ಕಾರವಾರ: ಅರಣ್ಯ ಹಾಗೂ ಬಂದರು ನಿರಾಶ್ರಿತರ ಜಾಗದಲ್ಲಿ ಸುಮಾರು 40 ವರ್ಷದಿಂದ ವಾಸಮಾಡುತ್ತಿರುವ ನಿವಾಸಿಗಳಿಗೆ ಜಾಗವನ್ನು ಸಕ್ರಮ ಮಾಡಿಕೊಡಬೇಕು ಎಂದು ಆಗ್ರಹಿಸಿ ಶಿರವಾಡ ಭಾಗದ ಜನರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಕಾರವಾರದ ಶಿರವಾಡದಲ್ಲಿ ಸುಮಾರು 35 ರಿಂದ 40 ವರ್ಷಗಳಿಂದ 200 ಕ್ಕೂ ಅಧಿಕ ಕುಟುಂಬಗಳು ನಿರಾಶ್ರಿತರ ಜಾಗದಲ್ಲಿ ಹಾಗೂ ಅರಣ್ಯ ಜಾಗದಲ್ಲಿ ವಾಸ ಮಾಡುತ್ತಿದ್ದಾರೆ. ಅತಿಕ್ರಮಣ ಜಾಗದಲ್ಲಿ ವಾಸಮಾಡುತ್ತಿರುವ ಕಾರಣ ಇಲ್ಲಿನ ಜನರು ಕನಿಷ್ಠ ಮೂಲಭೂತ ಸೌಕರ್ಯಗಳಿಗೆ ವಂಚನೆಯಾಗುತ್ತಿದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಈಗಾಗಲೇ ಅತಿಕ್ರಮಣ ಸಕ್ರಮ ಮಾಡಿ ಕೊಡುವ ಕುರಿತು ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ನೀಡಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಓ ಅವರೊಂದಿಗೆ ಕೆಲವು ಬಾರಿ ಚರ್ಚೆ ಕೂಡ ಮಾಡಲಾಗಿದೆ. ಇದರ ಬಗ್ಗೆ ಪರಿಹಾರ ಕೊಡಿಸುವುದಾಗಿ ಮೌಖಿಕವಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಸೂಕ್ತ ಪರಿಹಾರ ನೀಡಿಲ್ಲ ಎಂದು ದೂರಿದರು.
ಇಲ್ಲಿ ವಾಸ ಮಾಡುತ್ತಿರುವ, ಕುಟುಂಬಗಳಿಗೆ ಪರ್ಯಾಯ ಜಾಗಕ್ಕೆ ಸ್ಥಳಾಂತರಿಸಿದರೂ ಕೂಡ ಹೋಗಲು ಸಿದ್ಧರಿದ್ದು ಅಥವಾ ಈಗಿರೋ ಸ್ಥಳದಲ್ಲಿಯೇ ಸಕ್ರಮ ಮಾಡಿಕೊಟ್ಟರೂ ಸಹ ವಾಸಿಸುತ್ತಾರೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದೆ ಇದ್ದಲ್ಲಿ ಮುಂದಿನ ವಾರ ಶಿರವಾಡದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ವೇಳೆ ಎಲಿಷಾ ಎಲಕಪಾಟಿ, ಯಲ್ಲಪ್ಪ ವಡ್ಡರ್, ಶಂಕರ್ ವಡ್ಡರ್, ನರಸಿಂಹ ನಾಯ್ಕ, ಜಾಫರ್ ಕರ್ಜಗಿ, ಗೋಪಾಲ್, ಶಾಂತಾ ಆಚಾರಿ ಇದ್ದರು.
ವಿಸ್ಮಯ ನ್ಯೂಸ್ ಕಾರವಾರ