ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿದ್ದ ವಾಹನ ಚರಂಡಿಯಲ್ಲಿ ಪಲ್ಟಿ

ಅಂಕೋಲಾ: ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿದ್ದ ಟವೇರಾ ವಾಹನ ರಾಷ್ಟ್ರೀಯ ಹೆದ್ದಾರಿ 63 ರ ಅಂಕೋಲಾ- ಯಲ್ಲಾಪುರ ಮಾರ್ಗ ಮಧ್ಯೆ ಸುಂಕಸಾಳ – ಕೋಟೇಪಾಲ ಕ್ರಾಸ್ ಬಳಿ ಪಲ್ಟಿಯಾಗಿದ್ದು, ವಾಹನದಲ್ಲಿ ಸಾಗಿಸುತ್ತಿದ್ದ ಸುಮಾರು 1.33 ಲಕ್ಷ ಮೌಲ್ಯದ ಗೋವಾ ರಾಜ್ಯದ ವಿವಿಧ ಬ್ರಾಂಡುಗಳ ಸರಾಯಿಯನ್ನು ಅಂಕೋಲಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸುಂಕಸಾಳ ಬಳಿ ಹೆದ್ದಾರಿ ಅಂಚಿನ ಚರಂಡಿಯಲ್ಲಿ ಪಲ್ಟಿಯಾಗಿದ್ದು ವಾಹನದಲ್ಲಿ ಸಾಗಿಸುತ್ತಿದ್ದ ಗೋವಾ ರಾಜ್ಯದಲ್ಲಿ ತಯಾರಾದ 39600 ರೂಪಾಯಿ ಮೌಲ್ಯದ 750 ಎಂ.ಎಲ್ ನ 120 ರಾಯಲ್ ಛಾಲೆಂಜ್ ವಿಸ್ಕಿ ಬಾಟಲಿಗಳು, 35640 ಮೌಲ್ಯದ 750 ಎಂ.ಎಲ್ ನ 108 ರಾಯಲ್ ಸ್ಟಾಗ್ ವಿಸ್ಕಿ ಬಾಟಲಿಗಳು, 57780 ರೂಪಾಯಿ ಮೌಲ್ಯದ 214 ಮೆನಶನ್ ಹೌಸ್ ಬ್ರಾಂದಿ ಬಾಟಲಿಗಳನ್ನು ಹಾಗೂ 1.80 ಲಕ್ಷ ಮೌಲ್ಯದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ಉಪ ನಿರೀಕ್ಷಕ ಸುನೀಲ ಹುಲ್ಲೊಳ್ಳಿ ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿದ್ದು ಪಿ.ಎಸ್. ಐ ಜಯಶ್ರೀ ಪ್ರಭಾಕರ್ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ..ಅಪಘಾತ ಗೊಂಡ ವಾಹನ ಎಲ್ಲಿಂದ ಯಾವ ಮಾರ್ಗವಾಗಿ ಎಲ್ಲಿಗೆ ಸಾಗುತ್ತಿತ್ತು? ಮತ್ತು ದಾರಿ ಮಧ್ಯದ ಚೆಕ್ ಪೋಸ್ಟ್ ಗಳನ್ನು ದಾಟಿಯೇ ಬಂದಿರಬಹುದೇ ? ಎಂಬಿತ್ಯಾದಿ ವಿಷಯಗಳ ಕುರಿತು ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದಲೇ ತಿಳಿದು ಬರಬೇಕಾಗಿದೆ.

ಈ ಹಿಂದೆಯೂ ಇದೇ ಹೆದ್ದಾರಿಯಲ್ಲಿ ಭಾರೀ ಗಾತ್ರದ ಕಂಟೇನರ್ ವಾಹನ ಒಂದು ಹೆದ್ದಾರಿ ಅಂಚಿನಲ್ಲಿ ಪಲ್ಟಿಯಾಗಿ ಬಿದ್ದಿದ್ದರಿಂದಲೇ,ಅದರಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಹೊರ ರಾಜ್ಯದ ಸರಾಯಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದನ್ನು ನೆನಪಿಸಿಕೊಂಡಿರುವ ಸ್ಥಳೀಯ ಕೆಲವರು,ದಾರಿ ಮಧ್ಯದ ಚೆಕ್ ಪೋಸ್ಟ್ ಗಳ ಕಾವಲುಗಾರಿಕೆ ಬಗ್ಗೆಯೇ ಕೆಲ ರೀತಿಯ ಅನುಮಾನ ವ್ಯಕ್ತಪಡಿಸುವಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version