ಉಪನ್ಯಾಸಕಿ ಆಗಿದ್ದ ಯುವತಿ ಆಕಸ್ಮಿಕ ನಿಧನ : ಸಾವಿನ ಸುತ್ತ ಸಂಶಯದ ಹುತ್ತ ? ಪೊಲೀಸ್ ಕೇಸ್ ದಾಖಲಿಸದೇ,ಪೋಸ್ಟ್ ಮಾರ್ಟಂ ಮಾಡದೇ ಜಿಲ್ಲೆ ದಾಟಿ ಪರ ಜಿಲ್ಲೆಗೆ ಮೃತ ದೇಹ ತಂದದ್ದು ಯಾಕೆ ?
ಅಂಕೋಲಾ : ತಾಲೂಕು ಮೂಲದ ಯುವತಿಯೋರ್ವಳು ದೂರದ ಯಾದಗಿರಿ ಜಿಲ್ಲೆಯಲ್ಲಿ ಆಕಸ್ಮಿಕವಾಗಿ ಸಾವನಪ್ಪಿದ್ದು ಹಲವು ರೀತಿಯ ಅನುಮಾನಗಳನ್ನು ಹುಟ್ಟು ಹಾಕುವಂತೆ ಮಾಡಿದೆ.
ಅಂಕೋಲಾ ತಾಲೂಕಿನ ಅಂಗಡಿ ಬೈಲ್, (ನಾಕ್ಕನೆ )ನಿವಾಸಿಯಾಗಿದ್ದ ನಿವೇದಿತಾ ನರಸಿಂಹ ಭಟ್ (24 ) ಮೃತ ದುರ್ದೈವಿಯಾಗಿದ್ದಾಳೆ. ಬಾಲ್ಯದಿಂದಲೂ ಪ್ರತಿಭಾವಂತೆಯಾಗಿದ್ದ ಈಕೆ ತನ್ನ ಆರಂಭಿಕ ಶಿಕ್ಷಣವನ್ನು ಅಂಗಡಿ ಬೈಲ್ ಶಾಲೆಯಲ್ಲಿ ಮುಗಿಸಿ,ನಂತರ ನವೋದಯ ಶಾಲೆಗೆ ಆಯ್ಕೆಯಾಗಿದ್ದಳು. ಮೈಸೂರು ವಿಶ್ವವಿದ್ಯಾಲಯದಿಂದ ಎಂ ಎಸ್ಸಿ ಪದವಿ ಮುಗಿಸಿರುವ ಇವಳು,ಬಂಗಾರದ ಪದಕ ಪುರಸ್ಕೃತಳಾಗಿ ಗಮನ ಸೆಳೆದಿದ್ದಳು.ಉನ್ನತ ವಿದ್ಯಾಭ್ಯಾಸ ಗಳಿಸಿದ್ದರೂ ಜೀವನದಲ್ಲಿ ಹೆಚ್ಚಿನದನ್ನು ಸಾಧಿಸಿ ತೋರಿಸಬೇಕೆಂಬ ಛಲದಿಂದ ,ಐಎಎಸ್ ಕೋಚಿಂಗ್ ಪಡೆದು ಹತ್ತಿರದಲ್ಲೇ ಬರಲಿರುವ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಳು ಎನ್ನಲಾಗಿದೆ.
ಈ ವೇಳೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಖಾಸಗಿ ಕಾಲೇಜ್ ಒಂದರಲ್ಲಿಯೂ ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಳು. ಅಲ್ಲಿ ಅವಳು ಆಕಸ್ಮಿಕವಾಗಿ ಸಾವಿಗೀಡಾಗಿದ್ದು, ಅಲ್ಲಿನ ಸ್ಥಳೀಯರ ದುಡುಕಿನ ನಿರ್ಧಾರದಿಂದ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯುವಂತಾಗಿದೆ.ಅಲ್ಲಿನ ಸ್ಥಳೀಯರ ಪ್ರಕಾರ ಅವಳಿಗೆ ಆರೋಗ್ಯ ಏರುಪೇರಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆ ವೇಳೆಗೆ ಅವಳು ಮೃತಪಟ್ಟಳು ಎನ್ನುತ್ತಿದ್ದರೂ,ಅಲ್ಲಿ ಯಾವೊಂದು ಪೊಲೀಸ್ ದೂರು ದಾಖಲಿಸದೇ,ಪೋಸ್ಟ್ ಮಾರ್ಟಮ್ ಸಹ ಮಾಡದೆ ,ಮನೆಯವರಿಗೆ ಕಾಟಾಚಾರಕ್ಕೆ ತಿಳಿಸಿ,ಅವರು ಅಲ್ಲಿ ತಲುಪುವ ಮೊದಲೇ,ಮೃತ ದೇಹವನ್ನು ಅಂಕೋಲಾದತ್ತ ಸಾಗಿಸಿ ತಂದಿದ್ದಾರೆ.ಅಲ್ಲಿನವರ ಈ ಎಲ್ಲ ನಡೆ -ನುಡಿಗಳು ಹಲವು ಅನುಮಾನವನ್ನು ಹುಟ್ಟು ಹಾಕಿದ್ದು,ಸಂಶಯಗೊಂಡ ಮೃತಳ ಕುಟುಂಬಸ್ಥರು ಮತ್ತು ಊರ ನಾಗರಿಕರು ಈ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿ ತನಿಖೆ ಆಗಬೇಕೆಂದು ಒತ್ತಾಯಿಸಿದ್ದಾರೆ.
ಕಾರವಾರ ಜಿಲ್ಲಾ ಆಸ್ಪತ್ರೆಗೆ ಮೃತದೇಹವನ್ನು ಸಾಗಿಸಿ, ಅಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಿದ್ದಾರೆ ಎನ್ನಲಾಗಿದ್ದು ಒಟ್ಟಾರೆ ಐಎಎಸ್ ಕನಸು ಹತ್ತಿದ್ದ ಬಂಗಾರದ ಹುಡುಗಿಯ ಬದುಕೇ ಕಮರಿ ಹೋಗಿದ್ದು, ಅವಳ ಸಾವಿನ ಘಟನೆ ಮತ್ತು ಕಾರಣದ ಕುರಿತಂತೆ ,ಪೊಲೀಸ್ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ನಿಜವಾದ ಮತ್ತು ನಿಖರ ಮಾಹಿತಿ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ