ಕುಮಟಾ ( Kumta News) : ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆ ಶಾಂತಿಪಾಲನಾ ಸಭೆಯನ್ನು ಕುಮಟಾ ತಹಸೀಲ್ದಾರರಾದ ಸತೀಶ್ ಗೌಡರ ಅಧ್ಯಕ್ಷತೆಯಲ್ಲಿ ಹಾಗೂ ಪೊಲೀಸ್ ಇಲಾಖೆ ಮತ್ತು ಕುಮಟಾ, ಗೋಕರ್ಣ ಭಾಗದ ಎಲ್ಲಾ ಸಾರ್ವಜನಿಕ ಗಣೇಶೋತ್ಸವ ಸಮೀತಿಯ ಪ್ರಮುಖರು ಮತ್ತು ಮುಸ್ಲಿಂ ಸಮಾಜದ ಮುಖಂಡರುಗಳನ್ನೊಳಗೊoಡು ಕುಮಟಾದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕುಮಟಾ ತಾಲೂಕಿನ ವಿವಿಧ ಭಾಗದಿಂದ ಆಗಮಿಸಿದ್ದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಮುಖರು ತಮ್ಮ ಆಚರಣೆಗಳ ಬಗ್ಗೆ ಮಾಹಿತಿ ನೀಡಿದರು.
ಅಂತೆಯೇ ಮುಸ್ಲಿಂ ಸಮಾಜದ ಮುಖಂಡರುಗಳು ಈದ್ ಮಿಲಾದ್ ಹಬ್ಬದ ನಿಮಿತ್ತ ನಡೆಯುವ ಮೆರವಣಿಗೆ ಮತ್ತು ಧರ್ಮಗುರುಗಳು ನೀಡಲಿರುವ ಸಂದೇಶ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕುಮಟಾ ಸಿ.ಪಿ.ಐ ತಿಮ್ಮಪ್ಪ ನಾಯ್ಕ ಅವರು ಮಾತನಾಡಿ, ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬವು ಒಟ್ಟಿಗೆ ಬಂದಿದ್ದರಿoದ ಹಬ್ಬದ ಆಚರಣೆಯನ್ನು ಶಾಂತಿಯುತವಾಗಿ ನಡೆಸುವ ಜವಾಬ್ದಾರಿ ಸಂಘಟಕರದ್ದಾಗಿದೆ.
ಕಡ್ಡಾಯ ಪೊಲೀಸ್ ಇಲಾಖೆಯ ಹಾಗೂ ಪಂಚಾಯತ್ ಮತ್ತು ಪುರಸಭೆಯ ಪರವಾನಗಿ ಪಡೆಯಬೇಕು. ಸುಪ್ರೀಂ ಕೋರ್ಟ್ ನ ಆದೇಶದಂತೆ ಡಿಜೆಗೆ ಅನುಮತಿ ಇಲ್ಲ. ಮನರಂಜನಾ ಕಾರ್ಯಕ್ರಮವನ್ನು ರಾತ್ರಿ 10 ಗಂಟೆಯೊಳಗೆ ಮುಗಿಸಬೇಕು. ಸಮೀತಿಗಳು ಸಿಸಿ ಕ್ಯಾಮರಾ ಅಳವಡಿಸುವುದು ಕಡ್ಡಾಯವಾಗಿದೆ. ಭದ್ರತೆಗೆ ಪೊಲೀಸರು ಇದ್ದರೂ ಸಹ ನಿರ್ವಹಣೆಗಾಗಿ ಸ್ವಯಂ ಸೇವಕರನ್ನು ನೇಮಿಸಬೇಕೆಂದು ಸೂಚಿಸಿದರು.
ಈ ವೇಳೆ ಕುಮಟಾ (Kumta) ಪಿಎಸ್‌ಐ ನವೀನ ನಾಯ್ಕ ಅವರು ಮಾತನಾಡಿ, ವಿದ್ಯುತ್ ಅಲಂಕಾರವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಹಾಗೂ ಜನರೇಟರ್ ವ್ಯವಸ್ಥೆ ಮಾಡಿಕೊಳ್ಳಬೇಕು. ವಿಸರ್ಜನಾ ಮೆರವಣಿಗೆಯ ಬಗ್ಗೆ ಸಮರ್ಪಕ ಮಾಹಿತಿಯನ್ನು ಇಲಾಖೆಗೆ ನೀಡಬೇಕು. ಗಣೇಶನ ವಿಸರ್ಜನೆಯಾಗುವವರೆಗೆ ಸಂಪೂರ್ಣ ಜವಾಬ್ದಾರಿ ಸಂಘಟಕರು ವಹಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಕುಮಟಾ ಪುರಸಭೆ ಮುಖ್ಯಾಧಿಕಾರಿಗಳಾದ ವಿದ್ಯಾಧರ ಅವರು ಮಾತನಾಡಿ, ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನೆ ಬಳಸಬೇಕು. ಪಿಒಪಿ ಗಣಪನನ್ನು ಮಾರಾಟ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳುವ ವಿಶೇಷ ಗಮನ ಹರಿಸಿ ಎಂದು ತಿಳಿಸಿದರು.
ಸಭೆಯಲ್ಲಿ ಕುಮಟಾ ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿಗಳಾದ ನಾಗರತ್ನ ನಾಯಕ, ತಹಶೀಲ್ಧಾರ ಸತೀಶ ಗೌಡ, ಗೋಕರ್ಣ ಪೊಲೀಸ್ ಸಿ.ಪಿ.ಐ ವಸಂತ ಆಚಾರಿ, ಕುಮಟಾ ಪಿ.ಎಸ್.ಐ ಸಂಪತ್ ಕುಮಾರ್, ಸುನೀಲ ಸಿ.ಬಿ, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮುಖಂಡರು, ಮುಸ್ಲಿಂ ಸಮುದಾಯದ ಪ್ರಮುಖರು ಹಾಜರಿದ್ದರು.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ