ಅಂಕೋಲಾ : ಪಟ್ಟಣ ವ್ಯಾಪ್ತಿಯ ಕಾರವಾರ ರಸ್ತೆಯಲ್ಲಿ ಕಡೆದೆರಡು ದಿನಗಳ ಹಿಂದೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಇಬ್ಬರು ಯುವಕರಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಬೈಕ್ ಸವಾರ, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾನೆ. ಅಂಕೋಲಾ ತಾಲೂಕಿನ ಹಿಲ್ಲೂರು – ಹೊಸಕಂಬಿ ನಿವಾಸಿ ವಿಶ್ವನಾಥ ಹನುಮಂತ ಆಗೇರ (19 ) ಮೃತ ದುರ್ದೈವಿಯಾಗಿದ್ದಾನೆ.
ಆಗಸ್ಟ್ 22 ರಂದು ಸಾಯಂಕಾಲ ವಿಶ್ವನಾಥ ಈತನು ಕಾರವಾರ ರಸ್ತೆಯಲ್ಲಿ ನೀಲಂಪುರ ಮಾರ್ಗವಾಗಿ ಅಂಕೋಲಾ ಪಟ್ಟಣದತ್ತ ಬೈಕ್ ಚಲಾಯಿಸಿಕೊಂಡು ಬರುತ್ತಿರುವಾಗ ದಾರಿಮಧ್ಯೆ ವಾಜಂತ್ರಿಕಟ್ಟೆ ಬಳಿಯ ಈಜಿ ಮಾರ್ಟ ಹತ್ತಿರ ನಿಯಂತ್ರಣ ಕಳೆದುಕೊಂಡು, ಡಿವೈಡರ್ ಮತ್ತು ದಾರಿದೀಪದ ಕಂಬಕ್ಕೆ ಬೈಕ್ ಡಿಕ್ಕಿ ಪಡಿಸಿದ ಪರಿಣಾಮ , ಬೈಕ್ ಸವಾರ ಅಂಕೋಲಾ ಹೊಸಕಂಬಿಯ ವಿಶ್ವನಾಥ ಆಗೇರ ಮತ್ತು ಹಿಂಬಂದಿ ಸವಾರ ಗೋಕರ್ಣ ಸಮೀಪದ ಹನೇಹಳ್ಳಿ ನಿವಾಸಿ ವಿಕಾಶ ಹೊನ್ನಾ ಆಗೇರ , ರಸ್ತೆ ಅಂಚಿನಲ್ಲಿ ಸಿಡಿದು ಬಿದ್ದು ಗಂಭೀರ ಗಾಯಗೊಂಡಿದ್ದರು. ಅಪಘಾತದ ತೀವ್ರತೆಗೆ ಬೈಕ್ ಮುಂಭಾಗ ಜಖಂಗೊಂಡಿತ್ತು. ಬಳಿಕ ಸ್ಥಳೀಯರು ಮತ್ತು ಪೊಲೀಸರು ಗೂಡ್ಸ ರಿಕ್ಷಾ ವಾಹನದಲ್ಲಿ ಗಾಯಾಳುಗಳನ್ನು ಅಂಕೋಲಾ ತಾಲೂಕಾ ಆಸ್ಪತ್ರೆಗೆ ಸಾಗಿಸಿದ್ದರು.
ಅಲ್ಲಿ ಪ್ರಾಥಮಿಕ ಚಿಕಿತ್ಸೆಗೊಳಪಡಿಸಿ , ನಂತರ ಅವರನ್ನು ಎರಡು ಪ್ರತ್ಯೇಕ ಅಂಬುಲೆನ್ನ ಮೂಲಕ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಈ ಕುರಿತು ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ ಪೊಲೀಸ್ ದೂರು ನೀಡಿದ್ದು ಅಂಕೋಲಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪಿ. ಎಸ್. ಐ ಸುನೀಲ ಹುಲ್ಲೊಳ್ಳಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಮುಂದುವರೆಸಿದ್ದರು. ತಲೆ ಮತ್ತಿತರ ಭಾಗಗಳಿಗೆ ಗಂಭೀರ ಗಾಯ ನೋವುಗಳಾಗಿದ್ದ ಈರ್ವರೂ ಗಾಯಾಳುಗಳನ್ನು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾಸ್ಪತ್ರೆಯಿಂದ ಮಂಗಳೂರಿನ ಜಿಲ್ಲಾಸ್ಪತ್ರೆ ವೆನ್ ಲಾಕ್ ಗೆ ಸಾಗಿಸಿ, ಅಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಸದ್ಯ ಹಿಂಬದಿ ಸವಾರ ಹನೇಹಳ್ಳಿಯ ವಿಶಾಕ ಆಗೇರ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಟ್ಟಿದ್ದಾನೆ.
ಆದರೆ ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಬೈಕ್ ಸವಾರ ಅಂಕೋಲಾದ ಹೊಸ ಕಂಬಿಯ ವಿಶ್ವನಾಥ ಆಗೇರ , ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ. ಈ ಕುರಿತು ಈಗಾಗಲೇ ಅಂಕೋಲಾ ಪೋಲೀಸ್ ಠಾಣೆಗೂ ಮಾಹಿತಿ ರವಾನೆ ಆಗಿದೆ ಎನ್ನಲಾಗಿದ್ದು, ಸ್ಥಳೀಯ ಪೋಲೀಸರು ಮಂಗಳೂರಿಗೆ ಹೊರಟು ಕಾನೂನು ಕ್ರಮ ಮುಂದುವರೆಸಿದ್ದಾರೆ. ಆ ಬಳಿಕವಷ್ಟೇ ಮಂಗಳೂರಿನಿಂದ ಮೃತದೇಹವನ್ನು,ವಾರಸುದಾರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದ್ದು ಈ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಮಂಗಳೂರಿನಿಂದ ಮೃತದೇಹವನ್ನು ಅಂಕೋಲಾ ತಾಲೂಕಿನ ಹೊಸಕಂಬಿ ಬಳಿಯ ತೊಗಸೆ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನಡೆಸಬೇಕಿದ್ದು ಈ ಕುರಿತು ಸಿದ್ಧತೆಯಲ್ಲಿ ತೊಡಗಿರುವ ಮೃತನ ಕುಟುಂಬಸ್ಥರು, ಕೆಲ ಸಂಬಂಧಿಗಳು ಮಂಗಳೂರಿಗೆ ತೆರಳಿದ್ದಾರೆ. ಗುರುವಾರ ಸಾಯಂಕಾಲದ ವೇಳೆಗೆ ಮೃತದೇಹ ಮನೆಗೆ ತಲುಪುವ ಸಾಧ್ಯತೆ ಇದೆ. ತದನಂತರ ತೊಗಸೆ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಮನೆಗೆ ಆಧಾರ ಸ್ಥಂಭವಾಗ ಬೇಕಿದ್ದ ಮಗನನ್ನು ಕಳೆದುಕೊಂಡ ತಂದೆ – ತಾಯಿ ದುಃಖದ ಮಡುವಿನಲ್ಲಿ ರೋಧಿಸುವಂತಾಗಿದ್ದು, ಮೃತನು, ವಿವಾಹಿತಳಾಗಿರುವ ಓರ್ವ ಸಹೋದರಿ (ಅಕ್ಕ ), ಹಾಗೂ ಒರ್ವ ಸಹೋದರ (ತಮ್ಮ ) ಸೇರಿದಂತೆ ಅಪಾರ ಬಂಧು ಬಳಗ ತೊರೆದಿದ್ದು, ನೊಂದ, ಬಡ ಕುಟುಂಬಕ್ಕೆ ಹೃದಯವಂತರು ಮತ್ತು ದಾನಿಗಳು ಮಾನವೀಯ ನೆಲೆಯಲ್ಲಿ ನೆರವಿನ ಹಸ್ತ ಚಾಚಿ ಸಾಂತ್ವನ ಹೇಳಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ