ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಬಸ್‌ : ಹೊರ ಸಿಡಿದು ಬಿದ್ದ ಚಾಲಕ ಸ್ಥಳದಲ್ಲೇ ಸಾವು

ಅಂಕೋಲಾ: ರಾ ಹೆ 63ರ ಹುಬ್ಬಳ್ಳಿ ಯಲ್ಲಾಪುರ ಮಾರ್ಗಮಧ್ಯೆ, ಖಾಸಗಿ ಬಸ್ಸೊಂದು ಹೆದ್ದಾರಿ ಅಂಚಿನ ವಿದ್ಯುತ್ ಕಂಬಕ್ಕೆ ಡಿಕ್ಕಿಪಡಿಸಿಕೊಂಡು ಪಲ್ಟಿಯಾದ ಪರಿಣಾಮ, ಬಸ್ಸಿನಿಂದ ಸಿಡಿದು ಬಿದ್ದ  ಚಾಲಕ ಸ್ಥಳದಲ್ಲೇ ಮೃತಪಟ್ಟು, ಕೆಲ ಪ್ರಯಾಣಿಕರಿಗೆ ಗಾಯಗಳಾದ ಘಟನೆ ಸಂಭವಿಸಿದೆ. ಬೆಂಗಳೂರಿನಿಂದ ಗೋವಾಗೆ ಪ್ರಯಾಣಿಕರನ್ನು ಸಾಗುತ್ತಿದ್ದ ಖಾಸಗಿ ಬಸ್ (KA 51 AH 7217) ಯಲ್ಲಾಪುರ ಪಟ್ಟಣದ 5-6 ಕಿ.ಮೀ ದೂರದಲ್ಲಿ, ಅದಾವುದೋ ಕಾರಣದಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ಪರಿಣಾಮ ಬಸ್ ಹೆದ್ದಾರಿ ಮದ್ಯ ಪಲ್ಟಿಯಾಗಿ, ಕಿರಣ ಎನ್ನಲಾದ ಚಾಲಕ  ಬಸ್ ನಿಂದ ಹೊರ ಸಿಡಿದು ಬಿದ್ದು ಇಲ್ಲವೇ ಹಾರಿ ತಪ್ಪಿಸಿಕೊಳ್ಳುವ ಯತ್ನದಲ್ಲಿ ಹೆದ್ದಾರಿ ಅಂಚಿನ ಕಾಂಕ್ರೀಟ್ ಗಟಾರದ ಬಳಿ ಬಿದ್ದು, ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟು, ಬಸ್ಸಿನಲ್ಲಿ  ಪ್ರಯಾಣಿಸುತ್ತಿದ್ದ  ಪ್ರಯಾಣಿಕರನೇಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಸ್ಥಳೀಯ  ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಾಗ ಕಂಬ ಮುರಿದು,ತಂತಿಗಳು ಜೋತು ಬಿದ್ದು ಅಪಾಯದ ಸಾಧ್ಯತೆಗಳು ಹೆಚ್ಚಿದ್ದವು, ಅಲ್ಲದೇ ಬಸ್ ಸಹ  ಒಮ್ಮೆಲೆ ಪಲ್ಟಿಯಾದರೂ ನಾವೆಲ್ಲ  ಅದೃಷ್ಟದಿಂದ ಬದುಕುಳಿಯಲು ದೈವೀ ಕೃಪೆಯೇ ಕಾರಣ ಎಂದು ಕೆಲ ಪ್ರಯಾಣಿಕರು ನಂಬಿಕೆ ವ್ಯಕ್ತಪಡಿಸಿದ್ದಾರೆ.

ಬಸ್ ಡಿಕ್ಕಿ ಪಡಿಸಿದ ಪರಿಣಾಮ ವಿದ್ಯುತ್ತ್ ಕಂಬ ಮುರಿದು  ಹೆದ್ದಾರಿಯಲ್ಲಿ ಬಿದ್ದಿದ್ದಲ್ಲದೇ, ಬಸ್ ಸಹ ಹೆದ್ದಾರಿಯಲ್ಲಿ ಪಲ್ಟಿ ಆಗಿರುವುದರಿಂದ ,ಈ ಮಾರ್ಗವಾಗಿ ಸಾಗುವ ಇತರೆ ವಾಹನಗಳ ಸಂಚಾರಕ್ಕೆ ವ್ಯತ್ಯಯವಾಗಿ,ಹೆದ್ದಾರಿಯ ಇಕ್ಕೆಲಗಳಲ್ಲಿ ವಾಹನಗಳು ಬಹು ದೂರದವರೆಗೆ ಸಾಲುಗಟ್ಟಿ ನಿಲುವಂತಾಯಿತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಹೆದ್ದಾರಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಕ್ರಮ ವಹಿಸಿದ್ದು,ಅಪಘಾತದ ಘಟನೆಯ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version