ಅಂಕೋಲಾ: ಕೋಳಿ ಗೂಡಿಗೆ ನುಗ್ಗಿ ಎರಡು ಕೋಳಿಗಳನ್ನು ನುಂಗಿ, ಗೂಡಿನಲ್ಲೇ ಅವಿತುಕೊಂಡು ಮನೆಯವರಲ್ಲಿ ಆತಂಕ ಮೂಡಿಸಿದ್ದ ಭಾರೀ ಗಾತ್ರದ ಹೆಬ್ಬಾವೊಂದನ್ನು ( Python) ಹಿಡಿದು ಕಾಡು ಪ್ರದೇಶದಲ್ಲಿ ಬಿಟ್ಟು ಬರುವ ಮೂಲಕ ಉರಗ ಸಂರಕ್ಷಕ ಮಹೇಶ ನಾಯ್ಕ, ಸ್ಥಳೀಯರ ಆತಂಕ ದೂರ ಮಾಡಿದರು. ಅಂಕೋಲಾ ತಾಲೂಕಿನ ಗ್ರಾಮೀಣ ಪ್ರದೇಶ ಹಾಗೂ ಗಂಗಾವಳಿ ನದಿ ತೀರದ ಪ್ರದೇಶಗಳಲ್ಲಿ ಒಂದಾಗಿರುವ ಮಂಜಗುಣಿ ಗ್ರಾಮದ ಇಂದಿರಾ ಅಶೋಕ ನಾಯ್ಕ ಎನ್ನುವವರ ಮನೆಯ ಹತ್ತಿರದಿದ್ದ ಕೋಳಿಗೂಡಿಗೆ ಎಲ್ಲಿಂದಲೋ ಬಂದು ನುಗ್ಗಿದ ಹೆಬ್ಬಾವೊಂದು, ಗೂಡಿನಲ್ಲಿದ್ದ ಎರಡು ಕೋಳಿಗಳನ್ನು ನುಂಗಿ, ಅಲ್ಲಿಯೇ ಅವಿತುಕೊಂಡಿತ್ತು.
ಎಂದಿನಂತೆ ಮನೆಯವರು ಕೋಳಿ ಗೂಡಿನ ಬಳಿ ಹೋದಾಗ, ಕೋಳಿಗಳು ಹೊರಬರದಿರುವುದರಿಂದ ಅನುಮಾನಗೊಂಡ ಮನೆಯವರು ಗೂಡಿನಲ್ಲಿ ಇಣುಕಿ ನೋಡಿದಾಗ ಭಾರೀ ಗಾತ್ರದ ಹೆಬ್ಬಾವು ( Python) ಅವಿತುಕೊಂಡಿರುವುದು ಗಮನಕ್ಕೆ ಬಂದಿದೆ. ಕ್ಷಣ ಕಾಲ ಆತಂಕಗೊಂಡ ಮನೆಯವರು, ಸ್ಥಳೀಯ ಪ್ರಮುಖ ನಾಗರಾಜ ಎನ್ನುವವರ ಮೂಲಕ ಉರಗ ಸಂರಕ್ಷಕ ಅವರ್ಸಾದ ಮಹೇಶ ನಾಯ್ಕ ಅವರಿಗೆ ಕರೆ ಮಾಡಿ, ವಿಷಯ ತಿಳಿಸಿದ್ದಾರೆ.
ಅವರು ಬರುವಷ್ಟರಲ್ಲಿ ಹೆಬ್ಬಾವು ( Python) ಗೂಡಿನ ಸಂದಿಗೊಂದಿಗಳಲ್ಲಿ ನುಸುಳಿ ಹೊರ ಹೋಗದಂತೆ ಕೋಳಿ ಗೂಡಿನ ಬಾಗಿಲು ಭದ್ರಪಡಿಸಿ, ಗೂಡಿನ ಸುತ್ತಲೂ ಬಲೆಯನ್ನು ಹಾಕಿದ್ದಾರೆ. ಸೋಮವಾರ ಬೆಳಿಗ್ಗೆ ಉರಗ ಸಂರಕ್ಷರ ಅವರ್ಸಾದ ಮಹೇಶ ನಾಯ್ಕ ಮಂಜಗುಣಿಗೆ ಬಂದು, ಹೆಬ್ಬಾವನ್ನು ಸೆರೆ ಹಿಡಿಯಲು ಕಾರ್ಯಚರಣೆ ಕೈಗೊಂಡರು. ಕೊನೆಗೂ ಗೂಡಿನಲ್ಲಿ ಅವಿತಿದ್ದ ಅತಿ ಉದ್ದನೆಯ ಭಾರೀ ಗಾತ್ರದ ಹೆಬ್ಬಾವನ್ನು ಹಿಡಿಯಲು ಯಶಸ್ವಿಯಾದರು.
ಸ್ಥಳೀಯರು ಸಹಕರಿಸಿದರು. ನಂತರ ಹೆಬ್ಬಾವು ತಾನು ನುಂಗಿದ್ದ ಆಹಾರ ಹೊರಕಕ್ಕಿ ಗಲಿಬಿಲಿಯಿಂದ ಓಡಿ ಹೋಗದಂತೆ ಮುನ್ನೆಚ್ಚರಿಕೆ ವಹಿಸಿದ ಮಹೇಶ ನಾಯ್ಕ, ಹೆಬ್ಬಾವನ್ನು ಮಂಜಗುಣಿಯಿಂದ ಬಹುದೂರ ಸಾಗಿಸಿ, ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡುವ ಮೂಲಕ ಸ್ಥಳೀಯರ ಆತಂಕ ದೂರ ಮಾಡುವುದರೊಂದಿಗೆ ಹೆಬ್ಬಾವಿನ ಸಂರಕ್ಷಣೆಗೂ ಒತ್ತು ಹಲವರ ಮೆಚ್ಚುಗೆಗೆ ಕಾರಣರಾದರು.
ಗಂಗಾವಳಿ ನದಿ ನೀರಿನ ರಭಸಕ್ಕೆ ತೇಲಿ ಬಂದು ಇಲ್ಲವೇ ಇನ್ನಿತರೇ ಕಾರಣಳಿಂದ ಜನವಸತಿ ಪ್ರದೇಶಕ್ಕೆ ಬಂದು ಆಹಾರ ಅರಸಿ ಕೋಳಿಗೂಡಿಗೆ ನುಗ್ಗಿದ್ದ ಹೆಬ್ಬಾವು ತಾತ್ಕಾಲಿಕವಾಗಿ ಸೆರೆಯಾದರೂ, ನಂತರ ಅರಣ್ಯ ಪ್ರದೇಶದಲ್ಲಿ ಬಿಡುಗಡೆಯಾಗುವ ಮೂಲಕ ಕಾನನ ಸೇರಿಕೊಂಡಂತಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ