ಸಮಾಜವನ್ನು ತಿದ್ದುವುದು ದಾರ್ಶನಿಕರಿಂದ ಸಾಧ್ಯ: ರಾಜಕೀಯದಿಂದ ಬದಲಾಗುವುದಿಲ್ಲ: ಬ್ರಹ್ಮಾನಂದ ಶ್ರೀ
ಬ್ರಹ್ಮಶ್ರೀ ನಾರಾಯಣ ಗುರು 169ನೇ ಜಯಂತ್ಯೋತ್ಸವ
ಭಟ್ಕಳ: ಶ್ರೀ ನಾರಾಯಣ ಗುರು ಜಯಂತ್ಯೋತ್ಸವ- 2023 ಬೃಹತ್ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮವು ಆಸರಕೇರಿ ನಿಚ್ಛಲಮಕ್ಕಿ ಸಭಾಭವನದಲ್ಲಿ ಧರ್ಮಸ್ಥಳ ಉಜಿರೆಯ ಶ್ರೀ ರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು. ನಂತರ ಸಮಾಜವನ್ನುದ್ದೇಶಿಸಿ ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳು, ಸಮಾಜವನ್ನು ತಿದ್ದಬೇಕಾದರೆ ದಾರ್ಶನಿಕರಿಂದ ಸಾಧ್ಯ. ರಾಜಕೀಯದಿಂದ ಬದಲಾಗುವುದಿಲ್ಲ ಎಂದ ಅವರು ಸಮುದ್ರದ ಅಲೆಗಳು ಈ ಜಗತ್ತಿನಲ್ಲಿ ಹೇಗೆ ನಿತ್ಯ ನಿರಂತರವೋ ಅದೇ ರೀತಿ ನಾರಾಯಣ ಗುರುಗಳ ಸಿದ್ದಾಂತ ಅವರ ಸಂದೇಶವು ಶಾಶ್ವತವಾಗಿರಲಿದೆ ಎಂದರು.
ಸಮಾಜದ ಮಕ್ಕಳು ಭೌತಿಕವಾಗಿ ಬೆಳವಣಿಗೆಯಾಗಬೇಕು. ಉತ್ತಮ ಹುದ್ದೆಗಳಲ್ಲಿ ಸ್ಥಾನ ಪಡೆಯಬೇಕು. ಅಧಿಕಾರ ಸಂಪತ್ತು ನಿಮ್ಮದಾಗಿದ್ದರೆ ನಿಮ್ಮದೆ ಪಾಲಾಗಿರುತ್ತದೆ ಹೊರತು ಬೇರೆಯವರು ಅನುಭವಿಸಲು ಸಾಧ್ಯವಿಲ್ಲ. ಎಂದ ಅವರು ಪ್ರತಿ ಮನೆಗಳಿಗೆ ನಾರಾಯಣ ಗುರುಗಳ ಭಾವಚಿತ್ರದ ಜೊತೆಗೆ ಅವರ ಸಂದೇಶದ ಪುಸ್ತಕವು ಸಿಗಬೇಕು ಆಗ ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಕುದ್ರೋಳಿ ಮಂಗಳೂರಿನ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ ‘ 27 ವರ್ಷದಿಂದ ಕುದ್ರೋಳಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಭಾಷಣಕ್ಕೆ ಮಾತ್ರ ನಾರಾಯಣ ಗುರುಗಳ ಸಂದೇಶ ಇರದೇ ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು, ಅಧ್ಯಕ್ಷತೆ ವಹಿಸಿದ್ದ ನಾಮಧಾರಿ ಗುರು ಮಠದ ಅಧ್ಯಕ್ಷ ಕ್ರಷ್ಣ ನಾಗಪ್ಪ ನಾಯ್ಕ ಪ್ರಾಸ್ತಾವಿಕ ಮಾತನಾಡಿ ‘ ಕಳೆದ ಬಾರಿ ಸರಕಾರದೊಂದಿಗೆ ಆಚರಣೆ ಮಾಡಿದ್ದೇವೆ. ಆದರೆ ಈ ಬಾರಿ ಬದಲಾವಣೆ ಬಯಸಿ ನಾರಾಯಣ ಗುರು ಅವರ ಪರಿಚಯ ಅವರ ಹೋರಾಟ ತಿಳಿಯಬೇಕೆಂಬ ಉದ್ದೇಶ ನಮ್ಮದಾಗಿದೆ. 168 ವರ್ಷದ ಹಿಂದಿನ ಗುರುಗಳ ಬಗ್ಗೆ ನಾಮಧಾರಿ ಸಮಾಜಕ್ಕೆ ತಿಳಿಯಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಮನೆ ಮನೆಯಲ್ಲಿ ನಾರಾಯಣ ಗುರು ಭಾವಚಿತ್ರದ ಬಿಡುಗಡೆಯನ್ನು ಶ್ರೀಗಳು ನೆರವೇರಿಸಿದರು. ಸಭಾಕಾರ್ಯಕ್ರಮಕ್ಕೂ ಪೂರ್ವದಲ್ಲಿ ಬ್ರಹತ ಮೆರವಣಿಗೆಯು ನಡೆಯಿತು. ಮೆರವಣಿಗೆಯಲ್ಲಿ 3-4 ಸಾವಿರಕ್ಕೂ ಅಧಿಕ ನಾಮಧಾರಿ ಸಮಾಜದ ಜನರು ಪಾಲ್ಗೊಂಡರು. ಚಂಡೆ ವಾದ್ಯ, ಟ್ಯಾಬ್ಲೋ ಹಾಗೂ ವಿಶೇಷ ಆಕರ್ಷಣೆಯಾಗಿ ನಾರಾಯಣ ಗುರುಗಳ ವೇಷದಲ್ಲಿ ಓರ್ವ ಬಾಲಕ ಕಾಣಿಸಿಕೊಂಡಿದ್ದು ಗಮನಸೆಳೆಯಿತು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ