ರೈಲ್ವೆ ಟನೆಲ್‌ ಒಳಗೆ ಅಪರಿಚಿತ ಮೃತ ದೇಹ ಪತ್ತೆ:ಗೋಲ್ಡನ್ ಕಲರ್ ರವಿಕೆ, ಸೀರೆ ತೊಟ್ಟಿದ್ದ ವೃದ್ಧೆ ಯಾರು ?

ಅಂಕೋಲಾ ತಾಲೂಕಿನ ಹಾರವಾಡ ರೈಲ್ವೆ ಸ್ಟೇಶನ್ ಹತ್ತಿರ, ಅಂಕೋಲಾ ಕಡೆಯಿಂದ ಕಾರವಾರ ಕಡೆ  ಹೋಗುವ ರೈಲ್ವೆ ಮಾರ್ಗದ ಗುಡ್ಡದಂಚಿನ ರೈಲ್ವೆ ಟನೆಲ್ ಒಳಗಡೆ  ವೃದ್ಧೆಯೋರ್ವಳ ಮೃತ ದೇಹ ಪತ್ತೆಯಾಗಿದೆ. ಅಂದಾಜು 65 ರಿಂದ 70 ವಯಸ್ಸಿನ  ಅಪರಿಚಿತ ಮಹಿಳೆಯೇ  ಮೃತ ದುರ್ದೈವಿಯಾಗಿದ್ದಾಳೆ.

ರೈಲು ಬಡಿದ ಪರಿಣಾಮ ತಲೆ, ಮುಖದ ಭಾಗ, ಕೈ  ಭುಜ ಮತ್ತಿತರ ಅಂಗಾಗಗಳಿಗೆ ಗಂಭೀರ ಪೆಟ್ಟು ಬಿದ್ದು ರಕ್ತ ಸ್ರಾವದೊಂದಿಗೆ  ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಬೆಳಗಿನ ಜಾವ ಕರ್ತವ್ಯ ನಿರತ ರೈಲ್ವೆ ಟ್ರ್ಯಾಕ್ ಮ್ಯಾನ್ ಸುರಂಗ ಮಾರ್ಗದ ಹಳಿಯಂಚಿನ ಗಟಾರದಲ್ಲಿ  ಮೃತ ದೇಹ ಬಿದ್ದಿರುವುದನ್ನು ಗಮನಿಸಿ,ಮೇಲಾಧಿಕಾರಿಗಳ ಮೂಲಕ ಸ್ಥಳೀಯ ಪೊಲೀಸರಿಗೆ ಮಾಹಿತಿ  ತಲುಪಿಸಿದ್ದಾನೆ. ಮಹಿಳೆಯ ಸಾವಿಗೆ ಸಂಬಧಿಸಿದಂತೆ ನಿಖರ ಕಾರಣ ಮತ್ತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಅಂಕೋಲಾ ಪಿಎಸ್ಐ  ಗೀತಾ ಶಿರ್ಸಿಕರ ಸ್ಥಳ ಪರಿಶೀಲಿಸಿದರು. ರೈಲ್ವೆ ಇಲಾಖೆ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದು ಕರ್ತವ್ಯ ನಿರ್ವಹಿಸಿದರು. ದುರ್ಗಮ ರಸ್ತೆಯಲ್ಲಿ ರಕ್ಷಕ ಅಂಬುಲೆನ್ಸ ವಾಹನದ ಮೂಲಕ ಮೃತದೇಹವನ್ನು ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ,  ಹಾಗೂ ಪೊಲೀಸ್ ಸಿಬ್ಬಂದಿಗಳಾದ ಸುರೇಂದ್ರ ಹವಾಲ್ದಾರ ,ಸತೀಶ ಅಂಬಿಗ, ಜಗದೀಶ ನಾಯ್ಕ, ಸಹಕರಿಸಿದರು. ಗೋಲ್ಡನ್ ಕಲರ್ ರವಿಕೆ, ಹಾಗೂ ಸೀರೆ ತೊಟ್ಟ ಈ ವೃದ್ಧ ಮಹಿಳೆ ಮುಖ ಪರಿಚಯ ಗುರುತಿಸಲು ಕಷ್ಟ ಸಾಧ್ಯವಾಗಿದ್ದು, ಆಕೆಯನ್ನು ಯಾರಾದರೂ ಗುರುತಿಸುವುದಿದ್ದರೆ, ಪರಿಚಿತರಿದ್ದರೆ ಅಥವಾ ಸಂಬಂಧಿಕರು ಇಲ್ಲವೇ ವಾರಸುದಾರರು ಹೆಚ್ಚಿನ ಮಾಹಿತಿಗಾಗಿ ಅಂಕೋಲಾ ಪೋಲೀಸ್ ಠಾಣೆ, ಇಲ್ಲವೇ ತಮ್ಮ ಹತ್ತಿರದ ಪೋಲೀಸ್ ಠಾಣೆಗೆ ಸಂಪರ್ಕಿಸುವಂತೆ ಕೋರಲಾಗಿದೆ.     

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version