Focus News
Trending

ಒತ್ತುವರಿ ತೆರವಿಗೆ ರಾಜ್ಯಮಟ್ಟದ ಕಾರ್ಯಪಡೆ ;ಅರಣ್ಯ ಸಚಿವರ ಟಿಪ್ಪಣೆಗೆ ಆಕ್ಷೇಪ

ಶಿರಸಿ: ವಿವಿಧ ಹಂತಗಳಲ್ಲಿ ಬಾಕಿ ಇರುವ ಒತ್ತುವರಿ ತೆರವು ಪ್ರಕರಣ ತ್ವರಿತವಾಗಿ ಕಾಲಮಿತಿಯಲ್ಲಿ ಜರುಗಿಸಲು ರಾಜ್ಯಮಟ್ಟದ ಕಾರ್ಯಪಡೆ ರಚಿಸುವ ಅಭಿಪ್ರಾಯ ವ್ಯಕ್ತಪಡಿಸಿ, ಲಿಖಿತ ಟಿಪ್ಪಣೆಯ ಮೂಲಕ ನಿರ್ಧೇಶನವನ್ನ ಅರಣ್ಯ ಸಚಿವರು ಹಿರಿಯ ಅಧಿಕಾರಿಗೆ ನಿಡಿರುವುದರಿಂದ ಅರಣ್ಯವಾಸಿಗಳಲ್ಲಿ ಆತಂಕ ಉಂಟಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಸಚಿವರ ಟಿಪ್ಪಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅವರು ಇಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಸೆಪ್ಟೆಂಬರ್ 22 ರಂದು ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ನ್ಯಾಯಾಲಯ ಮತ್ತು ಅರಣ್ಯ ಇಲಾಖೆಯಲ್ಲಿನ ಒತ್ತುವರಿ ಪ್ರಕರಣಗಳನ್ನ ತೆರವುಗೊಳಿಸಲು ಸಂಬoಧಿಸಿ ಅರಣ್ಯ, ಜೀವಶಾಸ್ತ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಟಿಪ್ಪಣೆಯ ಪತ್ರದ ಪ್ರತಿಯನ್ನು ಪ್ರದರ್ಶಿಸುತ್ತಾ ಮೇಲಿನಂತೆ ಹೇಳಿದರು.

ಮನಮೋಹನಸಿಂಗ್ ಪ್ರಧಾನ ಮಂತ್ರಿಯಾಗಿರುವ ಸಂದರ್ಭದಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬoಧಿಸಿ, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಾಗುವಳಿ ಹಕ್ಕಿಗೆ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳಿಗೆ ನೀಡಬೇಕಾದ ಕಾನೂನು ಬದ್ಧ ರಕ್ಷಣೆ ಹಾಗೂ ಹಕ್ಕಿನ ಕುರಿತು ಉಲ್ಲೇಖಿಸದೇ, ಹಳೆಯ ಅರಣ್ಯ ಒತ್ತುವರಿ ಪ್ರದೇಶದಿಂದ ಒಕ್ಕಲೆಬ್ಬಿಸುವ ಕುರಿತು ಕಾನೂನು ಕ್ರಮ ಬಿಗಿಗೊಳಿಸಲು ನಿರ್ಧೇಶನ ನೀಡಿರುವುದು ಹಾಗೂ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಿರುವುದು ವಿಷಾದಕರ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಇಬ್ರಾಹಿಂ ಗೌಡಳ್ಳಿ, ನೇಹರೂ ನಾಯ್ಕ ಬಿಳೂರು, ಎಮ್ ಆರ್ ನಾಯ್ಕ ಕಂಡ್ರಾಜಿ, ರಾಜು ನರೇಬೈಲ್ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಶಿರಸಿ

Back to top button