ಬಾಂಬ್ ಬೆದರಿಕೆಯೊಡ್ಡಿ ಭಟ್ಕಳ ಪೊಲೀಸ ಠಾಣೆಗೆ ಹುಸಿ ಪತ್ರ; ಚೆನ್ನೈನಲ್ಲಿ ಆರೋಪಿ ಸೆರೆ

ಭಟ್ಕಳ: ಹೊಸ ವರ್ಷಾಚರಣೆ ವೇಳೆ ಭಟ್ಕಳದಲ್ಲಿ ಸ್ಪೋಟ ಮಾಡೋದಾಗಿ ಪೊಲೀಸ್ ಠಾಣೆಗೆ ಬೆದರಿಕೆ ಪತ್ರ ಬರೆದಿರುವ ವಿಚಾರವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಚೆನ್ನೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸ್ಪೋಟ ಮಾಡೋದಾಗಿ “ನೆಕ್ಸ್ಟ್ ಟಾರ್ಗೆಟ್ ಡಿಸೆಂಬರ್ 25 & ಹ್ಯಾಪಿ ನ್ಯೂ ಇಯರ್ 2023” ಎಂದು ಉರ್ದು ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಬರೆದ ಪೋಸ್ಟ್‌ಕಾರ್ಡ್ ನ್ನು ಭಟ್ಕಳ ಠಾಣೆಗೆ ತಲುಪಿತ್ತು. ಸೂಕ್ಷ್ಮ ವಿಷಯವಾಗಿದ್ದರಿಂದ ಬಹಿರಂಗಪಡಿಸದೇ ಪೊಲೀಸರು ತನಿಖೆ ನಡೆಸಿದ್ದರು.

ಇನ್ನು ಈ ಬಗ್ಗೆ ಚೆನ್ನೈ ಪೊಲೀಸರನ್ನು ವಿಚಾರಿಸಿದಾಗ ಅಲ್ಲಿಯೂ ಇಂತಹುದೇ ಬೆದರಿಕೆ ಪತ್ರ ಬಂದಿರುವುದು ಬೆಳಕಿಗೆ ಬಂದಿದೆ. ಲ್ಯಾಪ್‌ಟಾಪ್ ಕಳ್ಳತನ ಮಾಡಿದ ಆರೋಪಿಯೋರ್ವ ಅದನ್ನು ಅಂಗಡಿಗೆ ಮಾರಲು ಮುಂದಾಗಿ ಸಿಕ್ಕಿಬಿದ್ದಾಗ ಕಳ್ಳತನದ ವಿಷಯ ಮುಚ್ಚಿಡಲು ಈ ರಿತಿ ಹುಸಿ ಬೆದರಿಕೆ ಪತ್ರ ಬರೆದಿರುವುದು ವಿಚಾರಣೆ ವೇಳೆ ಗೊತ್ತಾಗಿದೆ.

ಲ್ಯಾಪ್‌ಟಾಪ್ ಮಾರಾಟ ಮಾಡಲು ತೆರಳಿದ್ದ ಅಂಗಡಿ ಮಾಲೀಕನ ನಂಬರ್ ಹಾಕಿ ಪತ್ರ ಬರೆದಿದ್ದು ಪತ್ರ ಆಧರಿಸಿ ತನಿಖೆ ನಡೆಸಿದ್ದ ಚೆನ್ನೈ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹೊಸಪೇಟೆ ಮೂಲದ ಹನುಮಂತಪ್ಪ ಹುಸಿ ಬೆದರಿಕೆ ಪತ್ರ ಬರೆದಿರುವ ಕಳ್ಳನಾಗಿದ್ದಾನೆ.

ಮಂಗಳೂರಿನ ಸುಬ್ರಹ್ಮಣ್ಯದಿಂದ ಪೋಸ್ಟ್ ಮಾಡಿದ್ದ ಎನ್ನಲಾಗಿದ್ದು ಇದೀಗ ಕಳ್ಳನನ್ನು ಬಾಡಿ ವಾರಂಟ್ ಮೇಲೆ  ಭಟ್ಕಳಕ್ಕೆ ತರಲು ಪೊಲೀಸರು ತಯಾರಿ ನಡೆಸಿದ್ದಾರೆ.

ಉದಯ್ ಎಸ್ ನಾಯ್ಜ ಭಟ್ಕಳ

Exit mobile version