ಅಂಕೋಲಾ: ಬೇಣದ ಗೋಪಾಲಣ್ಣ ಎಂದೇ ಪರಿಚಿತರಾಗಿದ್ದ ತಾಲೂಕಿನ ಬಾಸಗೋಡದ ನಿವಾಸಿ ಗೋಪಾಲ ಮೋನಪ್ಪ ನಾಯಕ ಅವರು ಶುಕ್ರವಾರ ವಿಧಿವಶರಾದರು.. ರೈತಾಬಿ ಮೂಲ ಕಸುಬಿನ ಇವರು ಹೈನುಗಾರಿಕೆ ಹಾಗೂ ಸಣ್ಣ ಹೋಟೆಲ್ ನಡೆಸುವ ಮೂಲಕವೂ ಸ್ವಾವಲಂಬಿಬದುಕಟ್ಟಿಕೊಂಡಿದ್ದರು. ತಮ್ಮ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹಾಗೂ ಕೆಲವೊಂದು ಹಾಸ್ಯ ಪ್ರವೃತ್ತಿ ಮೂಲಕವೂ ಊರ ಹಾಗೂ ಸುತ್ತಮುತ್ತಲಿನ ಅಪಾರ ಜನರ ಪ್ರೀತಿ ವಿಶ್ವಾಸ ಗಳಿಸಿ ಬಾಳಿ ಬದುಕಿದ್ದರು.
ಬಾಸಗೋಡ ಊರಿನ ದೇವರ ಭಜನಾ ಕಾರ್ಯಕ್ರಮಗಳಲ್ಲಿ ಸದಾ ಸಕ್ರಿಯವಾಗಿ ತೊಡಗಿಸಿಕೊಂಡು, ಡೋಲು- ತಾಳ ವಾದ್ಯದೊಂದಿಗೆ ಭಜನೆ ಮತ್ತಿತರ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಊರವರೊಂದಿಗೆ ವಿಶೇಷ ಸಹಕಾರ – ಸೇವೆ ಸಲ್ಲಿಸುತ್ತಿದ್ದರು.
ಪಾಕ ಶಾಸ್ತ್ರ ಪ್ರವೀಣರಾದ ಇವರು ಈರುಳ್ಳಿ ಬಜ್ಜಿ, ಕೋಳಿ ಸಾರು ತಯಾರಿಸುವಲ್ಲಿ ಸಿದ್ಧಹಸ್ತರಾಗಿದ್ದರು.
ಮೃತರ ಅಂತ್ಯಕ್ರಿಯೆಯನ್ನು ಬಾಸಗೋಡಿನ ನಡುಬೇಣದ ಪಕ್ಕದ ಸ್ಮಶಾನ ಭೂಮಿಯಲ್ಲಿ ನೆರವೇರಿಸಲಾಯಿತು.
ಮಗಳು ಸೌಮ್ಯ ನಾಯಕ ತಂದೆಯ ಚಿತೆಗೆ ಅಗ್ನಿ ಸ್ಪರ್ಷ ಮಾಡಿ, ಅಂತಿಮ ವಿಧಿ-ವಿಧಾನ ಮಾಡುವ ಮೂಲಕ ಪಿತ್ರ ಶೋಕದ ನಡುವೆಯೂ, ಗಟ್ಟಿ ಮನಸ್ಸಿನಿಂದ ಸ್ಮಶಾನ ಭೂಮಿಗೆ ಬಂದು ಬಲು ಅಪರೂಪದ ಘಟನೆಗೆ ಸಾಕ್ಷಿಯಾದರು. ಗೋಪಾಲ ನಾಯಕ ಕುಟುಂಬ ಸದಸ್ಯರು, ಬಂಧುಗಳು, ಬಾಸಗೋಡ ಊರ ನಾಗರಿಕರು ಅಂತ್ಯಕ್ರಿಯೆ ನೆರವೇರಿಸಲು ಸಹಕರಿಸಿದರು. ಬಾಸಗೋಡ – ಬೆಳಂಬಾರ- ಕೋಗ್ರೆ ಹಾಗೂ ಸುತ್ತಮುತ್ತಲ ನೂರಾರು ನಾಗರಿಕರು ಮೃತರ ಅಂತಿಮ ದರ್ಶನ ಪಡೆದು ಕೊಂಡರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ