ಕಾರವಾರ: ಸಾಗವಾನಿ ಹಾಗು ಸೀಸಂ ಕಟ್ಟಿಗೆಯನ್ನ ಮನೆಯಲ್ಲಿ ದಾಸ್ತಾನು ಇಟ್ಟಿದ್ದಾನೆಂದು ಆರೋಪಿಸಿ ಅರಣ್ಯ ಇಲಾಖೆಯ ಸಿಬ್ಬಂದಿಯೇ ಅರಣ್ಯ ವೀಕ್ಷಕನ ಮೇಲೆ ಹಲ್ಲೆ ನಡೆಸಿರುವ ಆರೋಪ ನಗರದಲ್ಲಿ ಕೇಳಿಬಂದಿದೆ. ತಾಲೂಕಿನ ಬಾರಗದ್ದೆಯ ರಮೇಶ್ ಹಲ್ಲೆಗೊಳಗಾದ ಅರಣ್ಯ ವೀಕ್ಷಕ ಎಂದು ತಿಳಿದುಬಂದಿದೆ. ಈತ ಕಳೆದ ಏಳು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ.ಎರಡು ದಿನಗಳ ಹಿಂದೆ ಕರೆ ಮಾಡಿದ್ದ ಅರಣ್ಯ ರಕ್ಷಕರೊಬ್ಬರು, ಸುಳಗೇರಿಯ ಬಳಿ ಕೆಲಸವಿದೆ ಎಂದು ಕರೆ ಮಾಡಿ ಕರೆಯಿಸಿಕೊಂಡಿದ್ದರoತೆ.
ಅಲ್ಲಿ ಮೊಬೈಲ್‌ಗಳನ್ನ ಕಸಿದುಕೊಂಡು, ನಿಮ್ಮ ಮನೆಯಲ್ಲಿ ಸಾಗವಾನಿ ಮತ್ತು ಸೀಸಂ ಕಟ್ಟಿಗೆ ಇದೆ, ಕೂಡಲೇ ಪರಿಶೀಲನೆ ನಡೆಸಬೇಕು ಎಂದು ಹೇಳಿದ್ದರಂತೆ. ಇದಕ್ಕೆ ಸರಿ, ಪರಿಶೀಲನೆ ಮಾಡಿ ಎಂದಿದ್ದಕ್ಕೆ ನೀನು ಜಾಸ್ತಿ ಮಾಡುತ್ತೀಯಾ ಎಂದು ನಾಲ್ಕೈದು ಸಿಬ್ಬಂದಿ ಸೇರಿಕೊಂಡು ರಮೇಶನ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಹಲ್ಲೆಗೊಳಗಾದ ರಮೇಶ್‌ಗೆ ಎರಡು ದಿನಗಳಿಂದಲೂ ಹೊರ ಹೋಗಲು ಬಿಟ್ಟಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಬಳಿಕ ಹೇಗೋ ತಪ್ಪಿಸಿಕೊಂಡು ಜಿಲ್ಲಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಐದಾರು ಬಾರಿ ಬೆತ್ತದಿಂದ ಹಲ್ಲೆ ಮಾಡಿದ್ದಾರೆ ಎಂದು ರಮೇಶ್ ಆರೋಪಿಸಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ