ಬುಡ ಸಮೇತ ಕಿತ್ತು ಬಿದ್ದು ಮನೆಯ ಮೇಲೆ ಒರಗಿ ಬಿದ್ದ ಭಾರೀ ಗಾತ್ರದ ಮರ : ತಪ್ಪಿದ ಪ್ರಾಣಾಪಾಯ

ಅಂಕೋಲಾ : ಭಾರೀ ಗಾತ್ರದ ಮರವೊಂದು  ಬುಡ ಮೇಲಾಗಿ ಕಿತ್ತು ಬಿದ್ದು ಮರದ ದೊಡ್ಡ ದೊಡ್ಡ ರೆಂಬೆ ಕೊಂಬೆಗಳು ಮನೆಯ ಮೇಲೆ ಒರಗಿದ್ದರಿಂದ ಮನೆ ಬಹುತೇಕ ಜಖಂ ಗೊಂಡ ಘಟನೆ ಪುರಸಭೆ ವ್ಯಾಪ್ತಿಯ ಹನುಮಟ್ಟ ವಾರ್ಡಿನ ವಂದಿಗೆ ಎಸ್ ಸಿ ಕಾಲೋನಿಯ ಅಂಬೇಡ್ಕರ ಭವನದ ಪಕ್ಕ ಸಂಭವಿಸಿದೆ.        

ಗೌರಿ ಬೊಮ್ಮಯ್ಯ ವಂದಿಗೆ ಇವರ ವಾಸ್ತವ್ಯದ ಮನೆಯೇ ಮರಬಿದ್ದು ಹಾನಿಗೊಳಗಾಗಿದೆ. ಅವರ ಮನೆಯ ಪಕ್ಕದ ಮಾಲ್ಕಿ ಜಮೀನಿನಲ್ಲಿದ್ದ ಬೃಹತ್ತ್ ಗಾತ್ರದ ಮರವೊಂದು ಬುಡ ಮೇಲಾಗಿ ಕಿತ್ತು ಬಿದ್ದು , ಗೌರಿ ಅವರ ಮನೆಯ ಮೇಲೆ ರೆಂಬೆ ಕೊಂಬೆಗಳು ಅಪ್ಪಳಿಸಿದ ಪರಿಣಾಮ ಮನೆಯ ಮೇಲ್ಚಾವಣಿ ಸಂಪೂರ್ಣ ಹಾನಿಗೊಳಗಾಗಿದೆ. ಯಲ್ಲದೇ ಹಂಚು –  ಪಕಾಸಿ – ರೀಪುಗಳು  ಬಿದ್ದು ಮನೆಯೊಳಗಿನ ಸಾಮಗ್ರಿಗಳೂ ಹಾನಿಗೊಳಗಾಗಿದೆ.

ಹೊರಗಡೆ ಮರ ಮುರಿದು ಬೀಳುವ ಶಬ್ದ ಕೇಳಿ ಬಂದಂತಾಗಿ ಮನೆಯಿಂದ ಹೊರ ಓಡಿ ಬರಲೆತ್ನಿಸಿದ ಕುಟುಂಬದ ಕಿರಿಯ ಸದಸ್ಯನ ತಲೆ, ಭುಜ ಹಾಗೂ ಕ್ಯೆಗಳ ಬಳಿ ಮೇಲಿನಿಂದ ಹಂಚಿನ ಚೂರುಗಳು ಬಿದ್ದು ಚಿಕ್ಕ ಪುಟ್ಟ  ಗಾಯಗಳಾಗಿದ್ದು ಸಂಭವನೀಯ ಭಾರೀ ಅಪಾಯದಿಂದ ಪಾರಾಗಿದ್ದಾನೆ.ಅದೃಷ್ಟ ವಶಾತ್ ಮನೆಯ ಯಜಮಾನಿ ಮತ್ತಿತರ ಸದಸ್ಯರು ಮರ ಬೀಳುವ ಸಮಯದಲ್ಲಿ ಮನೆಯಲ್ಲಿ ಇರದೇ ಇರುವುದರಿಂದ ಯಾರಿಗೂ ಅಪಾಯವಾಗಿಲ್ಲ, ಸುದ್ದಿ ತಿಳಿದ ತಹಶೀಲ್ದಾರ ಪ್ರವೀಣ ಹುಚ್ಚಣ್ಣನವರ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು ಘಟನಾ ಸ್ಥಳ ಪರಿಶೀಲಿಸಿ, ಕಾನೂನು ರೀತ್ಯ ನೊಂದ ಕುಟುಂಬಕ್ಕೆ ಆದಷ್ಟು ಶೀಘ್ರ ಯೋಗ್ಯ ಪರಿಹಾರ ನೀಡುವ ಭರವಸೆ ನೀಡಿದರು. ಸ್ಥಳೀಯ ವಾರ್ಡ್ ಸದಸ್ಯೆ ರೇಖಾ ದಿನಕರ ಗಾಂವಕರ, ವಂದಿಗೆ ಗ್ರಾಪಂ ಮಾಜಿ ಅಧ್ಯಕ್ಷ ನಾರಾಯಣ ನಾಯಕ ಹಾಗೂ ಸ್ಥಳೀಯ ಪ್ರಮುಖರು, ಈ ಹಿಂದೆ ಪತಿಯನ್ನು ಕಳೆದು ಕೊಂಡಿರುವ ಗೌರಿ ಕುಟುಂಬದ ಶೋಚನೀಯ ಪರಿಸ್ಥಿತಿಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ, ಅವರ ತಾತ್ಕಾಲಿಕ ವಸತಿ  ಹಾಗೂ ಮುಂದಿನ ಯೋಗ್ಯ ಪರಿಹಾರಕ್ಕೆ ವಿನಂತಿಸಿದರು.

ಪುರಸಭೆ ಅಧಿಕಾರಿಗಳಾದ ಡಿ.ಎಲ್. ರಾಠೋಡ, ವಿಷ್ಣು ಗೌಡ, ಸಿಬ್ಬಂದಿ ಉಮಾಕಾಂತ ಮತ್ತಿತರರು ಸ್ಥಳದಲ್ಲಿ ಹಾಜರಿದ್ದು, ನೊಂದ ಕುಟುಂಬಕ್ಕೆ ಅವರ ಮನೆಯ ಪಕ್ಕದ ಅಂಬೇಡ್ಕರ ಸಭಾಭವನದಲ್ಲಿ ತಾತ್ಕಾಲಿಕ ವಸತಿಗೆ ವ್ಯವಸ್ಥೆ ಮಾಡಲು ಕ್ರಮ ಕೈಗೊಂಡರು. ಸ್ಥಳೀಯ ಮುಖಂಡರು, ಯುವಕರು, ಊರ ನಾಗರಿಕರು ಸಹಕರಿಸಿದರು. ಕಂದಾಯ ಇಲಾಖೆಯ ರಾಘವೇಂದ್ರ ಜನ್ನು, ಗ್ರಾಮ ಲೆಕ್ಕಿಗ ಲಕ್ಷ್ಮಿ , ಗ್ರಾಮ ಸಹಾಯಕ ಗುರು ಮತ್ತಿತರರಿದ್ದರು. 112 ತುರ್ತು ವಾಹನ ಸಿಬ್ಬಂದಿ ಸಂತೋಷ ಮತ್ತಿತರರಿದ್ದರು.

ಮರ ಬಿದ್ದು ಗೌರಿ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿರುವ ಸಾಧ್ಯತೆ ಇದ್ದು ,ಆನೆಯ ನಿಖರ ಅಂದಾಜು ತಿಳಿದು ಬರಬೇಕಿದೆ. ಈ ಮೊದಲೇ ಪತಿಯ ಸಾವಿನಿಂದ ನೊಂದಿದ್ದ ಗೌರಿ, ಧ್ಯೆರ್ಯಗುಂದದೇ ತನ್ನ ಮಕ್ಕಳನ್ನು ಸಾಕಿ ಸಲಹುವ ಜವಾಬ್ದಾರಿ ತೆಗೆದುಕೊಂಡು ಮನೆಯ ಯಜಮಾನತಿಯಾಗಿ ಕಷ್ಟದಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದಾಗ, ಸಾಲ ಮಾಡಿ ಕಟ್ಟಿದ ಮನೆಯೇ ಹಾನಿ ಗೊಳಿಗಾಗಿ ತೀವೃ ದುಃಖ ಪಡುವಂತಾಗಿದೆ. ಸರ್ಕಾರದ ಪರಿಹಾರದ ಜೊತೆ ಮಾನವೀಯ ನೆಲೆಯಲ್ಲಿಯೂ ನೊಂದ ಕುಟುಂಬಕ್ಕೆ , ಆಹಾರ ಸಾಮಗ್ರಿ, ಉಡುಪು , ವಸತಿ ಸೌಕರ್ಯ ಪುನರ್ ನಿರ್ಮಾಣ  ಸೇರಿದಂತೆ ತುರ್ತು ನೆರವನ್ನು ದಾನಿಗಳು, ಸ್ಥಳೀಯ ಸಂಘ ಸಂಸ್ಥೆಗಳು ನೀಡಬೇಕೆನ್ನುವದು ಸ್ಥಳೀಯರ ಆಗ್ರಹವಾಗಿದೆ.

ಬೆಂಗಳೂರಿನಲ್ಲಿರುವ ಶಾಸಕ ಸತೀಶ ಸೈಲ್, ಘಟನೆ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು, ನೊಂದ ಕುಟುಂಬದ ತುರ್ತು  ವಸತಿ, ಸಿಗಬೇಕಾದ ಯೋಗ್ಯ  ಪರಿಹಾರದ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಮತ್ತು ಅಧಿವೇಶನ ಮುಗಿದ ತಕ್ಷಣ , ಅಂಕೋಲಾಕ್ಕೆ ಬಂದಾಗ ನೊಂದ ಕುಟುಂಬದವರನ್ನು ಭೇಟಿಯಾಗುವುದಾಗಿ ತಿಳಿಸಿ, ಬಡ ಕುಟುಂಬಕ್ಕೆ ಭರವಸೆ ಮೂಡಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version