ಅಂಕೋಲಾ : ಬಸ್ ನಿಲ್ದಾಣದಲ್ಲಿ ನಿಲ್ಲಿಸಿಟ್ಟ ಮತ್ತೊಂದು ಬೈಕ್ ರಾತ್ರಿ ಬೆಳಗಾಗುವುದರೊಳಗೆ ಕಳ್ಳತನವಾಗಿದೆ. ತಾಲೂಕಿನ ಮಂಜಗುಣಿ, ವಿದ್ಯಾನಗರ ನಿವಾಸಿ ತುಕಾರಾಮ ಡಿ ತಾಂಡೇಲ ಇವರು,ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದು, ಅಂಕೋಲಾ ಬಸ್ ನಿಲ್ದಾಣದಲ್ಲಿ ತಮ್ಮ ಬೈಕ್ ಅನ್ನು ಇಟ್ಟು,ಡ್ಯೂಟಿಗೆ ತೆರೆಳಿದ್ದರು.
ಇದನ್ನೂ ಓದಿ: ವಿದ್ಯಾರ್ಥಿನಿಯರು ಬಸ್ ಅಡ್ಡಗಟ್ಟಿ ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದ್ಯಾಕೆ ನೋಡಿ?
ಡ್ಯೂಟಿ ಮುಗಿಸಿ ಮಾರನೇ ದಿನ ಬೆಳಿಗ್ಗೆ ಬಸ್ ನಿಲ್ದಾಣಕ್ಕೆ ವಾಪಸ್ ಆಗುವಷ್ಟರಲ್ಲಿ,ಅವರ ಬೈಕ್ ನಾಪತ್ತೆಯಾಗಿರುವುದು ಕಂಡು ಕ್ಷಣಕಾಲ ಗಾಬರಿಗೊಂಡಿದ್ದಾರೆ. ನಂತರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಬಸ್ ನಿಲ್ದಾಣದಲ್ಲಿ ಪದೇಪದೇ ಹೆಚ್ಚುತ್ತಿರುವ ಬೈಕ್ ಕಳ್ಳತನವನ್ನು ಪತ್ತೆ ಹಚ್ಚಲು, ಇಲ್ಲವೇ ಮಹಿಳಾ ಪ್ರಯಾಣಿಕರು ಸೇರಿದಂತೆ ಇತರರ ಸುರಕ್ಷತೆ ಮತ್ತು ಕಣ್ಗಾವಲಿಗೆ ಬಸ್ ನಿಲ್ದಾಣದಲ್ಲಿ ಈ ವರೆಗೂ ಸಿ ಸಿ ಕ್ಯಾಮೆರಾ ಅಳವಡಿಸಿ ದೇ ಜವಾಬ್ದಾರಿ ಮರೆತಂತಿದೆ.
ಆದರೂ ಸಹ, ಪೊಲೀಸರೇ ವಿಶೇಷ ಕಾಳಜಿ ವಹಿಸಿ ಕಳ್ಳತನದ ಮೇಲೆ ನಿಗಾ ಇಡಲು,ಬಸ್ ನಿಲ್ದಾಣದ ಕಾಂಪೌಂಡ್ ಹೊರಗಡೆ ಕ್ಯಾಮರಾ ಅಳವಡಿಸಿದ್ದು, ಅದರಲ್ಲಿ ಕಳ್ಳತನ ಕೃತ್ಯ ಸೆರೆಯಾಗಿದೆ ಎನ್ನಲಾಗಿದೆ. ನಸುಕಿನ 4-00 ಗಂಟೆಯಿಂದ 5:30 ರ ಅವಧಿ ಒಳಗೆ ಈ ಕಳ್ಳತನ ಕೃತ್ಯ ನಡೆದಿರುವ ಸಾಧ್ಯತೆ ಕೇಳಿಬಂದಿದ್ದು,ನಿಧಾನವಾಗಿ ಬೈಕನ್ನು ಸ್ಥಳದಿಂದ ನಾಪತ್ತೆ ಮಾಡಿದ ಖದೀಮ ಕೆ ಸಿ ರಸ್ತೆಯತ್ತ ಅದನ್ನು ತೆಗೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ಅಲ್ಲಿನ ಇತರೆ ಕೆಲ ಕ್ಯಾಮರಗಳನ್ನು ಪರಿಶೀಲಿಸಿದರೆ,ಮತ್ತಷ್ಟು ಹೆಚ್ಚಿನ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.ಪೊಲೀಸರು ಚುರುಕಿನ ತನಿಖೆ ಕೈಗೊಂಡು,ಕಳ್ಳತನ ಕೃತ್ಯ ಭೇದಿಸುವರೆ ಕಾದುನೋಡಬೇಕಿದೆ.