ಕುಮಟಾ: ಮಹಿಳೆಯ ಸಂಶಯಾಸ್ಪದ ಸಾವನ್ನು ಬೆನ್ನತ್ತಿದ ಕುಮಟಾ ಪೊಲೀಸರು, ಇದೀಗ ನಾಲ್ಕೇ ನಾಲ್ಕು ದಿನದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಮಹಿಳೆಯ ಶೀಲ ಶಂಕಿಸಿ ಭಾವನೇ ಅತ್ತಿಗೆಯನ್ನು ಕೊಲೆ ಮಾಡಿರುವುದು ಬಹಿರಂಗವಾಗಿದೆ. © COPYRIGHT VISMAYA TV
ಮಹಿಳೆಯ ಪತಿಯ ಅಣ್ಣನಿಂದಲೇ ಕೊಲೆಗೆ ಸಂಚು
ಹೌದು, ಮಹಿಳೆಯೋರ್ವಳ ನಡೆಯು ಸರಿ ಇಲ್ಲ ಎಂದು ಆಕೆಯ ಪತಿಯ ಅಣ್ಣನೇ ಸಂಚು ರೂಪಿಸಿ ಕೊಲೆಗೈದು ಹಾವೇರಿಯಿಂದ ಉತ್ತರ ಕನ್ನಡ ಜಿಲ್ಲೆಗೆ ಶವವನ್ನು ತಂದು ಎಸೆದು ಪರಾರಿಯಾಗಿದ್ದರು. ಘಟನೆ ನಡೆದ 4 ದಿನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪೊಲೀಸರು ಪ್ರಕರಣವನ್ನು ಬೇದಿಸಿ, ಆರೋಪಿತರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Railway Recruitment 2023 : SSLC , ITI ಪಾಸಾದವರು ಅರ್ಜಿ ಸಲ್ಲಿಸಬಹುದು
ಕುಮಟಾ ತಾಲೂಕಿನ ದೇವಿಮನೆ ಘಟ್ಟದಲ್ಲಿ ಇದೇ ಜೂನ್ 18 ರ ಶನಿವಾರದಂದು ಅಪರಿಚಿತ ಮಹಿಳೆಯ ಶವವೊಂದು ಪತ್ತೆಯಾಗಿತ್ತು. ಈ ಕುರಿತಾಗಿ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು. ಶವದ ಪತ್ತೆಯಾಗದ ಕಾರಣ ಈ ಕುರಿತಾಗಿ ಪ್ರಕರಣ ದಾಖಲಿಸಿಕೊಂಡ ಪೋಲಿಸರು ಸಾರ್ವಜನಿಕ ಪ್ರಕಟಣೆಯನ್ನು ಸಹ ಹೊರಡಿಸಿದ್ದರು. ಪೋಸ್ಟ್ ಮಾರ್ಟಮ್ ಬಳಿಕ ಅಪರಿಚಿತ ಶವವನ್ನು ಕೊಳೆಯದಂತೆ ಪ್ರೀಜರ್‌ನಲ್ಲಿ ಇಡಲಾಗಿತ್ತು.
ಪತ್ತೆಯಾದ ಅಪರಿಚಿತ ಶವವು ಕೋಲೆಯೆಂಬುದನ್ನು ಖಚಿತಪಡಿಸಿಕೊಂಡ ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಶವ ಪತ್ತೆಯಾದ 4 ದಿನದ ಓಳಗಾಗಿ ಇದೀಗ ಕೊಲೆಗೈದ ಆರೋಪಿತರನ್ನು ಪತ್ತೆ ಹಚ್ಚಿದ್ದಾರೆ.© COPYRIGHT VISMAYA TV ಹೌದು..ತನುಜಾ ಲೋಹಿತ್ ಕೊಲೆಯಾದ ಮಹಿಳೆಯಾಗಿದ್ದು, ಹಾವೇರಿ ಜಿಲ್ಲೆಯ ಸಿಗ್ಗಾವಿಯ ಚಿಕ್ಕಮಲ್ಲೂರಿನವರು ಎಂದು ತಿಳಿದುಬಂದಿದೆ.
ಮನೆಯವರ ಆರೋಪವೇನು?
ಮೃತ ಮಹಿಳೆ ತನುಜಾ ಈಕೆಯ ನಡತೆಯ ಕುರಿತಾಗಿ ಈಕೆಯ ಗಂಡ ಸೇರಿದಂತೆ ಕುಟುಂಬಸ್ಥರಿಗೆ ತೀರಾ ಬೇಸರವಿದ್ದು, ತನುಜಾಳ ಗಂಡನಾದ ಲೋಹಿತ್ ಅನುಮಾನಗೊಂಡಿದ್ದ. ಅಲ್ಲದೇ ತನುಜಾಳು ಅನೇಕರೊಟ್ಟಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು ಎಂಬುದು ಮನೆಯವರ ಆರೋಪ.
ಹಾವೇರಿಯಲ್ಲಿ ಕೊಲೆ ಮಾಡಿ ದೇವಿಮನೆ ಘಟ್ಟದಲ್ಲಿ ತಂದು ಎಸೆದರು
ಇದರಿಂದಾಗಿ ಲೋಹಿತ್‌ನ ಕೌಟುಂಬಿಕ ಜೀವನ ತೀರಾ ಹದಗೆಟ್ಟಿರುವದನ್ನು ಸಹಿಸಲಾರದೇ ಲೋಹಿತ್‌ನ ಅಣ್ಣನಾದ ಮಹೇಶ ಅಂದರೆ ತನುಜಾಳ ಬಾವ ಈಕೆಯನ್ನು ಕೊಲೆ ಮಾಡುವುದಕ್ಕೆ ಸಂಚು ರೂಪಿಸಿದ್ದ. ಮಹೇಶ ಸೇರಿದಂತೆ ಇನ್ನು 4 ಮಂದಿ ಸೇರಿ ತನುಜಾಳನ್ನು ಹಾವೇರಿಯಲ್ಲಿಯೇ ಕುತ್ತಿಗೆಗೆ ಬಟ್ಟೆ ಬಿಗಿದು ಕೊಲೆಗೈದು ಕುಮಟಾ ತಾಲೂಕಿನ ದೇವಿಮನೆ ಘಟ್ಟದಲ್ಲಿ ಎಸೆದು ಹೊಗಿದ್ದರು.
ಆದರೆ ಇದೀಗ ಈ ಕೃತ್ಯ ನಡೆಸಿ ತಲೆ ಮರೆಸಿಕೊಂಡಿದ್ದ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. ತನುಜಾಳ ನಡತೆ ಸರಿ ಇಲ್ಲದ ಕಾರಣ ಕೊಲೆಗೈದಿದ್ದೇವೆ ಎಂದು ಆರೋಪಿತರು ತಪ್ಪೊಪ್ಪಿಕೊಂಡಿದ್ದಾರೆ.
ತಲೆ ಮರೆಸಿಕೊಂಡಿದ್ದ 5 ಆರೋಪಿತರ ಪೈಕಿ ಚಿಕ್ಕಮಾಲೂರಿನಲ್ಲಿ ಇಬ್ಬರನ್ನು, ಮುಂಡಗೋಡ ಹಾಗೂ ಶಿರಸಿ ಮತ್ತು ಗದಗ ಸೇರಿ ಮೂವರನ್ನು ಬಲೆ ಬೀಸಿ ವಶಕ್ಕೆ ಪಡೆಯಲಾಗಿದೆ. ಇದೀಗ ಐವರು ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. ಗೌರಮ್ಮ, ನೀಲಮ್ಮ, ಮಹೇಶ, ಅಮಿತ್, ಕಾವ್ಯ ಸೇರಿ ಐವರು ಪೊಲೀಸರ ವಶದಲ್ಲಿರುವ ಆರೋಪಿತರಾಗಿದ್ದಾರೆ.
ಈ ಕುರಿತಾಗಿ ಕುಮಟಾ ಪೋಲೀಸ್ ಠಾಣೆಗೆ ಆಗಮಿಸಿ ಪ್ರಕರಣದ ಕುರಿತಾಗಿ ಮಾಹಿತಿ ನೀಡಿದ ಕಾರವಾರ ಎಸ್.ಪಿ ವಿಷ್ಣುವರ್ಧನ್ ಎನ್ ಅವರು, ಕೊಲೆಯ ಮುಖ್ಯ ಕಾರಣದ ಕುರಿತಾಗಿ ಸಂಕ್ಷಿಪ್ತ ವಿವರಣೆ ನೀಡಿ, ಪ್ರಕರಣ ಬೇದಿಸುವಲ್ಲಿ ಶ್ರಮಿಸಿದ ಸರ್ವರಿಗೂ ಅಭಿನಂದಿಸಿದ್ದಾರೆ.
ಕಾರವಾರ ಎಸ್.ಪಿ ವಿಷ್ಣುವರ್ಧನ್ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ. ಜಯಕುಮಾರ್, ಭಟ್ಕಳ ಡಿವೈಎಸ್ಪಿ ಶ್ರೀಕಾಂತ ಮಾರ್ಗದರ್ಶನದಲ್ಲಿ ಕುಮಟಾ ಸಿಪಿಐ ತಿಮ್ಮಪ್ಪ ನಾಯ್ಕ ನೇತೃತ್ವದಲ್ಲಿ, ಪಿಎಸ್‌ಐ ಸಂಪತ್ ಕುಮಾರ್, ನವೀನ್ ನಾಯ್ಕ, ಸಿಬ್ಬಂದಿಗಳಾದ ಲೋಕೇಶ್, ದಯಾನಂದ ನಾಯ್ಕ, ಪ್ರದೀಪ, ಗುರು ನಾಯಕ್ ಮುಂತಾದವರು ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ