ಅಂಕೋಲಾ: ತಾಲೂಕಿನ ಗಡಿ ಪ್ರದೇಶದಲ್ಲಿರುವ ಗುಡ್ಠಗಾಡು ಗ್ರಾಮ ಎನಿಸಿರುವ ಬ್ರಹ್ಮೂರಿನಲ್ಲಿ ಶಾಲಾ ವಿದ್ಯಾರ್ಥಿಯ ಪಾಲಕರೊಬ್ಬರ ಸಂಕಲ್ಪ ಮತ್ತು ವಿಶೇಷ ಕಲೆಯಿಂದಾಗಿ ಶಾಲಾ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಭವ್ಯ ಮೂರ್ತಿಯ ಸ್ಥಾಪನೆ ಮೂಲಕ ಜನವರಿ 12 ರ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ವಿಶೇಷ ಮೆರಗು ಪಡೆದುಕೊಳ್ಳಲಿದೆ.
ಬ್ರಹ್ಮೂರಿನ – ಕಬಗಾಲ ಶಾಲೆಯಲ್ಲಿ ಓದುತ್ತಿರುವ ತಿಲಕ್ ಹೆಗಡೆ ಎನ್ನುವ ವಿದ್ಯಾರ್ಥಿಯ ತಂದೆ ರಾಘವೇಂದ್ರ ಹೆಗಡೆ ತಮ್ಮೂರಿನ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಮೂರ್ತಿಯನ್ನು ಸ್ಥಾಪಿಸಬೇಕೆಂಬ ಕನಸು ಹೊತ್ತು ಅದನ್ನು ಈಗ ನನಸಾಗಿಸಿದ್ದಾರೆ. ಜನೆವರಿ 12 ರ ಗುರುವಾರದಂದು ಸ್ವಾಮಿ ವಿವೇಕಾನಂದ ಜಯಂತಿಯ ದಿನದಂದು ಕಬಗಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಿಶ್ವ ಚೇತನ, ಮಹಾನ್ ದಾರ್ಶನಿಕ, ಸ್ವಾಮಿ ವಿವೇಕಾನಂದರ ಸುಂದರ ಮೂರ್ತಿ ಅನಾವರಣಗೊಳ್ಳಲಿದೆ.
ಕೃಷಿಕರು, ಯಕ್ಷಗಾನ ಕಲಾವಿದರೂ ಆಗಿರುವ ರಾಘವೇಂದ್ರ ಹೆಗಡೆ ಸುಮಾರು ಆರೇಳು ತಿಂಗಳುಗಳ ಕಾಲ ಸತತ ಪರಿಶ್ರಮ ವಹಿಸಿ ಅಂದಾಜು 9 ಅಡಿ ಎತ್ತರದ ಬೃಹತ್ತ ಮೂರ್ತಿ ನಿರ್ಮಾಣ ಕೆಲಸ ಮಾಡಿದ್ದು , ಪೀಠದಿಂದ ಹಿಡಿದು ಮೇಲ್ಚಾವಣಿವರೆಗೆ ಸುಮಾರು 18 ಪೂಟ್ ಎತ್ತರವಿದ್ದು,ಇದಕ್ಕೆ ಅಂದಾಜು ರೂ 1.5 ಲಕ್ಷ ವಿನಿಯೋಗಿಸಿದ್ದಾರೆ ಎನ್ನಲಾಗಿದೆ.
ಹೆಗಡೆಯವರ ಈ ಮಹತ್ಕಾರ್ಯದ ಹಿಂದೆ ಕೆಲವು ಹಿತೈಷಿಗಳು ಅಲ್ಪ-ಸ್ವಲ್ಪ ಸಹಾಯ ಸಹಕಾರ ನೀಡಿ ಬೆನ್ನುತಟ್ಟಿದ್ದಾರೆ. ರಾಘವೇಂದ್ರ ಹೆಗಡೆ ಅವರ
ಕೈಚಳಕದಿಂದ ನಿರ್ಮಿಸಲ್ಪಟ್ಟ ಸ್ವಾಮಿ ವಿವೇಕಾನಂದ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಮೂರ್ತಿ ಕಳೆ ಜೀವಂತಿಕೆ ಪಡೆದುಕೊಂಡತಿದೆ. ಕಬಗಾಲ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಪ್ರವೇಶ ದ್ವಾರದ ಬಳಿ ಅಗಲವಾದ ಆಕರ್ಷಕ ಪೀಠದ ಮೇಲೆ ಸ್ಥಾಪಿಸಲಾಗಿರುವ ಈ ಮೂರ್ತಿಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಊರ ಗಣ್ಯರು ಹಾಗೂ ಶಿಕ್ಷಕ ಹಾಗೂ ವಿದ್ಯಾರ್ಥಿ ವೃಂದದ ಉಪಸ್ಥಿತಿಯಲ್ಲಿ ವಿವೇಕಾನಂದ ಜಯಂತಿಯಂದು ವಿದ್ಯುಕ್ತವಾಗಿ ಅನಾವರಣಗೊಳಿಸಲಿದ್ದಾರೆ. ಈ ಕಲಾವಿದನ ಬಗ್ಗೆ ನಮ್ಮದೊಂದು ಮೆಚ್ಚುಗೆ ಸೂಚಿಸಿ, ವಿವೇಕಾನಂದರ ಜನ್ಮ ದಿನಾಚರಣೆಯನ್ನು ಸಂಭ್ರಮಿಸೋಣ
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ