ಅಂಕೋಲಾ: ತಾಲೂಕಿನ ಸುಂಕಸಾಳ ಪಂಚಾಯತ ವ್ಯಾಪ್ತಿಯ ಹೆಬ್ಬುಳದಲ್ಲಿ ಆಕಸ್ಮಿಕವಾಗಿ 11 ಕೆ.ವಿ ವಿದ್ಯುತ್ ತಂತಿ ಹರಿದು ಎಲ್.ಟಿ ಲೈನ್ ಮೇಲೆ ಬಿದ್ದ ಪರಿಣಾಮ ಭಾರೀ ಪ್ರಮಾಣದ ವಿದ್ಯುತ್ ಅವಘಡ ಸಂಭವಿಸಿ 30 ಕ್ಕೂ ಹೆಚ್ಚು ಜನರ ಮನೆ ಅಂಗಡಿ ಸೇರಿದಂತೆ ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿ ಲಕ್ಷಾಂತರ ರು. ಹಾನಿಯಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಕಳೆದ ಕೆಲ ದಿನಗಳ ಹಿಂದೆಯೂ ಇದೇ ಪಂಚಾಯತ್ ವ್ಯಾಪ್ತಿಯಲ್ಲಿ ಚಿಕ್ಕ ಪುಟ್ಟ ವಿದ್ಯುತ್ತ್ ಅವಘಡ ಸಂಭವಿಸಿದ್ದು ಈ ಬಾರಿ ಸಾಮುಹಿಕ ರೀತಿ ಘಟನೆ ಇದಾಗಿದ್ದು ಪದೇ ಪದೇ ಇಂತಹ ದುರ್ಘಟನೆಗಳು ಸಂಭವಿಸುತ್ತಿರುವುದು, ಮಳೆಗಾಲದ ಈ ದಿನಗಳಲ್ಲಿ ಗ್ರಾಮಸ್ಥರು ಅತೀವ ಆತಂಕದಿಂದಲೇ ಜೀವನ ನಡೆಸುವಂತಾಗಿದೆ.. ಕಳೆದ 20 ದಿನಗಳ ಹಿಂದೆ ಸುಂಕಸಾಳದಲ್ಲಿ ಇದೇ ರೀತಿ 11 ಕೆ.ವಿ ವಿದ್ಯುತ್ ತಂತಿ ಹರಿದು ಎಲ್.ಟಿ ಲೈನ್ ಮೇಲೆ ಬಿದ್ದ ಕಾರಣ ಅನೇಕರ ಮನೆಯ ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದವು. ಅದೇ ಘಟನೆ ಮತ್ತೆ ಹೆಬ್ಬುಳ ಗ್ರಾಮದಲ್ಲಿ ಮರುಕಳಿಸಿದ್ದು , ಗ್ರಾಮಸ್ಥರು ಹೆಸ್ಕಾಂ ಇಲಾಖೆಯ ನಿರ್ಲಕ್ಷದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಹಾನಿ ಪರಿಹಾರ ಮತ್ತು ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಹೆಸ್ಕಾಂ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರವೀಣ ನಾಯ್ಕ, ಶಾಕಾಧಿಕಾರಿ ಸಂತೋಷ್ ನಾಯ್ಕ ಭೇಟಿ ನೀಡಿ ಪರಿಶೀಲಿಸಿ, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ಆಕಸ್ಮಿಕ ವಿದ್ಯುತ್ ಅವಘಡದಲ್ಲಿ ಬಹುತೇಕರ ಮನೆಗೆ ಅಳವಡಿಸಿದ ಮೀಟರ್ ಬೋರ್ಡ್,ನೀರಾವರಿ ಪಂಪ ಸೆಟ್,ಅಂಗಡಿ ಮತ್ತಿತರೆಡೆಯ ಮೀಟರ್ ಬೋರ್ಡ್, ಮಾತ್ರವಲ್ಲದೇ ಟಿವಿ, ಮಿಕ್ಸರ್, ಗ್ರ್ಯಾಂಡರ್, ಫ್ಯಾನ್, ಮುಂತಾದ ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆ ಬಗ್ಗೆ ಸುಂಕಸಾಳ ಪಂಚಾಯತ್ ಪಿಡಿಓ ನಾಗೇಂದ್ರ ನಾಯ್ಕರನ್ನು ಸಂಪರ್ಕಿಸಿದಾಗ ಅವರು ಘಟನೆಯ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದ್ದು ವರದಿಯನ್ನು ತಯಾರಿಸಿ ತಕ್ಷಣವೇ ಇಲಾಖೆಗೆ ಕಳಿಸುತ್ತೇವೆ ಎಂದು ತಿಳಿಸಿದ್ದಾರೆ.
ಪದೇ ಪದೇ ಘಟನೆ ಮರುಕಳಿಸುತ್ತಿದೆ
ಇತ್ತೀಚೆಗೆ 11 ಕೆ.ವಿ ವಿದ್ಯುತ್ ತಂತಿ ಹರಿದು ಎಲ್.ಟಿ ಲೈನ್ ಮೇಲೆ ಬಿದ್ದು ಅವಘಡ ಸಂಭವಿಸುತ್ತಿರುವುದು ಹೆಚ್ಚಾಗಿದೆ. ಅದೃಷ್ಟವಶಾತ್ ಘಟನೆ ನಡೆಯುವ ಸಂದರ್ಭದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. 11 ಕೆ.ವಿ ವಿದ್ಯುತ್ ತಂತಿ ಅಷ್ಟು ಸುಲಭವಾಗಿ ಪದೇ ಪದೇ ಹರಿದು ಬೀಳಲು ಕಾರಣವೇನು ಎಂಬುದನ್ನು ತಿಳಿದು ಹೆಸ್ಕಾಂ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಬಸ್ ತಂಗುದಾಣ ಸೇರಿದಂತೆ ಜನ ನಿಬಿಡ ಪ್ರದೇಶಗಳ ಹತ್ತಿರ,ತುಂಡು ತುಂಡಾದ ವಿದ್ಯುತ್ ತಂತಿಗಳನ್ನೇ ಪುನಃ ಪುನಃ ಜೋಡಿಸಿ ಅಳವಡಿಸುತ್ತಿರುವುದು, ಜಂಗಲ್ ಕಟ್ಟಿಂಗ್ ಮಾಡದಿರುವುದು,ಲೈನ್ ಮೆನ್ ಕೊರತೆ ಮತ್ತಿತರ ಕಾರಣಗಳಿಂದ ನಾವು ಹೈರಾಣಾಗಿದ್ದೇವೆ. ಬಡವರಾದ ನಾವು ಬಿಲ್ ಕಟ್ಟಲು ಒಂದೆರಡು ದಿನ ತಡವಾದರೆ ,ನಮ್ಮ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಹೆಸ್ಕಾಂ ಇಲಾಖೆ ಈಗ ಅವರ ತಪ್ಪಿಗೆ,ನಮಗೆ ಯಾವ ರೀತಿ ಪರಿಹಾರ ನೀಡುತ್ತದೆ. ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ
ಅವಘಡದಿಂದ ಯಾರ ಯಾರ ಮನೆಯ ಮೀಟರ್ ಸುಟ್ಟು ಹೋಗಿದೆ ಎಂಬುದನ್ನು ತಿಳಿದು ಎಲ್ಲರಿಗೂ ಉಚಿತವಾಗಿ ಇಲಾಖೆಯಿಂದ ಮೀಟರ್ ನ್ನು ಸರಬರಾಜು ಮಾಡುತ್ತೇವೆ. ಇಂದು ಶಿರಸಿಯಿಂದ ವಿದ್ಯುತ್ ಪರಿವೀಕ್ಷಕರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾ.ಪಂ ಸಿಬ್ಬಂದಿಗಳು ಬಂದು ಹಾನಿ ಮಾಹಿತಿಯನ್ನು ಸಂಗ್ರಹಿಸಿ ಘಟನೆಗೆ ನಿಖರ ಕಾರಣವೇನೆಂದು ಪತ್ತೆ ಹಚ್ಚಿ ಇಲಾಖೆಯ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದಾರೆ. – ಪ್ರವೀಣ ನಾಯ್ಕ , (ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನೀಯರ್ ಹೆಸ್ಕಾಂ ಇಲಾಖೆ.
ಅವಘಡದಿಂದ ಯಾರ ಯಾರ ಮನೆಯ ಮೀಟರ್ ಸುಟ್ಟು ಹೋಗಿದೆ ಎಂಬುದನ್ನು ತಿಳಿದು ಎಲ್ಲರಿಗೂ ಉಚಿತವಾಗಿ ಇಲಾಖೆಯಿಂದ ಮೀಟರ್ ನ್ನು ಸರಬರಾಜು ಮಾಡುತ್ತೇವೆ. ಇಂದು ಶಿರಸಿಯಿಂದ ವಿದ್ಯುತ್ ಪರಿವೀಕ್ಷಕರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾ.ಪಂ ಸಿಬ್ಬಂದಿಗಳು ಬಂದು ಹಾನಿ ಮಾಹಿತಿಯನ್ನು ಸಂಗ್ರಹಿಸಿ ಘಟನೆಗೆ ನಿಖರ ಕಾರಣವೇನೆಂದು ಪತ್ತೆ ಹಚ್ಚಿ ಇಲಾಖೆಯ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ