಕರಣಗಳು ನಡೆಯುತ್ತಾ ಬಂದಿದ್ದು, ಹಲವು ಪ್ರಕರಣಗಳಲ್ಲಿ ಅದಾವುದೋ ಕಳ್ಳರು ಈ ಕೃತ್ಯ ಮಾಡುತ್ತಾ ಬಂದಿದ್ದರೂ,ಪೊಲೀಸರಿಗೆ ಅವರನ್ನು ಪತ್ತೆ ಹಚ್ಚುವುದು ಈವರೆಗೂ ಸಾಧ್ಯವಾಗಿರಲಿಲ್ಲ. ಕಳೆದ ಕೆಲ ದಿನಗಳ ಹಿಂದಷ್ಟೇ ಅಂಕೋಲಾ ತಾಲೂಕಿನ ಕಲ್ಲೇಶ್ವರ ದ ಉಮಾಮಹೇಶ್ವರ ದೇವಸ್ಥಾನ,ಹೆಗ್ಗಾರದ ಗಣಪತಿ ದೇವಸ್ಥಾನ ಹಾಗೂ ಯಲ್ಲಾಪುರ ತಾಲೂಕಿನ ದೇವಸ್ಥಾನಗಳ ಸರಣಿಗಳ್ಳತನ ನಡೆದ ಕುರಿತು ಆಯಾ ಠಾಣಾ  ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂಕೋಲಾದಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ,ನೀಲಿ ಕಾರಿನಲ್ಲಿ ಬಂದವರಾರೋ ಕಳ್ಳತನ ಮಾಡಿರುವ ಸಾಧ್ಯತೆಗಳ ಕುರಿತು ವಿಸ್ಮಯ ವಾಹಿನಿಯಲ್ಲಿ ವಿಸ್ತೃತ ವರದಿ ಪ್ರಕಟಿಸಲಾಗಿತ್ತು.

ಅದೇ ದಿನ ಯಲ್ಲಾಪುರ ಠಾಣಾ ವ್ಯಾಪ್ತಿಯಲ್ಲಿಯೂ  ನಡೆದ ದೇವಸ್ಥಾನಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ,ಕಳ್ಳರ ಜಾಡು ಪತ್ತೆಹಚ್ಚಲು  ಎಸ್ಪಿ ವಿಷ್ಣುವರ್ಧನ ಮತ್ತಿತರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿಕೊಂಡ  ಪೊಲೀಸರು ಇಬ್ಬರು ಖತರ್ನಾಕ ಕಳ್ಳರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಲಿಂಗದೇವರಕೊಪ್ಪ ನಿವಾಸಿ ವಸಂತ ಕುಮಾರ ಯಾನೆ ವಸಂತ ತಂದೆ ಶಿವಪ್ಪ ತಂಬಾಕದ ಎಂಬಾತ ಮೊದಲ ಆರೋಪಿಯಾಗಿದ್ದು,ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಗುಡ್ಡದ ಬೇವಿನ ಹಳ್ಳಿ ನಿವಾಸಿ ಸಲೀಂ ಜಮಾಲಸಾಬ ಕಮ್ಮಾರ ಎನ್ನುವವ ಎರಡನೇ ಆರೋಪಿಯಾಗಿರುತ್ತಾನೆ.

ಮೊದಲ ಆರೋಪಿ 40 ವಯಸ್ಸಿನ ವಸಂತ್ ಕುಮಾರ್ ಪ್ರಾಥಮಿಕ ಶಾಲಾ ಶಿಕ್ಷಕ ಎನ್ನಲಾಗಿದ್ದು,ಎರಡನೇ ಆರೋಪಿ 28 ವರ್ಷದ ಸಲೀಂ ಎಂಬಾತ ಹಮಾಲಿ ಹಾಗೂ ಚಾಲಕ ವೃತ್ತಿಯ ವ ಎನ್ನಲಾಗಿದ್ದು ಇವರೀರ್ವರೂ ಸೇರಿಕೊಂಡು ಶೋಕಿ ಜೀವನಕ್ಕಾಗಿ ದೇವಸ್ಥಾನ ಕಳ್ಳತನ ಮಾಡುವ ಅಡ್ಡ ಕಸುಬು ಮಾಡುತ್ತ ಬಂದಿದ್ದು ಕಳೆದ ಮೂರು ನಾಲ್ಕು ವರ್ಷಗಳಿಂದ ಎಲ್ಲಿಯೂ ಸಿಕ್ಕಿಕೊಳ್ಳದೆ ತಮ್ಮ ಚಾಲಾಕಿತನ ತೋರುತ್ತಿದ್ದರು ಎನ್ನಲಾಗಿದೆ.

ಈ ವರೆಗೆ ಇವರೀರ್ವರೂ ಸೇರಿಕೊಂಡು  ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ , ಬನವಾಸಿ, ಶಿರಸಿ ಗ್ರಾಮೀಣ , ಅಂಕೋಲಾ ಮತ್ತು  ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆ, ನಗರ ಠಾಣೆ, ಹೊಸನಗರ, ಮತ್ತು ಹಾವೇರಿ ಜಿಲ್ಲೆಯ ಗ್ರಾಮೀಣ ಠಾಣೆ, ಹಂಸಭಾವಿ ಹಿರೇಕೇರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ವರೆಗೆ ಸುಮಾರು 18 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಆರೋಪಿತರು ಕಳ್ಳತನ ಕೃತ್ಯಕ್ಕೆ ಬಳಸುತ್ತಿದ್ದ ಮಾರುತಿ ನೆಕ್ಸಾ ಕಂಪನಿಯ ಎಸ್ ಕ್ರಾಸ್ ಕಾರು, ಬಜಾಜ್ ಪ್ಲಾಟಿನಾ ಕಂಪನಿಯ ಮೋಟಾರ್ ಸೈಕಲ್ ವಶಕ್ಕೆ ಪಡೆದ ಪೊಲೀಸರು,ಆರೋಪಿತರಿಂದ  ಎರಡು ಲಕ್ಷ ಇಪ್ಪತ್ತೊಂಬತ್ತು ಸಾವಿರ ರೂ ನಗದು. ವಿವಿಧ ದೇವಸ್ಥಾನಗಳಲ್ಲಿ ಕಳುವು ಮಾಡಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ಗಂಟೆಗಳು, ಹಿತ್ತಾಳೆ ಹಾಗೂ ತಾಮ್ರದ ಪೂಜಾ ಸಾಮಗ್ರಿಗಳು, ಕಾಣಿಕೆ ಹುಂಡಿ ಹಾಗೂ ಸಿಸಿಟಿವಿ ಡಿ ವಿ ಆರ್ ಸೆಟ್ ಸೇರಿದಂತೆ ಸ್ವತ್ತುಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಯಲ್ಲಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಯಶಸ್ವಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ದೇವಸ್ಥಾನ ಕಳುವು ಮಾಡುತ್ತ ಐಷಾರಾಮಿ ಜೀವನದ ಕನಸು ಕಾಣುತ್ತಿದ್ದ ಅಂತರ್ ಜಿಲ್ಲಾ ಕಳ್ಳರು ಅಂತೂ ಇಂತೂ ಪೊಲೀಸರ ಬಲೆಗೆ ಬೀಳುವಂತಾಗಿದ್ದು,ಕಾನೂನಿನ ಕುಣಿಕೆಯಲ್ಲಿ ಸಿಲುಕಿ ಅಲ್ಲಿಯೇ ಜಪ ಮಾಡುವಂತಾಗಿರುವುದು ,ವಿವಿಧ ದೇವಸ್ಥಾನಗಳ ಹಲವು ಭಕ್ತರ ನೆಮ್ಮದಿಗೆ ಕಾರಣವಾಗಿದೆ.

ದೇವಸ್ಥಾನಗಳಲ್ಲಿ ಉತ್ತಮ ಗುಣಮಟ್ಟದ ಸಿಸಿ ಕ್ಯಾಮೆರಾ ಅಳವಡಿಕೆ,ಕಾಣಿಕೆ ಹುಂಡಿಗಳಲ್ಲಿ ಹೆಚ್ಚಿನ ಹಣ ಇಡದಂತೆ ಕ್ರಮ ಕೈಗೊಳ್ಳುವುದು,ದೇವಸ್ಥಾನದ ಬೀಗ ಹಾಕಿ ಹೊರ ಹೋಗುವಾಗ ದೇವರ ಮೈ ಮೇಲಿನ ಬೆಲೆಬಾಳುವ ಆಭರಣಗಳನ್ನು ಭದ್ರವಾಗಿ ತೆಗೆದಿರಿಸುವುದು,ದೇವಸ್ಥಾನದ ಸುತ್ತಮುತ್ತ ರಾತ್ರಿ ವೇಳೆ ಲೈಟಿನ ವ್ಯವಸ್ಥೆ ಇತರ ಸುರಕ್ಷತಾ ಕ್ರಮಗಳನ್ನು ಕೈಗೊಂಡು ದೇವಸ್ಥಾನದಲ್ಲಿ ಕಳ್ಳತನ ವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಪೊಲೀಸರು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸಂಬಂಧಿಸಿದ ದೇವಸ್ಥಾನ ಆಡಳಿತ ಮಂಡಳಿಗಳು ಈ ಕುರಿತು ಎಚ್ಚೆತ್ತುಕೊಂಡು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ 

ವಿಸ್ಮಯ ನ್ಯೂಸ್ ವಿಲಾಸ  ನಾಯಕ ಅಂಕೋಲಾ

Back to top button