Focus News
Trending

ISRO: ಚಂದ್ರನಂಗಳದ ವಿಕ್ರಮ ಸಾಧನೆ: ತಿರಂಗಾ ಹಿಡಿದು ISRO ಎಂಬ ಪದ ಮೂಡಿಸಿ ಗಮನ ಸೆಳೆದ ವಿದ್ಯಾರ್ಥಿಗಳು

ಅಂಕೋಲಾ: ಚಂದ್ರನಂಗಳದಲ್ಲಿ ಭಾರತೀಯರ ವಿಕ್ರಮ ಸಾಧನೆ ದಾಖಲಾದ ಬೆನ್ನಿಗೇ, ಎಲ್ಲೆಡೆಯೂ ಸಡಗರ – ಸಂಭ್ರಮ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ತಾಲೂಕಿನ ಕೆ.ಎಲ್. ಇ ಶಿಕ್ಷಣ ಮಹಾವಿದ್ಯಾಲಯದ ವಿಜ್ಞಾನ ಸಂಘದ ಅಡಿಯಲ್ಲಿ ಚಂದ್ರಯಾನ 3 ಯಶಸ್ಸಿನ ಸಂಭ್ರಮಾಚರಣೆ ನಡೆಸಿ ಇಸ್ರೋ ( ISRO) ಸಾಧನೆಯನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಮಂಜುನಾಥ ಇಟಗಿ ಮಾತನಾಡಿ ಚಂದ್ರಯಾನ 3 ರ ಮನುಕುಲದ ಏಳಿಗೆಗಾಗಿ ಇಸ್ರೋ ವಿಜ್ಞಾನಿಗಳ ನಿರಂತರ ಪರಿಶ್ರಮದ ಫಲ ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡುವಂತಾಗಿದೆ ಎಂದರು. ವಿಜ್ಞಾನ ಸಂಘದ ಉಪಾಧ್ಯಕ್ಷ ರಾಘವೇಂದ್ರ ಅಂಕೋಲೆಕರ್ ಮಾತನಾಡಿ ಚಂದ್ರಯಾನದ ಯಶಸ್ಸು ಮುಂದಿನ ದಿನಗಳಲ್ಲಿ ಚಂದ್ರನ ಮೇಲಿನ ಸಂಪನ್ಮೂಲಗಳ ಅಧ್ಯಯನಕ್ಕೆ ಸಹಕಾರಿ ಆಗಲಿದ್ದು ಚಂದ್ರನ ಕುರಿತು ಅಧ್ಯಯನ ನಡೆಸುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಭಾರತ ಗುರುತಿಸಿಕೊಳ್ಳುವಂತಾಗಿದೆ ಎಂದರು.
ಪ್ರಶಿಕ್ಷಣಾರ್ಥಿ ಮನೋಜ ಗೌಡ, ಪ್ರತೀಕ ನಾಯಕ ಮಾತನಾಡಿದರು.

ಉಪನ್ಯಾಸಕಿ ಪ್ರವೀಣಾ ನಾಯಕ, ಕಾರ್ಯದರ್ಶಿ ಉನ್ನತಿ ನಾಯಕ ಉಪಸ್ಥಿತರಿದ್ದರು. ಶ್ವೇತಾ ಪಟಗಾರ ಸ್ವಾಗತಿಸಿದರು, ಅಮ್ರಿಜಾನ ಶೇಖ್, ಪೂರ್ವಿ ಹಳಗೇಕರ್ ಸಹಕರಿಸಿದರು, ದೀಪಾಲಿ ನಾಯಕ ಕಾರ್ಯಕ್ರಮ ನಿರ್ವಹಿಸಿದರು, ರಕ್ಷಾ ಹೊಸ್ಮನೆ ವಂದಿಸಿದರು. ವಿದ್ಯಾರ್ಥಿಗಳೆಲ್ಲರೂ ತಿರಂಗಾ ಹಿಡಿದು , ಇಂಗ್ಲೀಷನ ಅಕ್ಷರಮಾಲೆ ರೂಪದಲ್ಲಿ (ISRO ) ಎಂಬ ಅರ್ಥ ಬರುವಂತೆ ಸಾಲಾಗಿ ನಿಂತಿದ್ದು ಗಮನ ಸೆಳೆಯಿತು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button