ಕಾರವಾರ: ಭವ್ಯ ಭಾರತಕ್ಕಾಗಿ ಮೋದಿ, ಮೋದಿಗಾಗಿ ನಾವು ಎಂಬ ಧ್ಯೇಯವಾಕ್ಯದೊಂದಿಗೆ ಶಿವನ ಆತ್ಮಲಿಂಗವಿರುವ ಗೋಕರ್ಣದಲ್ಲಿ 3 ದಿನಗಳವರೆಗೆ ಮಹಾರುದ್ರ ಯಾಗವನ್ನು ಮಾಡಲು ಮಹಾ ಸಂಕಲ್ಪ ಸೇವೆ ಕೈಗೊಳ್ಳಲಾಗಿದೆ ಎಂದು ಅನಂತಮೂರ್ತಿ ಹೆಗಡೆ ಚಾರಿಟೆಬಲ್ ಟ್ರಸ್ಟ್ ನ ಸಂಸ್ಥಾಪಕ ಹಾಗೂ ಸಮಾಜ ಸೇವಕ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಅವರು ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ನಾನು ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪಟ ಅಭಿಮಾನಿ. ನರೇಂದ್ರ ಮೋದಿ ಅವರಿಗೆ ಆಯಸ್ಸು, ಆರೋಗ್ಯ ಹಾಗೂ ಇನ್ನೊಮ್ಮೆ ಈ ದೇಶದ ಪ್ರಧಾನಿಯಾಗಲಿ ಎಂಬ ಪ್ರಾರ್ಥನೆಯೊಂದಿಗೆ ಶಿವನ ಆತ್ಮಲಿಂಗವಿರುವ ದಿವ್ಯ ಪುಣ್ಯಕ್ಷೇತ್ರವಾದ ದಕ್ಷಿಣದ ಕಾಶಿ ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಸೆಪ್ಟೆಂಬರ 27, 28 ಹಾಗೂ 29 ರಂದು ಮಹಾರುದ್ರ ಯಾಗ ಮಾಡುತ್ತೆನೆ ಎಂದರು.
ಮಹಾರುದ್ರಯಾಗಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಸಹ ಕರೆದಿದ್ದು, ಅವರು ಬರುವ ನಿರೀಕ್ಷೆ ಇದೆ. ಒಂದು ವೇಳೆ ನರೇಂದ್ರ ಮೋದಿಯವರು ಗೋಕರ್ಣಕ್ಕೆ ಬಂದರೆ, ಗೋಕರ್ಣದ ಅಭಿವೃದ್ದಿಯ ಚಿತ್ರಣವೇ ಬದಲಾಗಲಿದ್ದು, ದಕ್ಷಿಣದ ಕಾಶಿ ಗೋಕರ್ಣ ಕಾಶಿಯ ಭವ್ಯತೆಯನ್ನು ಪಡೆಯಲಿದೆ. ಆದ್ದರಿಂದ ಶಿವಭಕ್ತ ನರೇಂದ್ರ ಮೋದಿಯವರ ಒಳಿತಿಗಾಗಿ ಶಿವನ ಆತ್ಮಲಿಂಗದ ಸಾನಿಧ್ಯದಲ್ಲೆ ಮಹಾರುದ್ರಯಾಗ ಮಾಡಲಾಗುವುದು ಎಂದರು.
ಮುoಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಸಂಸದ ಅನಂತಕುಮಾರ ಹೆಗಡೆಯವರ ಸ್ಥಾನದಲ್ಲಿ ಅನಂತ ಮೂರ್ತಿ ಹೆಗಡೆಯವರಿಗೆ ಟಿಕೇಟ ಸಿಗಲಿದೆ ಎನ್ನುವ ಮಾತು ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ದುಡಿಮೆಯ ಒಂದು ಭಾಗವನ್ನು ಬಡವರಿಗೆ ಹಂಚುತ್ತಾ ಇರುವುದು ಮೊದಲಿನಿಂದಲೂ ಮಾಡುತ್ತಿದ್ದೇನೆ. ರಾಜಕೀಯದ ಆಕಾಂಕ್ಷಿಯಾಗಿ ನಾನು ಸಮಾಜ ಸೇವೆ ಮಾಡುತ್ತಿಲ್ಲ. ಚಿತ್ರನಟ ದಿ. ಪುನೀತ ರಾಜಕುಮಾರರ ಸಮಾಜ ಸೇವೆಯೇ ನನಗೆ ಪ್ರೇರಣೆ. ಉಳಿದಂತೆ ಯೋಗವಿದ್ದರೆ ರಾಜಕೀಯದಲ್ಲಿ ಅವಕಾಶವೂ ಸಿಗಲಿದ್ದು, ಆದಷ್ಟು ಸಮಾಜ ಸೇವೆ ಮಾಡುವ ನನ್ನ ಸಂಕಲ್ಪ ಸದಾ ಮುಂದುವರೆಯಲಿದೆ ಎಂದು ಸಮಾಜ ಸೇವಕ ಅನಂತ ಮೂರ್ತಿ ಹೆಗಡೆ ತಿಳಿಸಿದರು.
ವಿಸ್ಮಯ ನ್ಯೂಸ್, ಕಾರವಾರ