Important
Trending

ಟ್ರಾಲಿ ಹಾಗೂ ಲಾರಿ ನಡುವೆ ಅಪಘಾತ: 3 ತಾಸಿಗೂ ಹೆಚ್ಚು ಕಾಲ ಸಂಚಾರ ವ್ಯತ್ಯಯ

ಅಂಕೋಲಾ: ಹೆದ್ದಾರಿಯಲ್ಲಿನ ಹೊಂಡ ಗುಂಡಿಗಳು ಮತ್ತಿತರ ಕಾರಣದಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಅಂಕೋಲಾ ಹುಬ್ಬಳ್ಳಿ ಮಾರ್ಗ ಮಧ್ಯೆ ಶುಕ್ರವಾರ ಭಾರಿ ಗಾತ್ರದ ಟ್ರಾಲಿ ಹಾಗೂ ಲಾರಿ ನಡುವೆ ರಸ್ತೆ ಅಪಘಾತ ಸಂಭವಿಸಿ, ಹೆದ್ದಾರಿ ಸಂಚಾರ ಮೂರು ತಾಸಿಗೂ ಹೆಚ್ಚು ಕಾಲ ವ್ಯತ್ಯಯವಾದ ಘಟನೆ ಅಂಕೋಲಾ ತಾಲೂಕಿನ ಸುಂಕಸಾಳ ವ್ಯಾಪ್ತಿಯ ನವಮಿ ಹೋಟೆಲ್ ಹತ್ತಿರ ಸಂಭವಿಸಿದೆ. ಮಂಗಳೂರಿನಿಂದ – ಮುಂಬೈ ಕಡೆ ಅದಾವುದೋ ಯಂತ್ರವನ್ನು ಸಾಗಿಸುತ್ತಿದ್ದ ಭಾರೀ ಗಾತ್ರದ ಟ್ರಾಲಿ ಮತ್ತು ಬಳ್ಳಾರಿಯಿಂದ ಗೋವಾ ಕಡೆ ಮ್ಯಾಂಗನಿಸ್ ಸಾಗಿಸುತ್ತಿತ್ತು ಎನ್ನಲಾದ ಲಾರಿಯ ನಡುವೆ ಈ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ.

ಆದರೆ ಭಾರೀ ಗಾತ್ರದ ಈ ಲಾರಿಗಳ ಡಿಕ್ಕಿಯಿಂದ ಹೆದ್ದಾರಿ ಸಂಚಾರ ಬಹು ಹೊತ್ತು ಸ್ಥಗಿತಗೊಂಡು,ಇತರೆ ವಾಹನದವರು ಪರದಾಡುವಂತಾಯಿತು. ಅಂಕೋಲಾ – ಯಲ್ಲಾಪುರ ಮಾರ್ಗ ಮದ್ಯೆ ಸಂಭವಿಸಿದ ಈ ರಸ್ತೆ ಅಪಘಾತದಿಂದ ಮೂರು ತಾಸಿಗೂ ಹೆಚ್ಚು ಕಾಲ ಹೆದ್ದಾರಿಯ ಎರಡೂ ಕಡೆ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿ,ತುರ್ತಾಗಿ ಬೇರೆ ಬೇರೆ ಕೆಲಸಗಳಿಗೆ ತೆರಳಬೇಕಿದ್ದ ಹಲವರು ತಮ್ಮ ಮುಂದಿನ ಪಯಣಕ್ಕೆ ಪ್ರಯಾಸ ಪಡುವಂತಾಯಿತು. ದೊಡ್ಡ ಕ್ರೇನ್ ಬಳಸಿ ಅಪಘಾತ ಗೊಂಡ ವಾಹನಗಳನ್ನು ಪಕ್ಕಕ್ಕೆ ಸರಿಸಿ , ಇತರೆ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಯಿತು..

ಹೆದ್ದಾರಿ ಗಸ್ತು ವಾಹನ ದ ಸಿಬ್ಬಂದಿಗಳು,ಸುಂಕಸಾಳ ಹೊರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು.ದೇಶದ ಪ್ರಮುಖ ಹೆದ್ದಾರಿಗಳಲ್ಲಿ ಒಂದಾಗಿರುವ ರಾ.ಹೆ. 63 ರ ನಿರ್ವಹಣೆ ಕೊರತೆಯಿಂದ, ಹತ್ತಾರು ಅವಘಡಗಳಾಗುತ್ತಿದ್ದು,ಮಳೆಗಾಲ ಮತ್ತಿತರ ಕಾರಣಗಳಿಂದ ಈ ಭಾಗದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ,ಹೆದ್ದಾರಿ ಹೊಂಡಗಳು ವಾಹನ ಸಂಚಾರಿಗಳ ಪಾಲಿಗೆ ಅಪಾಯದ ಗುಂಡಿಗಳಾಗಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು ,ಸಂಬಂಧಿಸಿದ ಇಲಾಖೆ ಈ ಕುರಿತು ತುರ್ತು ಕ್ರಮ ಕೈಗೊಳ್ಳಬೇಕಿದೆ.ಈ ದಿನ ನಡೆದ ರಸ್ತೆ ಅಪಘಾತ ಗೊಂಡ ವಾಹನಗಳು, ಮತ್ತು ಅಪಘಾತದ ಘಟನೆಯ ಕುರಿತಂತೆ ಸ್ಪಷ್ಟ ಮತ್ತು ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button