Follow Us On

WhatsApp Group
Big News
Trending

ವರದಹಳ್ಳಿ ಗುರುಭಕ್ತರಲ್ಲಿ ವಿನಂತಿ

ಆತ್ಮೀಯ ಗುರುಬಂಧುಗಳೇ
ಎಂದಿನಂತೆ ನಡೆಯುತ್ತಿದೆ ತ್ರಿಕಾಲಪೂಜೆ
ಇನ್ನೂ ಸ್ವಲ್ಪದಿನ ಭಕ್ತರಿಗಿಲ್ಲ ಪ್ರವೇಶ

ದಿನಾಂಕ 20-03-2020ರಿಂದ ಶ್ರೀ ಶ್ರೀಧರಾಶ್ರಮ ಶ್ರೀಕ್ಷೇತ್ರ ವರದಪುರವು ಸಾರ್ವಜನಿಕರ ಪ್ರವೇಶ ಮತ್ತು ಶ್ರೀ ಗುರುದರ್ಶನಕ್ಕೆ ನಿರ್ಬಂಧಿಸಿಕೊಂಡು ಬಂದಿದೆ. ಸರ್ಕಾರವು ನಿರ್ಬಂಧವನ್ನು ತೆರವುಗೊಳಿಸಿದ ಮೇಲೂ ಈ ಪ್ರಾಂತ್ಯದ ಜನರ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಬಂಧವನ್ನು ಮುಂದುವರೆಸಿಕೊಂಡು ಬರುತ್ತಿರುವುದು ತಮಗೆಲ್ಲರಿಗೂ ತಿಳಿದ ವಿಷಯವೇ ಸರಿ. ಈಗ ನೆರೆ ಜಿಲ್ಲೆಗಳಲ್ಲಿ ಮತ್ತು ನೆರೆ ರಾಜ್ಯಗಳಲ್ಲಿ ಅಲ್ಲದೇ, ನಮ್ಮ ಪ್ರದೇಶದಲ್ಲೂ ಕೂಡಾ ಈ ರೋಗದ ಹರಡುವಿಕೆಯ ಲಕ್ಷಣಗಳು ಕಂಡು ಬರುತ್ತಿರುವದರಿಂದ ಮತ್ತು ಶ್ರೀ ಶ್ರೀಧರಾಶ್ರಮಕ್ಕೆ ಭೇಟಿ ಕೊಡಲು ಹೊರ ರಾಜ್ಯ ಮತ್ತು ಹೊರ ಜಿಲ್ಲೆಯ ಜನಗಳು ಸತತ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಆದರೆ ಶ್ರೀ ಶ್ರೀಧರಾಶ್ರಮದ ಹಿತ ದೃಷ್ಟಿಯಿಂದ ಮತ್ತು ನಮ್ಮ ಪ್ರಾಂತ್ಯದ ಹಿತ ದೃಷ್ಟಿಯಿಂದ ಈ ಪ್ರಯತ್ನವನ್ನು ಶ್ರೀ ಮಹಾಮಂಡಲವು ನಿರ್ದಾಕ್ಷಿಣ್ಯವಾಗಿ ತಡೆಯುತ್ತ ಬಂದಿರುತ್ತದೆ. ಈಗ ಸದ್ಯದಲ್ಲೆ ಶ್ರೀ ಗುರುಪೂರ್ಣಿಮೆ ಉತ್ಸವ ಬರುತ್ತದೆ. ಈ ಕಾರಣದಿಂದ ಈಗಾಗಲೇ ಹಲವಾರು ಭಕ್ತಾದಿಗಳು ಮತ್ತು ಜನರು ಶ್ರೀ ಶ್ರೀಧರಾಶ್ರಮದ ನಿರ್ಬಂಧವನ್ನು ತೆಗೆಯಲು ಒತ್ತಾಯಿಸುತ್ತಿದ್ದಾರೆ, ಅಲ್ಲದೇ ನಾನಾ ರೀತಿಯ ಒತ್ತಡವನ್ನು ಕೂಡಾ ತರುತ್ತಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ನಿರ್ಬಂಧ ತೆರವುಗೊಳಿಸುವುದು ಶ್ರೀ ಆಶ್ರಮದ ಹಿತದೃಷ್ಟಿಯಿಂದಲೂ ಮತ್ತು ಸಾಗರ ಪ್ರಾಂತ್ಯದ ಸಾಮಾಜಿಕ ಮತ್ತು ಸಾಮುದಾಯಿಕ ಆರೋಗ್ಯ ದೃಷ್ಟಿಯಿಂದಲೂ ಕ್ಷೇಮಕರವಲ್ಲವೆಂದು ಶ್ರೀ ಗುರು ಭಕ್ತರಾದ ವೈರಾಣು ತಜ್ಞರುಗಳು, ವೈದ್ಯರುಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಶ್ರೀ ಮಹಾಮಂಡಲಕ್ಕೆ ಸಲಹೆಯನ್ನು ನೀಡಿರುತ್ತಾರೆ. ಇವರೆಲ್ಲರ ಸಲಹೆಯನ್ನು ಕೂಲಂಕುಶವಾಗಿ ಪರಿಶೀಲಿಸಿ ಮತ್ತು ತಜ್ಞರುಗಳೊಡನೆ ಸಮಾಲೋಚಿಸಿ ಸದ್ಯದ ಪರಿಸ್ಥಿತಿಯಲ್ಲಿ ನಿರ್ಬಂಧವನ್ನು ಸಡಿಲಗೊಳಿಸದೆ ಯಥಾವತ್ತಾಗಿ ಈಗಿರುವ ನಿಯಮವನ್ನೇ ಪಾಲಿಸಿಕೊಂಡು ಹೋಗಲು ಶ್ರೀ ಶ್ರೀಧರ ಸೇವಾ ಮಹಾಮಂಡಲವು ತೀರ್ಮಾನಿಸಿರುತ್ತದೆ. ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳವರ ಸನ್ನಿಧಿಯಲ್ಲಿ ಎಂದಿನಂತೆ ತ್ರಿಕಾಲ ಪೂಜೆ ಮತ್ತಿತರ ಸೇವಾ ಕಾರ್ಯಗಳು ಹಾಗೂ ಸೇವಾದಾರರ ಖಾಯಂ ಸೇವೆಗಳು ಚಾಚೂ ತಪ್ಪದೆ ಶುದ್ಧವಾಗಿ ನಡೆಯುತ್ತಿದೆ. ಈ ಸೇವಾ ಕಾರ್ಯ ಬಹುಮುಖ್ಯವೆಂದು ಶ್ರೀ ಮಹಾಮಂಡಲವು ಭಾವಿಸುತ್ತದೆ. ಅಲ್ಲದೇ ಶ್ರೀ ಆಶ್ರಮದ ಒಳಗಿರುವ ಗೋಶಾಲೆಯಲ್ಲಿ 200ಕ್ಕೂ ಹೆಚ್ಚು ಗೋವುಗಳಿದ್ದಾವೆ, ಇವುಗಳ ಸೇವಾ ಕಾರ್ಯವು ಕೂಡಾ ಅತಿ ಶಿಸ್ತಿನಿಂದ ನಡೆಯುತ್ತಿದೆ. ಸಾರ್ವಜನಿಕರು ನಿರ್ಬಂಧವನ್ನು ತೆರವುಗೊಳಿಸಲು ಅತಿ ಒತ್ತಾಯ ಮಾಡಿದಲ್ಲಿ ಅಥವಾ ಅದಕ್ಕೆ ನಾನಾ ವಿಧವಾಗಿ ಪ್ರಯತ್ನಿಸಿದಲ್ಲಿ ಶ್ರೀ ಭಗವಾನರ ಪೂಜಾ ಕೈಂಕರ್ಯಗಳು ಮತ್ತು ಈ ಗೋವುಗಳ ಸೇವೆಗಳು ಏನಾಗುತ್ತದೆ ಎನ್ನುವ ಬಗ್ಗೆ ತಾವೆಲ್ಲರೂ ಶಾಂತ ಮನಸ್ಸಿನಿಂದ ವಿಚಾರ ಮಾಡಬೇಕಾಗಿ ವಿನಂತಿ.

ಯಾವುದೇ ಒತ್ತಡವನ್ನು ಶ್ರೀ ಮಹಾಮಂಡಲದ ಮೇಲೆ ದಯಮಾಡಿ ತರಬಾರದಾಗಿ ತಮಗೆಲ್ಲರಿಗೂ ಕೈ ಮುಗಿದು ವಿನಂತಿಯನ್ನು ಮಾಡಿಕೊಳ್ಳುತ್ತೇವೆ. ನಮ್ಮ ವಿನಂತಿಯನ್ನು ತಾವೆಲ್ಲರೂ ಪುರಸ್ಕರಿಸಿ ಶ್ರೀ ಭಗವಾನರ ಪೂಜಾ ಕೈಂಕರ್ಯಗಳು ಮತ್ತು ಗೋಸೇವೆಗಳು ನಿರ್ವಿಘ್ನವಾಗಿ ನಡೆಯಲು ಅನುವು ಮಾಡಿಕೊಡುತ್ತೀರಾಗಿ ನಂಬಿರುತ್ತೇವೆ. -ಶ್ರೀ ಶ್ರೀಧರ ಸೇವಾ ಮಹಾಮಂಡಲ(ರಿ.)ಶ್ರೀ ಶ್ರೀಧರಾಶ್ರಮ-ಶ್ರೀಕ್ಷೇತ್ರ ವರದಪುರ

[sliders_pack id=”1487″]

Back to top button