Gokarna Beach: ಮೋಜು-ಮಸ್ತಿಗಾಗಿ ನೀರಿಗಿಳಿದ ವೇಳೆ ಅವಾಂತರ: ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಐವರ ರಕ್ಷಣೆ

ನೀರಿಗೆ ಇಳಿಯುವ ಮುನ್ನ ಇರಲಿ ಎಚ್ಚರಿಕೆ

ಗೋಕರ್ಣ: ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಸಿದ್ದ ಪ್ರವಾಸಿ ತಾಣಗಳಿದ್ದು, ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲೇ ಆಗಮಿಸುತ್ತಾರೆ. ಅದರಲ್ಲೂ ಮುರ್ಡೇಶ್ವರ ಮತ್ತು ಗೋಕರ್ಣದ ಕಡಲತೀರಗಳು ( Gokarna Beach) ಪ್ರವಾಸಿಗರ ಹಾಟ್ ಫೆವರೀಟ್. ಆದರೆ, ದೂರದೂರುಗಳಿಂದ ಪ್ರವಾಸಿಗರು ಇಲ್ಲಿ ಸಮುದ್ರಕ್ಕೆ ಇಳಿದು ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಎಚ್ಚರಿಕೆಯನ್ನೂ ಮೀರಿ ಸಮುದ್ರದಲ್ಲಿ ಮೋಜು ಮಸ್ತಿಗೆ ಇಳಿಯುತ್ತಿದ್ದು, ಅವಾಂತರಕ್ಕೆ ಕಾರಣವಾಗುತ್ತಿದೆ.

ಹೌದು, ಗೋಕರ್ಣ ಸಮುದ್ರ ತೀರದಲ್ಲೂ ಇಂತಹದೇ ಘಟನೆ ನಡೆದಿದ್ದು, ಮೋಜು ಮಸ್ತಿ ಮಾಡಲು ನೀರಿಗಿಳಿದ ಐವರು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಗಣೇಶ ಚತುರ್ಥಿಗೆ ರಜೆ ಇರುವ ಹಿನ್ನೆಲೆಯಲ್ಲಿ ಗೋಕರ್ಣಕ್ಕೆ (Gokarna Beach) ಪ್ರವಾಸಕ್ಕೆ ಐವರು ಬಂದಿದ್ದು, ಈ ವೇಳೆ ನೀರಿಗೆ ಇಳಿದಿದ್ದರು. ಆರಂಭದಲ್ಲಿ ಸಮುದ್ರದಲ್ಲಿ ಇಳಿದು ಆಟವಾಡಲು ಪ್ರಾರಂಭಿಸಿದ್ದಾರೆ. ಕೊನೆಗೆ ಈಜಲು ಶುರು ಮಾಡಿದ್ದು, ಈ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ದಡಕ್ಕೆ ಬರಲಾಗದೆ ಎಲ್ಲರೂ ಮುಳುಗುವ ಸ್ಥಿತಿಯಲ್ಲಿದ್ದರು. ಸಹಾಯಕ್ಕಾಗಿ ಕೂಗಿಕೊಂಡಿದ್ದು, ಲೈಫ್‌ಗಾರ್ಡ್ ಸಿಬ್ಬಂದಿಯು ಕೂಡಲೇ ಸಮುದ್ರಕ್ಕೆ ಜಿಗಿದು ಎಲ್ಲ ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ.

ಶ್ರೀಖಾಂಚು ಗುಪ್ತಾ (28), ಋತುರಾಜ್ (26), ಪ್ರಶಾಂತ ಚಂದ್ರಶೇಖರ್ (28), ಆರುಷಿ ಬನ್ಸಾಲ್ (27), ರೀತು ಪರ್ಹಾದಾಸ್ ರಕ್ಷಣೆಗೊಳಗಾದ ಪ್ರವಾಸಿಗರು. ಐವರಲ್ಲಿ ಇಬ್ಬರು ಪ್ರವಾಸಿಗರು ತೀವ್ರ ಅಸ್ವಸ್ಥಗೊಂಡಿದ್ದು, ಗೋಕರ್ಣ ಪ್ರಾಥಮಿಕ ಸಮುದಾಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಸ್ಮಯ ನ್ಯೂಸ್, ಗೋಕರ್ಣ

Exit mobile version