ಅಂಕೋಲಾ : ಇಲ್ಲಿನ ಕೋಟೆಯ ಆವರಣದಲ್ಲಿ ವಿಜಯನಗರದ ಆರಂಭದ ಕಾಲದಲ್ಲಿ ಪ್ರಭಾವಶಾಲಿಗಳಾಗಿದ್ದ ಕ್ರಿಯಾಶಕ್ತಿ ಯತಿಯ ವಿಗ್ರಹವನ್ನು ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಪತ್ತೆಮಾಡಿದ್ದಾರೆ. ಕೋಟೆಯಲ್ಲಿನ ಹನುಮಂತ ದೇವಾಲಯದ ಪಕ್ಕದಲ್ಲಿ ನಿತ್ಯವೂ ಸಾರ್ವಜನಿಕರಿಂದ ಪೂಜೆಗೊಳ್ಳುತ್ತಿರುವ ಕೆಲವು ಪ್ರಾಚೀನ ವಿಗ್ರಹಗಳಲ್ಲ್ಲಿ ಈ ವಿಗ್ರಹ ಪತ್ತೆಯಾಗಿದೆ. ಈವರೆಗೂ ಕ್ರಿಯಾಶಕ್ತಿಯ ವಿಗ್ರಹ ಎಲ್ಲಿಯೂ ಪತ್ತೆಯಾಗಿಲ್ಲ. ಇದು ಪ್ರಥಮ ಬಾರಿಗೆ ಅಂಕೋಲೆಯಲ್ಲಿ ಸಿಕ್ಕಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆಯಲ್ಲಿ ಮಾತನಾಡಿದ ಶ್ಯಾಮಸುಂದರ ಗೌಡರು, ಅಂಕೋಲೆಯಲ್ಲಿ ಕ್ರಿ.ಶ. 1425ರವರೆಗೆ ವಿಜಯನಗರದ ಆಡಳಿತ ಪ್ರಭಾವಶಾಲಿಯಾಗೇ ಇತ್ತು. ಈ ಅವಧಿಯಲ್ಲಿ ವಿಜಯನಗರದ ಅರಸರು ಹೊರಡಿಸಿದ ಒಟ್ಟೂ 22 ಶಾಸನಗಳು ಅಂಕೋಲೆಯಲ್ಲಿವೆ. ಅವುಗಳಲ್ಲಿ ನಾಲ್ಕು ಶಾಸನಗಳು ನೇರವಾಗಿ ಕ್ರಿಯಾಶಕ್ತಿಗೆ ದಾನ ನೀಡಿರುವುದನ್ನು ದಾಖಲಿಸುತ್ತವೆ. ಅಂದರೆ ಆ ಅವಧಿಯಲ್ಲಿ ಅಂಕೋಲೆಯಲ್ಲಿ ಕ್ರಿಯಾಶಕ್ತಿಯ ಪ್ರಭಾವ ಗಾಢವಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಂಕೋಲೆಯ ಕೋಟೆಯಲ್ಲಿರುವ ಶಿಲ್ಪ ಕ್ರಿಯಾಶಕ್ತಿಯದೆಂದು ಗುರುತಿಸಿದ್ದೇನೆ. ಕಾರಣ ಶಿಲ್ಪದಲ್ಲಿರುವ ವ್ಯಕ್ತಿ ಕಿರೀಟ ಧರಿಸಿದ್ದಾನೆ. ಮೈತುಂಬ ಆಭರಣಗಳನ್ನು ಧರಿಸಿದ್ದಾನೆ. ರಾಜ ಪೋಷಾಕಿನಲ್ಲಿದ್ದಾನೆ. ಆದರೆ ಎರಡೂ ಕೈಗಳ ತೋಳು ಹಾಗೂ ಮಣಿಕಟ್ಟಿನಲ್ಲಿ ರುದ್ರಾಕ್ಷಿಗಳನ್ನು ತೊಟ್ಟಿದ್ದಾನೆ.
ಕುತ್ತಿಗೆಯಲ್ಲಿಯೂ ಆಭರಣಗಳ ಜೊತೆಯಲ್ಲಿ ರುದ್ರಾಕ್ಷಿ ಮಾಲೆ ಧರಿಸಿದ್ದಾನೆ. ಬಲಗೈಯಲ್ಲಿ ಜಪಮಾಲೆ ಅಥವಾ ಅಕ್ಷಮಾಲೆಯನ್ನು ಹಿಡಿದಿದ್ದರೆ, ಎಡಗೈಯಲ್ಲಿ ಖಟ್ವಾಂಗದಂತೆ ಕಾಣುವ, ಬ್ರಹ್ಮಸೂತ್ರ ಮತ್ತು ಪತಾಕೆಯಿರುವ ಯತಿದಂಡವನ್ನು ಹಿಡಿದಿದ್ದಾನೆ. ಕಾಲಬುಡದಲ್ಲಿ ಕಮಂಡಲವಿದೆ. ಪಾದುಕೆಗಳನ್ನು ಧರಿಸಿದ್ದಾನೆ. ಶಿಲ್ಪದಲ್ಲಿ ಯಾವುದೇ ಬಗೆಯ ಆಯುಧಗಳು ಇಲ್ಲ. ಎಡ-ಬಲ ಕಿವಿಯ ಮೇಲೆ ಮುಕುಟದಿಂದ ಹೊರ ಬಂದಿರುವ ಜಟೆ. ತ್ರಿಭಂಗಿಯಲ್ಲಿ ನಿಂತಿರುವ ವಿಜಯ ನಗರದ ಕಾಲದ ಶಿಲ್ಪ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಜ ಉಡುಗೆಯಲ್ಲಿರುವ ಯತಿ ಯಾರೆಂದು ಬಲು ದೀರ್ಘವಾಗಿ ಯೋಚಿಸಿದಾಗ ಹೊಳೆದದ್ದು ಕ್ರಿಯಾಶಕ್ತಿ ಯತಿ ಎಂದು ವಿವರಿಸಿದರು.
“ಕಳೆದ ಜನವರಿಯ ಸಮಯದಲ್ಲಿ ಕೋಟೆಯೊಳಗಿನ ಈ ಪ್ರಾಚೀನ ಶಿಲ್ಪಗಳನ್ನು ಮತ್ತೊಮ್ಮೆ ಪರಿಶೀಲಿಸುತ್ತಿರುವಾಗ ಒಂದು ವಿಶಿಷ್ಟ ವಿಗ್ರಹ ನನ್ನ ಗಮನಸೆಳೆಯಿತು. ಆ ವಿಗ್ರಹದ ರಚನಾ ವಿನ್ಯಾಸ ಬಹಳ ಅಪರೂಪದ್ದಾಗಿತ್ತು. ಈ ಹಿಂದೆ ಎಲ್ಲಿಯೂ ಇಂತಹ ವಿಗ್ರಹವನ್ನು ಕಂಡಿರಲಿಲ್ಲ. ಆ ವಿಗ್ರಹದ ಫೋಟೋ ತೆಗೆದುಕೊಂಡು ಡಾ. ದೇವರಕೊಂಡಾರೆಡ್ಡಿ, ಡಾ. ಪರಮಶಿವಮೂರ್ತಿ, ಪ್ರೊ. ದೇವರಾಜಸ್ವಾಮಿ, ಡಾ. ಸ್ಮಿತಾ ರೆಡ್ಡಿ ಅವರುಗಳಿಗೆ ಕಳುಹಿಸಿದೆ.
ಫೋಟೋಗಳನ್ನು ಪರಿಶೀಲಿಸಿದ ವಿದ್ವಾಂಸರು ಇದು ಬಹಳ ವಿಶಿಷ್ಟವಾದ ವಿಗ್ರಹ, ಈ ರೀತಿಯ ವಿಗ್ರಹ ಈ ಹಿಂದೆ ಎಲ್ಲಿಯೂ ದೊರಕಿಲ್ಲ, ಇದು ಅಪರೂಪದ್ದಾಗಿದೆ, ಇದು ಯಾರ ವಿಗ್ರಹ ಎಂದು ತಕ್ಷಣಕ್ಕೆ ಗುರುತಿಸುವುದು ಕಷ್ಟ. ಇದರ ಕುರಿತು ಇನ್ನಷ್ಟು ಅಧ್ಯಯನ ಮಾಡಿ ಸ್ಥಳಿಯವಾಗಿ ದೊರೆಯುವ ಮಾಹಿತಿಗಳನ್ನೆಲ್ಲ ಕಲೆಹಾಕಿ ತಾಳೆನೋಡಿ ಎನ್ನುವ ಸಲಹೆ ನೀಡಿದರು. ಹಿರಿಯ ವಿದ್ವಾಂಸರುಗಳ ಸಲಹೆ ಪಡೆದು ಅವರೊಂದಿಗೆ ಚರ್ಚಿಸಿ, ಸ್ಥಳೀಯ ಶಾಸನಗಳನ್ನೆಲ್ಲ ಪರಿಶೀಲಿಸಿ ಇದು ಕ್ರಿಯಾಶಕ್ತಿ ಯತಿಯ ವಿಗ್ರಹ ಎಂಬ ತೀರ್ಮಾನಕ್ಕೆ ಬಂದೆ.” ಎಂದು ಗೌಡರು ತಿಳಿಸಿ, ಈ ವಿಗ್ರಹದ ಶೋಧಕಾರ್ಯದಲ್ಲಿ ನೆರವಾಧ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.
ವಿಗ್ರಹದ ಲಕ್ಷಣಗಳು ಮತ್ತು ಕಾಲ : ಸೊಂಟ ಬಲಕ್ಕೆ ಬಾಗಿಸಿ ತ್ರಿಭಂಗಿಯಲ್ಲಿ ನಿಂತ ದ್ವಿಬಾಹು ವಿಗ್ರಹ 80 ಸೆಂ.ಮೀ. ಎತ್ತರ ಮತ್ತು 49 ಸೆಂ.ಮೀ. ಅಗಲವಾಗಿದ್ದು 8 ಸೆಂ.ಮೀ ದಪ್ಪವಿದೆ. ತಲೆಯಲ್ಲಿ ಕೀರ್ತಿ ಮುಕುಟವಿದೆ. ಕಿವಿಯಲ್ಲಿ ಕುಂಡಲಗಳಿವೆ. ಭುಜದಲ್ಲಿ ಸ್ಕಂದಮಾಲೆಯಿದೆ. ಕೊರಳಲ್ಲಿ ಉಪಗ್ರೀವ, ಹಿಕ್ಕಸೂತ್ರಗಳಿವೆ. ಉದರಬಂದ, ಕಟಕವಾಲ್ಯ, ಕಟೀಸೂತ್ರ, ಊರುದಾಮ, ಮುಕ್ತದಾಮ, ವನಮಾಲೆ ತೊಟ್ಟು ಮೈಗೆ ಬಿಗಿಯಾಗಿ ಅಂಟಿಕೊಂಡಿರುವಂತೆ ವಸ್ತ್ರವನ್ನು ಧರಿಸಿದ್ದಾನೆ. ಮಂಡಿಯ ಮಟ್ಟಕ್ಕೆ ಬರುವಂತೆ ಕಚ್ಚೆ ಹಾಕಿ ಪಂಚೆಯನ್ನು ಉಟ್ಟಿದ್ದಾನೆ. ಕೇಯೂರದ ಬದಲಾಗಿ ತೋಳಲ್ಲಿ ಮತ್ತು ಮಣಿಕಟ್ಟುಗಳಲ್ಲಿ ಎರಡು ಎಳೆಯ ರುದ್ರಾಕ್ಷಿಯ ಮಾಲೆಯಿದೆ.
ಕರಗಳಲ್ಲಿಯೂ ಹಿಕ್ಕಸೂತ್ರದ ಜೊತೆಯಲ್ಲಿ ರುದ್ರಾಕ್ಷಿಯ ಮಾಲೆಯಿದ್ದರೆ, ಬಲಗೈಯಲ್ಲಿ ಅಕ್ಷಮಾಲೆಯಿದೆ. ಎಡಗೈಯಲ್ಲಿ ಖಟ್ವಾಂಗದಂತೆ ಕಾಣುವ ಬ್ರಹ್ಮಸೂತ್ರ ಮತ್ತು ಪತಾಕೆಯಿರುವ ಯತಿದಂಡವಿದೆ. ಕಾಲಲ್ಲಿ ಪಾದುಕೆಗಳಿವೆ. ಹಾಗೆಯೇ ಎಡಗಾಲ ಬಳಿಯಲ್ಲಿ ಪ್ರಭಾವಳಿಗೆ ಅಂಟಿಕೊಂಡಂತೆ ಕಮಂಡಲವಿದೆ. ಎರಡೂ ಕಿವಿಯ ಮೇಲೆ ಮುಕುಟದಿಂದ ಹೊರ ಚಾಚಿರುವಂತೆ ಜಟೆಯನ್ನು ಬಿಡಿಸಲಾಗಿದೆ. ಮುಕುಟದ ಮೇಲೆ ಪ್ರಭಾವಳಿಯಲ್ಲಿ ಕೀರ್ತಿಮುಖವಿದೆ. ಹೀಗೆ ರಾಜ ಪೋಷಾಕಿನಲ್ಲಿ ಯತಿ ಚಿಹ್ನೆಗಳನ್ನು ಹಿಡಿದಿರುವ ವಿಶಿಷ್ಟವಾದ ಅಪರೂಪದ ಶಿಲ್ಪ ಲಕ್ಷಣಗಳನ್ನು ಹೊಂದಿದೆ. ತ್ರಿಭಂಗಿಯಲ್ಲಿ ನಿಂತ ಶೈಲಿ, ಗಾತ್ರದಲ್ಲಿ ಸ್ವಲ್ಪ ಹಿಗ್ಗಿ ತುಸು ಉಬ್ಬಿರುವ ಕಣ್ಣು ಇತ್ಯಾದಿಗಳ ಆಧಾರದಲ್ಲಿ ಈ ವಿಗ್ರಹದ ಕಾಲ ವಿಜಯನಗರದ ಆರಂಭಕಾಲ ಎಂದು ಗುರುತಿಸಲಾಗಿದೆ.
ಕ್ರಿಯಾಶಕ್ತಿ ಯತಿಯ ವಿಗ್ರಹ ಎಂದು ಗುರುತಿಸಿದ್ದು ಹೇಗೆ?
ವಿಜಯನಗರದ ಆರಂಭಕಾಲದಲ್ಲಿ ಅದರಲ್ಲೂ ಬುಕ್ಕರಾಯನ ಕಾಲದಲ್ಲಿ ಅಂಕೋಲೆಯ ಭಾಗದಲ್ಲಿ ಕ್ರಿಯಾಶಕ್ತಿಗಳ ಪ್ರಭಾವ ಗಾಢವಾಗಿತ್ತು. ಈ ವಿಗ್ರಹದಿಂದ ವಾಯವ್ಯಕ್ಕೆ 3 ಕಿ.ಮೀ. ಅಂತರದಲ್ಲಿ ಭಾವಿಕೇರಿ ಹಾಗೂ ದಕ್ಷಿಣಕ್ಕೆ 6 ಕಿ.ಮೀ. ಅಂತರದಲ್ಲಿ ಬೆಳಸೆ ಗ್ರಾಮದಲ್ಲಿ ಒಂದೇ ದಿನ ಹೊರಡಿಸಿದ (ಶಕ ವರ್ಷ 1284, ಪ್ಲವ ಸಂವತ್ಸರ ಕಾರ್ತಿಕ ಶುದ್ಧ 1, ಆದಿವಾರ) ಬುಕ್ಕರಾಯನ ಶಾಸನಗಳಿವೆ. ಈ ಎರಡೂ ಶಾಸನಗಳಲ್ಲಿ ಬುಕ್ಕರಾಯನ ಅಧಿಕಾರಿ ಬಸವಯ್ಯ ದಂಡನಾಯಕನು ಕ್ರಿಯಾಶಕ್ತಿ ಯತೀಶ್ವರರಿಗೆ ಭೂಮಿದಾನ ನೀಡಿದ್ದನ್ನು ವಿವರಿಸುತ್ತದೆ. ಅಂಗಡಿಬೈಲಿನಲ್ಲಿ ದೊರೆತ ಶಾಸನವೂ ಸಹ ಕ್ರಿಯಾಶಕ್ತಿ ಯತೀಶ್ವರನನ್ನು ಉಲ್ಲೇಖಿಸುತ್ತದೆ.
ಇಲ್ಲಿಂದ 20ಕಿ.ಮೀ ದಕ್ಷಿಣದಲ್ಲಿರುವ ಪ್ರತಾಪದೇವರಾಯನ ಹಿರೇಗುತ್ತಿಯ ಶಾಸನ ವಿದ್ಯಾತೀರ್ಥರ ಶಿಷ್ಯ ನಾಗೇಂದ್ರತೀರ್ಥರಿಗೆ ದಾನ ನೀಡಿದ್ದನ್ನು ತಿಳಿಸುತ್ತದೆ. ಅದರಲ್ಲಿ ಬೆಳಸೆಯ ಶಾಸನ ಕ್ರಿಯಾಶಕ್ತಿಯ ಬಿರುದುಗಳನ್ನು ವಿವರಿಸುವಾಗ ಸಂಸ್ಕೃತ ಪ್ರಾಕೃತದಲ್ಲಿ ಪಂಡಿತನಾದ `ಕವಿಚಕ್ರವರ್ತಿ’ ಎನ್ನುವುದರ ಜೊತೆಗೆ “ಸೀಮೆಯ ಚಕ್ರವರ್ತಿ” ಎಂದೂ ಕರೆದಿದೆ. ಕ್ರಿ.ಶ. 1403ರ ಒಂದು ಶಾಸನ `ಕ್ರಿಯಾಶಕ್ತಿದೇವರಾಯವೊಡೆಯ’ ಎಂದು ಕರೆದಿದೆ. ಅಂದರೆ ಆ ಕಾಲದಲ್ಲಿ ಕ್ರಿಯಾಶಕ್ತಿಯವರನ್ನು ರಾಜನಿಗೆ ಸಮಾನವಾಗಿ ಕಾಣುತ್ತಿದ್ದರು ಎಂದು ಭಾವಿಸಬಹದಾಗಿದೆ.
ರಾಜನ ಗೌರವಕ್ಕೆ ಪಾತ್ರನಾದ ಸರ್ವಸಂಘಪರಿತ್ಯಾಗಿಯಾದ ಯತಿಯೊಬ್ಬರಿಗೆ ರಾಜ ಉಡುಗೆ, ಆಭರಣಗಳನ್ನು ತೊಡಲು ಸಂಪ್ರದಾಯ ಅಡ್ಡಿಯಾದ ಸಂದರ್ಭದಲ್ಲಿ ಆ ಯತಿಯ ವಿಗ್ರಹಮಾಡಿ ಅದಕ್ಕೆ ರಾಜಉಡುಗೆಯನ್ನು ತೊಡಸಿ ಸಂಭ್ರಮಿಸಿರಬೇಕು. ಇಲ್ಲವೇ ಯಾವುದೋ ವಿಶೇಷ ದಿನ, ಸಂದರ್ಭಗಳಲ್ಲಿ ಕ್ರಿಯಾಶಕ್ತಿ ಯತಿಗಳು ರಾಜ ಉಡುಗೆ, ಆಭರಣಗಳನ್ನು ತೊಡುತ್ತಿದ್ದಿರಬೇಕು. ಶೃಂಗೇರಿ, ರಂಭಾಪುರಿ ಮೊದಲಾದ ಶೈವ ಪರಂಪರೆಯ ಜಗದ್ಗುರುಗಳು ಈಗಲೂ ನವರಾತ್ರಿಯಲ್ಲಿ ಕಿರೀಟ, ಚಿನ್ನಾಭರಣಗಳನ್ನು ಧರಿಸಿ ರಾಜದರ್ಬಾರು ನಡೆಸುತ್ತಾರೆ. ಅಂಕೋಲೆಯಲ್ಲಿ ಇರುವ ವಿಗ್ರಹದ ಕಿರೀಟ ಮತ್ತು ನವರಾತ್ರಿಯಲ್ಲಿ ಶೃಂಗೇರಿಯ ಶ್ರೀಗಳು ತೊಡುವ ಕಿರೀಟ ವಿನ್ಯಾಸದಲ್ಲಿ ಬಹಳ ಸಾಮ್ಯತೆಯಿದೆ.
ಕ್ರಿಯಾಶಕ್ತಿ ಯತಿಗಳು ಕಾಳಾಮುಖ ಪರಂಪರೆಯಿಂದ ಬಂದವರಾಗಿದ್ದಾರೆ. ಇವರು ಕಲ್ಯಾಣ ಚಾಲುಕ್ಯರ ಅವಧಿಯಿಂದ ವಿಜಯನಗರದ ಸಂಗಮ ವಂಶದ ಆಳ್ವಿಕೆಯವರೆಗೆ ದೇವಾಲಯಗಳಲ್ಲಿ ಸ್ಥಾನಪತಿಗಳಾಗಿ ಅಥವಾ ಸ್ಥಾನಾಚಾರ್ಯರಾಗಿ ನೆಲೆಸಿದ್ದರು. ಈ ವಿಗ್ರಹ ಸಿಕ್ಕಿರುವ ಸ್ಥಳದಿಂದ ಕೇವಲ 1 ಕಿ.ಮೀ ಅಂತರದಲ್ಲಿರುವ ಕುಂಬಾರಕೇರಿಯ ಕದಂಬೇಶ್ವರ ದೇವಸ್ಥಾನದಲ್ಲಿ ದೊರೆತಿರುವ ಕ್ರಿ.ಶ. 997ರ ಎರಡನೇ ತೈಲಪನ ತಾಮ್ರ ಶಾಸನದಲ್ಲಿ `ಸಿವರಾಸಿ ಜೀಯರ ಕಾಲಂ ಕರ್ಚ್ಛಿ’ ಎಂಬ ಉಲ್ಲೇಖವಿದೆ. ಇದು ಅಂಕೋಲೆಯ ಭಾಗದಲ್ಲಿ ಕಾಳಾಮುಖ ಯತಿಗಳು ಸ್ಥಾನಾಚಾರ್ಯರಾಗಿದ್ದರು ಅನ್ನುವುದಕ್ಕೆ ಆಧಾರವಾಗಿದೆ. ವಿಜಯನಗರದ ಆರಂಭ ಕಾಲದಲ್ಲಿ ಬಹಳಷ್ಟು ಯತಿ ಪರಂಪರೆಯಲ್ಲಿ ಕ್ರಿಯಾಶಕ್ತಿ ಬಿರುದಿನ ಅಥವಾ ಹೆಸರಿನ ಒಬ್ಬ ಮುಖ್ಯಸ್ಥನಿರುತ್ತಿದ್ದ ಎಂಬ ಸಂಗತಿಯನ್ನು ವಿದ್ವಾಂಸರು ದಾಖಲಿಸಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ಈ ವಿಗ್ರಹವನ್ನು `ಕ್ರಿಯಾಶಕ್ತಿ ಯತಿ’ಯ ವಿಗ್ರಹ ಎಂದು ಗುರುತಿಸಿದ್ದೇನೆ. – ಶ್ಯಾಮಸುಂದರ ಗೌಡ, ಅಂಕೋಲಾ ವಿಗ್ರಹದ ಶೋಧಕರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ