
ಅಂಕೋಲಾ: ತಾಲೂಕಿನ ಹಾರವಾಡಕ್ಕೆ ಬೆಳಿಗ್ಗೆ ಸರಿಯಾದ ಸಮಯಕ್ಕೆ ಬಸ್ ಬಾರದ ಕಾರಣ ಶಾಲಾ ಕಾಲೇಜು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಸಮಸ್ಯೆ ಎದುರಿಸುವಂತಾಗಿದೆ ಎಂದು ಆರೋಪಿಸಿ ಹಾರವಾಡ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರುಹಾರವಾಡ ಶಾಲೆ ಎದುರು ಬಸ್ ತಡೆ ಹಿಡಿದು ಪ್ರತಿಭಟನೆ ನಡೆಸಿದರು.

ಅಂಕೋಲಾದಿಂದ ಹಾರವಾಡಕ್ಕೆ ಬಂದು ಅಲ್ಲಿಂದ ಕಾರವಾರಕ್ಕೆ ತೆರಳುವ ಅಂಕೋಲಾ ಘಟಕದ ಬಸ್ಸು ಬೆಳಿಗ್ಗೆ 8.30 ಕ್ಕೆ ಹಾರವಾಡ ತಲುಪುವಂತೆ ವ್ಯವಸ್ಥೆ ಮಾಡಬೇಕು ಎಂದು ಈ ಹಿಂದಿನಿಂದಲೂ ಆಗ್ರಹಿಸುತ್ತ ಬರಲಾಗಿದ್ದು ಗ್ರಾಮ ಸಭೆಯಲ್ಲಿ ಸಹ ಠರಾವು ಮಾಡಿ ಅಂಕೋಲಾ ಘಟಕಕ್ಕೆ ಮೌಖಿಕ ಮನವಿ ಮಾಡಲಾಗಿತ್ತು, ಶಾಸಕಿ ರೂಪಾಲಿ ನಾಯ್ಕ ಸಹ ಅಂಕೋಲಾ ಘಟಕದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಬೆಳಿಗ್ಗೆ 8.30 ಕ್ಕೆ ಬಸ್ಸು ಹಾರವಾಡ ತಲುಪುವ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದರು ಶಾಸಕರ ಮಾತಿಗೂ ಮಾನ್ಯತೆ ನೀಡದ ಅಧಿಕಾರಿಗಳು ಯಥಾಪ್ರಕಾರ 9 ಗಂಟೆಗೆ ಹಾರವಾಡ ತಲುಪುವಂತೆ ಬಸ್ ಬಿಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಘಟಕ ವ್ಯವಸ್ಥಾಪಕರು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಸ್ಥಳಕ್ಕೆ ಭೇಟಿ ನೀಡಿದ ಘಟಕ ವ್ಯವಸ್ಥಾಪಕಿ ಚೈತನ್ಯಾ ಅವರಿಗೆ ಮನವಿ ನೀಡಿಸಾರಿಗೆ ಸಂಸ್ಥೆ ಬಸ್ ಬೆಳಿಗ್ಗೆ 8.30 ಕ್ಕೆ ಹಾರವಾಡ ತಲುಪುವಂತೆ ವ್ಯವಸ್ಥೆ ಕಲ್ಪಿಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಂಸ್ಥೆಗಳಿಗೆ ಸರಿಯಾದ ಸಮಯಕ್ಕೆ ತಲುಪಲು ಅನುಕೂಲ ಕಲ್ಪಿಸಬೇಕು
ಎಂದು ಆಗ್ರಹಿಸಿದರು.

ಹಾರವಾಡ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಟಾಕೇಕರ, ಉಪಾಧ್ಯಕ್ಷೆ ಅನಿತಾ ನಾಯ್ಕ, ಮಾಜಿ ಅಧ್ಯಕ್ಷ ಶ್ರೀಕಾಂತ ನಾಯ್ಕ ಪ್ರಮುಖರುಗಳಾದ ಸಂತೋಷ ದುರ್ಗೇಕರ್, ಸಂಜು ಬಾಂದೇಕರ, ಶೀಲಾ ಹಾರ್ವಾಡೇಕರ, ಮೋಹಿನಿ ಗೌಡ ಮೊದಲಾದವರು ಪಾಲ್ಗೊಂಡಿದ್ದರು.ಪಿ.ಎಸ್. ಐ ಮಹಾಂತೇಶ ವಾಲ್ಮೀಕಿ ಮತ್ತು ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ