ಅಂಕೋಲಾ: ಬ್ಯಾಂಕ್ ಎಂದೊಡನೆ ಸಾಮಾನ್ಯವಾಗಿ ಎಲ್ಲರಿಗೂ ಥಟ್ಟನೆ ನೆನಪಿಗೆ ಬರುವುದು ಅಲ್ಲಿನ ಹಣಕಾಸು ವ್ಯವಹಾರ. ಅದರ ಹೊರತಾಗಿ ಬ್ಲಡ್ ಬ್ಯಾಂಕ್ ಮತ್ತು ಅದರ ಪ್ರಯೋಜನಗಳನ್ನು ಹಲವರು ಕೇಳಿದ್ದಾರೆ ಪಡೆದಿದ್ದಾರೆ. ಈ ನಡುವೆ ಅಂಕೋಲಾದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯೊಂದು,ತನ್ನ ವಿದ್ಯಾರ್ಥಿಗಳ ಅನುಕೂಲತೆಗಾಗಿ ಪ್ರಾಚಾರ್ಯ ವಿನಾಯಕ ಹೆಗಡೆ ಪರಿಕಲ್ಪನೆಯಲ್ಲಿ ಹೊಸದೊಂದು ಪ್ರಯತ್ನ ಮುಂದುವರಿಸಿಕೊಂಡು, ಬುಕ್ ಬ್ಯಾಂಕ್ ಎಂಬ ಶೈಕ್ಷಣಿಕ ಉತ್ತೇಜನ ಕಾರ್ಯಕ್ರಮಕ್ಕೆ ಮುಂದಾಗಿದೆ. ಪಟ್ಟಣದ ಕೆ.ಎಲ್.ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಅಂಕೋಲಾ, ಪೂರ್ವ ವಿದ್ಯಾರ್ಥಿ ಸಂಘ ಹಾಗೂ ಎನ್.ಎಸ್.ಎಸ್. ಘಟಕದ ಸಹಯೋಗದಲ್ಲಿ ‘ಬುಕ್ ಬ್ಯಾಂಕ್’ಯೋಜನೆಯನ್ನು ಇದೇ ಜುಲೈ 11 ರಿಂದ ಪ್ರಾರಂಭಿಸಲಾಗುತ್ತಿದೆ.
ಈ ಯೋಜನೆಯ ಮೂಲಕ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಹೆಚ್ಚಿಸುವುದು, ಅದರ ಕುರಿತು ಜಗೃತಿ ಮೂಡಿಸುವುದು, ಹಾಗೂ ಕೆಲ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುಸ್ತಕ ಖರೀದಿಸಲಾಗದೇ ಓದಲು ಕಷ್ಟ ಪಡುವುದು ಇಲ್ಲವೇ ವಿದ್ಯಾಭ್ಯಾಸ ಮೊಟಕುಗೊಳಿಸುವ ಸಾಧ್ಯತೆ ಇರುವುದರಿಂದ ಅಂತವರಿಗೆ ಉಚಿತವಾಗಿ ರೊಟೇಶನ್ ಆಧಾರದಲ್ಲಿ ಪುಸ್ತಕ ನೀಡುವುದು. ಆ ಮೂಲಕ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಿಸಿ ಸ್ಪರ್ಧೆಗೆ ಅಣಿಗೊಳಿಸುವ ಉದ್ದೇಶ ಹೊಂದಲಾಗಿದೆ.
ಅಲ್ಲದೇ ಈ ಯೋಜನೆಯ ಮೂಲಕ ಬಿ.ಇಡಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಹಳೆಯ ಹಾಗೂ ಹೊಸ ಪುಸ್ತಕಗಳನ್ನು ಪೂರ್ವ ವಿದಾರ್ಥಿಗಳು, ವಿದಾರ್ಥಿಗಳು ಹಾಗೂ ದಾನಿಗಳು ಹಾಗೂ ಶಿಕ್ಷಣ ಪ್ರೇಮಿಗಳ ಸಹಾಯ ಸಹಕಾರದಿಂದ ಸಂಗ್ರಹಿಸಿ ಅದನ್ನು ಅವಶ್ಯಕತೆ ಇರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುವುದು ಎಂದು ಕೆ.ಎಲ್.ಇ ಸಂಸ್ಥೆ ಅಂಕೋಲಾದ ಕಾರ್ಯದರ್ಶಿಗಳಾದ ಡಾ|| ಡಿ.ಎಲ್.ಭಟ್ಕಳ, ಸಂಯೋಜಕರಾದ ಆರ್. ನಟರಾಜ, ಸದಸ್ಯರಾದ ಡಾ. ಮೀನಲ್ ನಾರ್ವೇಕರ ಹಾಗೂ ಪ್ರಾಚಾರ್ಯ ಡಾ. ವಿನಾಯಕ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿ, ಬುಕ್ ಬ್ಯಾಂಕ್ ಯೋಜನೆ ಸಫಲವಾಗಲು ಸರ್ವರ ಸಹಕಾರ ಕೋರಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ