ನದಿ ನೀರಲ್ಲಿ ತೇಲಿ ಬಂದಿದ್ದ ಅಪರಿಚಿತ ಯುವಕನ ಶವ : ಎಟಿಎಂ ಕಾರ್ಡ್ ನಿಂದ ಸಿಕ್ಕಿತು ವಿಳಾಸ
ಅಂಕೋಲಾ -ಕುಮಟಾ ಮಾರ್ಗಮಧ್ಯೆ ಕೊಡಸಣಿ ಬ್ರಿಜ್ ಹತ್ತಿರ ಗಂಗಾವಳಿ ನದಿತೀರದ ಪ್ರದೇಶದಲ್ಲಿ ಮೇ 16 ರಂದು ಶವವೊಂದು ತೇಲುತ್ತಿರುವುದು ಪತ್ತೆಯಾಗಿತ್ತು. ಈ ಕುರಿತು ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ, ಪಿ ಎಸ್ ಐ ಕುಮಾರ ಕಾಂಬಳೆ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆ ಬಳಿಕ ಶವವನ್ನು ನೀರಿನಿಂದ ಮೇಲೆತ್ತಲಾಗಿತ್ತು .
ಇದನ್ನೂ ಓದಿ: ಉದ್ಯೋಗಾವಕಾಶ: 81 ಸಾವಿರದ ವರೆಗೆ ಸಂಬಳ: 1,600 ಹುದ್ದೆಗಳಿಗೆ ನೇಮಕಾತಿ
ಕೊಳೆತ ಸ್ಥಿತಿಯಲ್ಲಿದ್ದ ಅದು ಅಪರಿಚಿತ ಶವವಾಗಿದ್ದರಿಂದ ಪ್ರಕರಣ ದಾಖಲಿಸಿಕೊಂಡ ಪೋಲೀಸರು, ಶವವನ್ನು ಕಾರವಾರ ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿ ಶೈತ್ಯಾಗಾರದಲ್ಲಿಟ್ಟಿದ್ದರು. ಸಾಮಾಜಿಕ ಕಾರ್ಯಕರ್ತರಾದ ಕನಸಿಗದ್ದೆಯ ವಿಜಯಕುಮಾರ ವಾಯ್ ನಾಯ್ಕ, ಬೊಮ್ಮಯ್ಯ ನಾಯ್ಕ, ಪೋಲೀಸ್ ಸಿಬ್ಬಂದಿಗಳಾದ ವಿಜಯ , ಅರುಣ, ಜಗದೀಶ ಸಹಕರಿಸಿದ್ದರು.
ಪ್ರಕರಣ ದಾಖಲಾಗಿ ವಾರಗಳೇ ಕಳೆದರೂ ಮೃತನ ವಾರಸುದಾರರಾರೂ ಬರದೇ ಇರುವುದರಿಂದ, ಕಾನೂನು ರೀತ್ಯ ಆ ಶವವನ್ನು ಪೋಲೀಸರೇ ಧಪನ್ ಮಾಡಲು ಮುಂದಾಗುವವರಿದ್ದರು ಎನ್ನಲಾಗಿದೆ. ಈ ವೇಳೆ ಅದೇಗೋ ಮೃತ ವ್ಯಕ್ತಿಯ ಪ್ಯಾಂಟಿನ ಕೆಳ ಹಾಗೂ ಒಳ ಭಾಗದಲ್ಲಿ ಜಾರಿಬಂದಿದ್ದ ಎಟಿಎಂ ಕಾರ್ಡ್ ನ್ನು ಪೋಲೀಸರು ಶೋಧಿಸಿ ಹೊರತೆಗೆದಿದ್ದಾರೆ. ನಂತರ ಎಟಿಎಂ ಕಾರ್ಡಗೆ ಸಂಬಂಧಿಸಿದ ಬ್ಯಾಂಕ್ ನವರ ಮೂಲಕ ಪೊಲೀಸರು ಮೃತನ ವಿಳಾಸ ಮತ್ತಿತರ ವಿವರ ಕಲೆ ಹಾಕಿ ಆತನ ಕುಟುಂಬಸ್ಥರಿಗೆ ಸುದ್ದಿ ತಲುಪಿಸಿದ್ದಾರೆ.
ಮೃತ ಯುವಕನಾರು? ಮೃತನನ್ನು ಹುಬ್ಬಳ್ಳಿಯ ರಾಕೇಶ ರಮಾಕಾಂತ ರಾಯ್ಕರ (27) ಎಂದು ಗುರುತಿಸಲಾಗಿದೆ. ಸ್ವಲ್ಪ ಮಾನಸಿಕ ಖಿನ್ನತೆಯಿಂದದ್ದ ಆತ ಆಗಾಗ ಮನೆ ಬಿಟ್ಟು ಹೋಗುವುದು, ಕೆಲ ದಿನಗಳ ನಂತರ ಮತ್ತೆ ಮರಳಿ ಬರುವುದು ಮಾಡುತ್ತಿದ್ದ ಎನ್ನಲಾಗಿದ್ದು, ಹೀಗಾಗಿ ಅವನ ಇರುವಿಕೆ – ಬರುವಿಕೆಗೆ ಕುಟುಂಬಸ್ಥರು ಹೆಚ್ಚಿನ ಕಾಳಜಿ ವಹಿಸಿರಲಿಕ್ಕಿಲ್ಲ ಎಂಬ ಮಾತು ಕೇಳಿ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಅದೇನೇ ಕಾರಣಗಳಿದ್ದರೂ, ನದಿಯಲ್ಲಿ ಪತ್ತೆಯಾದ ಶವ ಸುಮಾರು 12 ದಿನಗಳ ನಂತರ ಮುಕ್ತಿ ಕಾಣುವಂತಾಗಿದೆ. ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದರಿಂದ ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕಅಂಕೋಲಾ ಪುರಸಭೆ ವ್ಯಾಪ್ತಿಯ ಕೋಟೆವಾಡ ದಲ್ಲಿರುವ ಮುಕ್ತಿಧಾಮದಕ್ಕೆ ಸಾಗಿಸಿ, ಅಲ್ಲಿ ಮೃತನ ಕುಟುಂಬಸ್ಥರು ಧಾರ್ಮಿಕ ವಿಧಿ ವಿಧಾನದಂತೆ ಅಂತ್ಯ ಸಂಸ್ಕಾರ ನೆರವೇರಿಸಿದರು. ಸ್ಥಳೀಯ ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ, ಬೊಮ್ಮಯ್ಯ ನಾಯ್ಕ, ಪೊಲೀಸ್ ಸಿಬ್ಬಂದಿಗಳು, ಮೃತನ ಕುಟುಂಬಸ್ಥರು, ಹಿತೈಷಿಗಳು ಸಹಕರಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ