ಅಂಕೋಲಾ: ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ವಿನೋದ ಭಟ್ಟ (ಪುಟ್ಟು ) , ಉಪಾಧ್ಯಕ್ಷರಾಗಿ ಮಮತಾ ನಾಯ್ಕ ಆಯ್ಕೆಯಾಗಿದ್ದಾರೆ. ಈ ಹಿಂದೆ ತಾಲೂಕಿನ 20 ಗ್ರಾಪಂ ಗಳ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆದಿತ್ತಾದರೂ, ಡೋಂಗ್ರಿ ಗ್ರಾ.ಪಂ ಮೀಸಲಾತಿ ವಿಚಾರ ಕೋರ್ಟ್ ಮೆಟ್ಟಿಲೇರಿದ್ದರಿಂದ,ಈ ಹಿಂದಿನ ನಿಗದಿತ ದಿನದಂದು ಚುನಾವಣಾ ಆಯ್ಕೆ ಪ್ರಕ್ರಿಯೆ ನಡೆದಿರಲಿಲ್ಲ.
ಸೆ 8 ಶುಕ್ರವಾರ ಡೋಂಗ್ರಿ ಗ್ರಾಮ ಪಂಚಾಯತ್ ದ ನೂತನ ಅಧ್ಯಕ್ಷ ಉಪಾಧ್ಯಕ್ಷರುಗಳ ಆಯ್ಕೆ ಹೊಸ ದಿನಾಂಕ ನಿಗದಿಪಡಿಸಲಾಗಿತ್ತು. ಒಟ್ಟೂ 11 ಸದಸ್ಯ ಬಲದ ಗ್ರಾ.ಪಂ ನಲ್ಲಿ ಅಧ್ಯಕ್ಷ ಹುದ್ದೆಗೆ 2, ಉಪಾಧ್ಯಕ್ಷ ಹುದ್ದೆಗೆ 2 ನಾಮಪತ್ರ ಸಲ್ಲಿಸಿದ್ದರು. ಸ್ಪರ್ಧಾಕಾಂಕ್ಷಿಯಾಗಿದ್ದ ಓರ್ವ ಮಹಿಳಾ ಸದಸ್ಯರು ಅದಾವುದೋ ಕಾರಣದಿಂದ ಮನೆಗೆ ಮರಳಿದ್ದರಿಂದ,10 ಸದಸ್ಯರು ಮತ ಚಲಾವಣೆಗೆ ಮಾಡಿದ್ದರು. ಅಧ್ಯಕ್ಷ ಗಾದಿಯ ಪ್ರಮುಖ ರೇಸಿನಲ್ಲಿದ್ದ ಮತ್ತು ಈ ಹಿಂದೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಆಡಳಿತಾತ್ಮಕ ಅನುಭವ ಹೊಂದಿರುವ ವಿನೋದ ಭಟ್ಟ (ಪುಟ್ಟು ) 6 ಮತಗಳನ್ನು ಪಡೆದು ಅಧ್ಯಕ್ಷರಾಗಿ ಗೆಲುವಿನ ನಗೆ ಬೀರಿದರೆ, ಅವರ ಪ್ರತಿಸ್ಪರ್ಧಿ ಮಂಜು ಸಿದ್ಧಿ 4 ಮತಗಳನ್ನು ಪಡೆದು ಸೋಲೊಪ್ಪಿಕೊಂಡರು.
ಉಪಾಧ್ಯಕ್ಷ ಆಯ್ಕೆಯ ಜಿದ್ದಾಜಿದ್ದಿಯಲ್ಲಿ ಸಮಬಲದ (5-5 ಮತಗಳು ) ಹೋರಾಟ ಕಂಡುಬಂದು ಅಂತಿಮವಾಗಿ ಮಮತಾ ನಾಯ್ಕ ಗೆ ಅದೃಷ್ಟ ಕೈ ಹಿಡಿದು ಗೆಲುವು ದಾಖಲಾಯಿತು. ಲೋಕೋಪಯೋಗಿ ಇಲಾಖೆಯ ಅಭಿಯಂತರ ರು ನೋಡೇಲ್ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದರು. ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ- ಉಪಾಧ್ಯಕ್ಷರುಗಳಿಗೆ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹಾಗೂ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಪ್ರಭಾರಿ ಗೋಪಾಲಕೃಷ್ಣ ವೈದ್ಯ, ಹಾಗೂ ಬಿಜೆಪಿ ಪಕ್ಷದ ಮತ್ತು ಸ್ಥಳೀಯ ಪ್ರಮುಖರು ಮತ್ತಿತರರು ಶುಭಾಶಯ ಕೋರಿದರು.
ಡೋಂಗ್ರಿ ಗ್ರಾಮ ಪಂಚಾಯತ ದತ್ತು ತೆಗೆದುಕೊಂಡತಿದ್ದ ಅಂದಿನ ಶಾಸಕಿ ಈ ಭಾಗದಲ್ಲಿ ಸೇತುವೆ ನಿರ್ಮಾಣ ಸೇರಿದಂತೆ ಕೋಟ್ಯಾಂತರ ರೂ ಅಭಿವೃದ್ಧಿ ಅನುದಾನ ತಂದು ಸ್ಥಳೀಯರ ಮೆಚ್ಚುಗೆಗೆ ಕಾರಣರಾಗಿದ್ದರು. ಅವರ ನಿಕಟವರ್ತಿ ವಿನೋದ ಭಟ್ಟ ಈಗ ಗ್ರಾಪಂ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವುದಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಹರ್ಷ ವ್ಯತ್ತಿಪಡಿಸಿ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ ಶುಭ ಸಂದೇಶ ತಿಳಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ