ಶಿರಸಿ: ಯಕ್ಷಗಾನ ಸಂಸ್ಕಾರ ಕೊಡುವ ಮಾಧ್ಯಮ,ಕಲೆ. ಯಕ್ಷಗಾನದ ಕಲೆಯನ್ನು ಕಲಿಯುವವನಿಗೂ ಸಂಸ್ಕಾರ ಬರುತ್ತದೆ ನೋಡುವವರಿಗೂ ಸಂಸ್ಕಾರ ಬರುತ್ತದೆ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇoದ್ರ ಸರಸ್ವತಿ ಸ್ವಾಮೀಜಿಗಳು (Swarnavalli Swamiji) ನುಡಿದರು. ಅವರು ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಯಕ್ಷಶಾಲ್ಮಲಾ ಸಂಸ್ಥೆಯ 19ನೇ ವರ್ಷದ ಯಕ್ಷೋತ್ಸವ ಕಾರ್ಯಕ್ರಮ ದ ಪ್ರಯುಕ್ತ ಹೊಸ್ತೋಟ ಮಂಜುನಾಥ ಭಾಗವತ ಪ್ರಶಸ್ತಿ ಯನ್ನು ಶ್ರೀಪಾದ ಭಟ್ ತಂಡಿಮನೆ ಅವರಿಗೆ ಪ್ರದಾನ ಮಾಡಿ ಆಶಿರ್ವಚನ ನೀಡಿದರು.
ಬೆರೆ ಯಾವ ಕಲೆಗೂ ಇಲ್ಲದಷ್ಟು ಆಯಾಮಗಳು ಯಕ್ಷಗಾನಕ್ಕಿದೆ. ಅನೇಕ ನಮ್ಮ ಪ್ರಾಚೀನ ಮೌಲ್ಯ ಗಳು ನಮಗೆ ನೋಡಲು ಸಿಗುವುದಿಲ್ಲ. ಅದನ್ನು ಉಳಿಸಿಕೊಳ್ಳಲು ಇಂತಹ ಕಲೆಗಳನ್ನು ಉಳಿಸಿ ಬೆಳೆಸಬೇಕು. ನಮ್ಮ ದೇಶದಲ್ಲಿ ಸಂಸ್ಕಾರ ಇನ್ನೂ ಜೀವಂತವಾಗಿದೆ. ನಮ್ಮ ದೇಶದ ಕಲೆಗಳು ಜನರಿಗೆ ಸಾಕಷ್ಟು ಸಂಸ್ಕಾರವನ್ನು ನೀಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಂಸ್ಕಾರವು ಹಾಳಾಗುವ ಸ್ಥಿತಿ ಬರುತ್ತಿದೆಯೋ ಎಂಬ ಭಯ ಪ್ರಾರಂಭವಾಗಿದೆ. ಯಕ್ಷಗಾನ ದಂತಹ ಪ್ರಭಲ ಸಂಸ್ಕಾರದ ಮೂಲಕ ಜನರಲ್ಲಿ ಇನ್ನಷ್ಟು ಸಂಸ್ಕಾರಗಳು ಬೆಳೆಯಲಿ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಪಾದ ಭಟ್ ತಂಡಿಮನೆ. ಯಾವುದೇ ಕಲೆ ಬೆಳೆಯಲು ಬದಲಾವಣೆ ಅಗತ್ಯ. ಆದರೆ ಆ ಬದಲಾವಣೆಯು ಕಲೆಯ ಸತ್ವ ಕೊಚ್ಚಿಕೊಂಡು ಹೋಗುವಷ್ಟು ಇರಬಾರದು ಎಂದರು.
ವಿಸ್ಮಯ ನ್ಯೂಸ್, ಶಿರಸಿ