ಉಪ್ಪಿನಕಾಯಿ ಮಿಡಿಗಾಗಿ  ಮಾವಿನ ಮರಏರಿ, ಕೆಳಗೆ ಬಿದ್ದು ಮೃತಪಟ್ಟ ದುರ್ದೈವಿ: ಜೋಡೆತ್ತುಗಳ ಮೂಲಕ ಗದ್ದೆ ಉಳುಮೆಯಲ್ಲಿ ರೈತರಿಗೇ ಬೆನ್ನಲುಬಾಗಿದ್ದ ಕೃಷಿ ಕೂಲಿ ಕಾರ್ಮಿಕ ಇನ್ನಿಲ್ಲ     

ಅಂಕೋಲಾ: ತಾಲೂಕಿನ ಅಗಸೂರು ವ್ಯಾಪ್ತಿಯಲ್ಲಿ ಸಂಭವಿಸಿದ ಅವಘಡ ಒಂದರಲ್ಲಿ ಉಪ್ಪಿನಕಾಯಿಗಾಗಿ ಮಾವಿನಮಿಡಿ ಕೊಯ್ಯಲು ಮಾಮರ ಏರಿದ ವ್ಯಕ್ತಿಯೋರ್ವ, ಆಯ ತಪ್ಪಿ ಕಾಲು ಜಾರಿ ಮರದಿಂದ ಕೆಳಗೆ ಬಿದ್ದು  ಗಂಭೀರ ಗಾಯಗೊಂಡು ನಂತರ ಮೃತ ಪಟ್ಟ ಘಟನೆ ಸಂಭವಿಸಿದೆ. ಅಗಸೂರು ಬೆರಾಜಿಕೊಪ್ಪ ನಿವಾಸಿ ಕೃಷಿ -ಕೂಲಿ ಕಾರ್ಮಿಕ ಲೋಕೇಶ ನಾಗಪ್ಪ ಗೌಡ (50) ಮೃತ ದುರ್ದೈವಿ.

ಈತ ತನ್ನ ಮನೆ ಬಳಕೆಗೆ ಉಪ್ಪಿನಕಾಯಿ ತಯಾರಿಕೆಗೆ ಮಾವಿನ ಮಿಡಿ ಕೊಯ್ಯಲು ರಾಮದಾಸ ನಾಯಕ ಎನ್ನುವವರ ತೋಟದ ಪಕ್ಕದಲ್ಲಿ ಹಳ್ಳದ ದಡದಲ್ಲಿರುವ ಮಾವಿನ ಮರ ಹತ್ತಿ ಮಾವಿನ ಕಾಯಿ ಕೊಯ್ಯುತ್ತಿದ್ದ ಸಂದರ್ಭದಲ್ಲಿ, ಆಯತಪ್ಪಿ ಮರದಿಂದ ಕೆಳಗೆ ಬಿದ್ದ ಪರಿಣಾಮ ತಲೆಯ ಹಿಂಬದಿಗೆ ತೀವ್ರ ಸ್ವರೂಪದ ಗಾಯಗೊಂಡು   ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಸ್ಥಳೀಯ ವೈದ್ಯರ ಸೂಚನೆ ಮೇರೆಗೆ ಕಾರವಾರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ವ್ಯಕ್ತಿ ಮೃತ ಪಟ್ಟಿರುವುದಾಗಿ ತಿಳಿಸಿದರು ಎನ್ನಲಾಗಿದೆ. 

ಈ ಕುರಿತು ಮೃತ ವ್ಯಕ್ತಿಯ ಪತ್ನಿ ನೀಡಿದ ದೂರಿನನ್ವಯ, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಮೊದಲು ತಾನು ಸಾಕಿದ ಜೋಡೆತ್ತುಗಳ ಮೂಲಕ,ಊರಿನ ಹತ್ತಾರು ಕಡೆ ಗದ್ದೆ ಉಳುಮೆ ಮಾಡುತ್ತ ಸುತ್ತಮುತ್ತಲಿನ ನೂರಾರು ರೈತ ಕುಟುಂಬಗಳ  ಕೃಷಿ ಕಾರ್ಯಕ್ಕೆ ಬೆನ್ನೆಲುಬಾಗಿ, ಬೆವರಿಳಿಸಿ ದುಡಿದು ಊರಲ್ಲಿ ಎಲ್ಲರಿಗೂ ಬೇಕಾಗಿ, ತನ್ನ ಆತ್ಮೀಯ ವಲಯದಲ್ಲಿ ಪ್ರೀತಿಯಿಂದ ಚಾಪ ಎಂದೇ ಕರೆಯಿಸಿಕೊಳ್ಳುತ್ತಿದ್ದ ಲೋಕೇಶ್ ಗೌಡನ ಅಕಾಲಿಕ ನಿಧನಕ್ಕೆ  ಬೀರಣ್ಣ ನಾಯಕ ಸೇರಿದಂತೆ ಇತರೆ ಗಣ್ಯರು , ಸ್ಥಳೀಯ ಪ್ರಮುಖರು ತೀವ್ರ ಸಂತಾಪ ಸೂಚಿಸಿ,ನೊಂದ ಬಡ ಕುಟುಂಬಕ್ಕೆ,ಸರ್ಕಾರದಿಂದ ಯೋಗ್ಯ ಪರಿಹಾರ ದೊರೆಯುವಂತಾಗಬೇಕು ಎಂದು ಆಗ್ರಹಪೂರ್ವಕವಾಗಿ ವಿನಂತಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version