ಹೆಂಡತಿಯಾದಂತೆ ನಟಿಸಿ ಆಭರಣ ಸಮೇತ ಓಡಿ ಹೋದವಳಾರು ?ವಿವಾಹದ ಕನಸು ಕಂಡಿದ್ದ ವರನಿಗೆ ಶಾಕ್
ಮದುವೆಯ ಕಪಟ ನಾಟಕ ರಂಗದಲ್ಲಿ ಎಜೆಂಟನ ಪಾತ್ರವೇನು ?.
ಅಂಕೋಲಾ : ಮದುವೆಯ ಕಪಟ ನಾಟಕ ರಂಗದಲ್ಲಿ ಸಿಲುಕಿಸಿ, ನಂತರ ದುಡ್ಡು ಮತ್ತು ಆಭರಣದೊಂದಿಗೆ ವಂಚಿಸಿ ನಾಪತ್ತೆಯಾಗುವ ವಿಲಕ್ಷಣ ಘಟನೆ ತಾಲೂಕಿನ ಕೆಲವೆಡೆ ನಡೆದಿದೆ ಎನ್ನಲಾಗಿದೆ. ಸಮುದ್ರದ ಬೇಲೆ ಬಳಿ ಕೇರಿ ಒಂದರ ಯುವಕನಿಗೆ ಮದುವೆ ಮಾಡಿಸುವ ನೆಪದಲ್ಲಿ ಹಣದಾಸೆಗೆ ಬಿದ್ದ ಎಜೆಂಟನೊಬ್ಬ ನಂತರ, ಎಲ್ಲಾ ಪುರಗಳನ್ನು ತಿರುಗಿ ನಿನಗೆ ಯೋಗ್ಯ ವಧು ತಂದಿದ್ದೇನೆ, ವರಿಸು ಎಂದು ಮದುವೆ ಮಂಟಪ ಹತ್ತಿಸಿದ್ದ ಎನ್ನಲಾಗಿದೆ.
ಕೊನೆಗೂ ತನಗೆ ಬಾಳ ಸಂಗಾತಿ ಸಿಕ್ಕ ಖುಷಿಯಲ್ಲಿದ್ದ ವರ, ಸಾಂಸಾರಿಕ ಸುಖ ಅನುಭವಿಸುವ ಮೊದಲೇ ಪೇಚಾಟಕ್ಕೆ ಸಿಲುಕಿಕೊಳ್ಳುವಂತಾಗಿದೆ ಮದುವೆಯಾಗಿ 1-2 ದಿನಗಳಲ್ಲಿ ಹೆಂಡತಿಯಾಗಿ ಬಂದವಳನ್ನು ದೇವಸ್ಥಾನಕ್ಕೆ ಕರೆದು ಕೊಂಡು ಹೋದಾಗ, ಗಂಡ ಬಳಗಡೆ ಹೋಗುತ್ತಿದ್ದಂತೆ, ಹೆಂಡತಿ ಅಲ್ಲಿಂದ ಕಾಲ್ಕಿತ್ತು , ತಮ್ಮವರ ವಾಹನವೇರಿ ಪರಾರಿಯಾದಳು ಎನ್ನಲಾಗಿದೆ. ಅವಳಿಗಾಗಿ ಅಲ್ಲಿ ಇಲ್ಲಿ ಹುಡುಕಿದ ವರನ ಕಡೆಯವರು, ಮದುವೆ ಏಜೆಂಟನ ಮಾತು ನಂಬಿ ನಾವು ಮೋಸ ಹೋದವು ಎಂದು ತಿಳಿದು, ನಂತರ ಈ ವಿಷಯ ಪೋಲೀಸ್ ಠಾಣೆ ಮೆಟ್ಟಿಲೇರಿದೆ ಎನ್ನಲಾಗಿತ್ತು.
ಈ ವಿಷಯ ಅಲ್ಲಲ್ಲಿ ಗುಸು ಗುಸು ಸುದ್ದಿಗೂ ಕಾರಣವಾಗಿತ್ತಾದರೂ, ವರನ ಸಂಸಾರ ಸರಿ ಹೋಗಲಿ ಇಲ್ಲವೇ ಪೋಲೀಸ್ ತನಿಖೆಗೆ ಅನುಕೂಲವಾಗಲಿ ಎಂದು ಕೆಲವರು ಸುಮ್ಮನಾಗಿದ್ದರು. ಹೆಂಡತಿ ಆಗಿ ಬಂದಿದ್ದ ಅಪರಿಚಿತಳೊಂದಿಗೆ ನವ ಜೀವನದ ಕನಸು ಕಟ್ಟಿಕೊಂಡಿದ್ದ ಯುವಕ, ಈಗ ತನ್ನ ಹಣ, ಹೆಂಡತಿಗೆ ಮಾಡಿಸಿದ ಒಡವೆ (ಆಭರಣ ), ನೆಮ್ಮದಿ ಕಳೆದುಕೊಳ್ಳುವಂತಾಗಿದೆ ಎಂಬ ಮಾತು ಸ್ಥಳೀಯ ಕೆಲವರಿಂದ ಕೇಳಿ ಬಂದಂತಿದ್ದು, ಘಟನೆ ಕುರಿತಂತೆ ಪೋಲೀಸರಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ತಾಲೂಕಿನ ಹಾಗೂ ಜಿಲ್ಲೆಯ ಕೆಲವೆಡೆ ಇಂತಹ ಕೆಲ ಘಟನೆಗಳು ನಡೆದಿವೆ ಎನ್ನಲಾಗಿದ್ದು,ಮರ್ಯಾದೆಗೆ ಅಂಜಿ ಕೆಲವರು ಸುಮ್ಮನಿರುವುದರಿಂದ,ಇನ್ನು ಕೆಲವರು ಆದ ಪ್ರಮಾದಗಳನ್ನು ಹೊಂದಾಣಿಕೆ ಮೂಲಕ ಬಗೆಹರಿಸಿಕೊಂಡಿದ್ದರಿಂದ ಹೆಚ್ಚಿನ ದೂರು ದಾಖಲಾಗಿಲ್ಲ ಎನ್ನಲಾಗಿದೆ.
ಒಟ್ಟಿನಲ್ಲಿ ಮದುವೆ ಮಾಡಿಸುವದಾಗಿ ನಂಬಿಸಿ, ಗಂಡಿನ ಕಡೆಯವರಿಂದ ಹಣ ಮತ್ತು ಆಭರಣ ಲಪಟಾಯಿಸಿ ಪಂಗನಾಮ ಎಳೆಯಲು ವ್ಯವಸ್ಥಿತ ಜಾಲ ಸಕ್ರೀಯವಾಗಿದ್ದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಸಂಬಂಧಿಸಿದವರು ಈ ಜಾಲ ಭೇದಿಸಿಯಾರೆ ಕಾದುನೋಡಬೇಕಿದೆ. ಅಂತೆಯೇ ಯಾರೋ ಎಜೆಂಟರನ್ನು ನಂಬಿ ಮದುವೆಯ ಕಪಟ ನಾಟಕ ರಂಗದೊಳಗೆ ಸಿಲುಕಿ ಒದ್ದಾಡುವ ಮೊದಲು ಸ್ವತಃ ಮುನ್ನೆಚ್ಚರಿಕೆ ತೆಗೆದುಕೊಂಡರೆ ಇಂತಹ ಕೆಲ ಅವಘಡಗಳನ್ನು ತಪ್ಪಿಸಬಹುದಾಗಿದೆ.ಹೀಗೆ ಕೈಕೊಟ್ಟು ಓಡಿ ಹೋಗುವ ನಕಲಿ ವಧುವಿನ ಕಡೆಯವರು , ಗಂಡಿನ ಕಡೆಯವರ ಮೇಲೆ ಸುಳ್ಳು ವರದಕ್ಷಿಣೆ ಕೇಸ್ ದಾಖಲಿಸಲೂ ಹಿಂಜರಿಯಲಾರರು ಎಂಬ ಮಾತು ಅಲ್ಲಲ್ಲಿ ಕೇಳಿ ಬಂದಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ