Follow Us On

WhatsApp Group
Important
Trending

ಕೋಮು ಸೂಕ್ಷ್ಮ ಪ್ರದೇಶದಲ್ಲಿ ಅಭಿವೃದ್ಧಿ ವಿರೋಧಿಸಿ ಪ್ರತಿಭಟನೆ : ಪುರಸಭೆ ಅಳವಡಿಸಿದ್ದ ಇಂಟರ್ ಲಾಕ್ ಕಿತ್ತೆಸೆದ ಪ್ರತಿಭಟನಾಕಾರರು

ಹಳಿಯಾಳ: ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಹಳಿಯಾಳ ಪುರಸಭೆಯಿಂದ ಅಭಿವೃದ್ಧಿ ಕಾಮಗಾರಿ ನಡೆಸಿರುವುದನ್ನು ವಿರೋಧಿ ಪ್ರತಿಭಟನೆ ನಡೆಸಿದ ಹಿಂದೂಪರ ಸಂಘಟನೆಗಳು ದೇವಸ್ಥಾನ ಜಾಗದಲ್ಲಿನ ಇಂಟರ್ ಲಾಕ್ ಕಿತ್ತು ಪ್ರತಿಭಟಿಸಿದ ಘಟನೆ ನಡೆದಿದೆ. ಹಳಿಯಾಳದ ಪುರಸಭೆ ವ್ಯಾಪ್ತಿಯ ಮರಡಿ ಗುಡ್ಡದ ಬಳಿ ಇರುವ ಮಸೀದಿಯ ಎದುರು ಬನ್ನಿ ಮಂಟಪವಿದ್ದು, ಇಲ್ಲಿ ಪುರಸಭೆಯಿಂದ ಹಾಸು ಹುಲ್ಲು ಹಾಗೂ ಇಂಟರ್ ಲಾಕ್ ಗಳನ್ನ ಅಳವಡಿಸಲಾಗಿತ್ತು. ಆದರೆ ಈ ಅಭಿವೃದ್ಧಿ ಕಾಮಗಾರಿಗಳನ್ನ ಪುರಸಭೆಯು ಒಂದು ಕೋಮಿಗೆ ಅನುಕೂಲವಾಗುವಂತೆ ಮಾಡುತ್ತಿದ್ದು, ಇದರಿಂದ ಹಿಂದೂಗಳ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಯಾಗಲಿದೆ ಎಂದು ಹಿಂದೂ ಪರ ಕಾರ್ಯಕರ್ತರು ಆರೋಪಿಸಿದ್ದರು.

ಆದರೂ ಹಳಿಯಾಳ ಪುರಸಭೆಯಿಂದ ಇಂಟರಲಾಕ್ ಅಳವಡಿಸಿ ಅಭಿವೃದ್ಧಿ ಪಡಿಸಲು ಮುಂದಾಗಿತ್ತು. ಎದುರು ಮಸೀದಿ ಇದ್ದು ಮುಂದಿನ ದಿನಗಳಲ್ಲಿ ಈ ಪ್ರದೇಶವನ್ನು ಬಳಕೆ ಮಾಡಿಕೊಳ್ಳುವ ಆತಂಕದಲ್ಲಿ ಹಿಂದೂಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸಿ ಕಳೆದ ೧೫ ದಿನಗಳ ಮೊದಲೆ ಮನವಿಗಳನ್ನು ಸಲ್ಲಿಸಿದ್ದರು. ಪುರಸಭೆಯ ಸಭೆಯಲ್ಲೂ ಆಕ್ಷೇಪ ವ್ಯಕ್ತವಾಗಿತ್ತು. ಆದರೂ ಅಭಿವೃದ್ಧಿ ಕಾಮಗಾರಿ ನಡೆಸಿದ ಹಿನ್ನೆಲೆಯಲ್ಲಿ ಗ್ರಾಮದೇವಿ ಟ್ರಸ್ಟ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿoದ ಬಂದ್ ಗೆ ಕರೆ ನೀಡಲಾಗಿತ್ತು.

ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಗ್ರಾಮದೇವಿ ಟ್ರಸ್ಟ್ ಅಧ್ಯಕ್ಷ ಮಂಗೇಶ ದೇಶಪಾಂಡೆ ನೇತೃತ್ವದಲ್ಲಿ ಇಂದು ಮುಂಜಾನೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ನೂರಾರು ಮಂದಿ ಬಳಿಕ ಪ್ರತಿಭಟನಾ ರ್ಯಾಲಿ ಮೂಲಕ ದೇವಸ್ಥಾನ ಜಾಗಕ್ಕೆ ತೆರಳಲು ಮುಂದಾಗಿದ್ದರು. ಪೊಲೀಸರು ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದರು ನೂರಾರು ಪ್ರತಿಭಟನಾಕಾರರ ಮುಂದೆ ಕೆಲವೇ ಮಂದಿ ಇದ್ದ ಪೊಲೀಸರನ್ನು ಬೇದಿಸಿ ದೇವಸ್ಥಾನದ ಜಾಗಕ್ಕೆ ಪ್ರತಿಭಟನಾಕಾರರು ನುಗ್ಗಿದ್ದರು.

ಬಳಿಕ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಮಾತುಕತೆ ನಡೆಸುವಂತೆ ಸೂಚಿಸಿದರು. ಆದರೂ ಕೇಳದೆ ಜಾಗದಲ್ಲಿ ಅಳವಡಿಸಿದ್ದ ಇಂಟರ್ ಲಾಕ್ ಕಿತ್ತು ಪ್ರತಿಭಟನೆ ನಡೆಸಿದರು. ಅಲ್ಲದೇ ಸ್ಥಳದಲ್ಲಿ ಭಗವಾ ಧ್ವಜ ನೆಟ್ಟಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಹಳಿಯಾಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಎರಡು ತುಕಡಿಗಳ ಮೂಲಕ ಬಂದೋಬಸ್ತ್ ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಸಿಲ್ಲ. ಎಲ್ಲರೂ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button