Important
Trending

Karwar Tunnel: ಕಾರವಾರ ಸುರಂಗ ಮಾರ್ಗ ವಾಹನ ಸಂಚಾರಕ್ಕೆ ಮುಕ್ತ : ಜಿಲ್ಲಾಧಿಕಾರಿಗಳು ಹೊರಡಿಸಿದ ಅಧಿಸೂಚನೆಯಲ್ಲಿ ಏನಿದೆ?

ಅಂಕೋಲಾ: ಸುರಕ್ಷತಾ ಕಾರಣದಿಂದ ವಾಹನ ಸಂಚಾರಕ್ಕೆ ಅನುಮತಿ ನಿರಾಕರಿಸಿ ಬಂದ್ ಮಾಡಲಾಗಿದ್ದ ಬಿಣಗಾದಿಂದ ಕಾರವಾರ ಬೈತಕೋಲ ಸಂಪರ್ಕಿಸುವ ಅವಳಿ ಸುರಂಗ ಮಾರ್ಗಗಳಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳು ಅಧಿಸೂಚನೆ  ಹೊರಡಿಸಿದ್ದು ಈ ಕುರಿತು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಕೆಲವು ನಿಬಂಧನೆಗಳನ್ನು ವಿಧಿಸಲಾಗಿದೆ.

ಜಿಲ್ಲಾಡಳಿತ ನಿಯೋಜಿಸಿರುವ ತಾಂತ್ರಿಕ ಅಧಿಕಾರಿಗಳ ಸಮಕ್ಷಮ ಸುರಂಗ ಮಾರ್ಗಗಳ ಸುರಕ್ಷತೆ ಕುರಿತು  ಮೂರನೇ ಸಂಸ್ಥೆಯಿಂದ ತಪಾಸಣೆ ನಡೆಸುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಯೋಜನಾ ನಿರ್ದೇಶಕರು ಹೊನ್ನಾವರ ಇವರಿಗೆ ಸೂಚಿಸಿ ಅಕ್ಟೋಬರ್ 2 ರಂದು ತಪಾಸಣೆ ನಡೆಸಲು ಸೂಚಿಸಲಾಗಿತ್ತು .ಆದರೆ ಇತರೆ ಕಾರ್ಯಭಾರದ ನಿಮಿತ್ತ ಸಂಬಂಧಿಸಿದ ಅಧಿಕಾರಿಗಳಿಗೆ ಬರಲು ಸಾಧ್ಯವಾಗದ ಕಾರಣ ತಪಾಸಣೆಯನ್ನು ಅಕ್ಟೋಬರ್ 8 ಕ್ಕೆ ಮುಂದೂಡಲಾಗಿದ್ದು ಸಾರ್ವಜನಿಕರಿಗೆ ತೊಂದರೆ ಆಗದಂತೆ ಸುರಂಗ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ವಿಧಿಸಿರುವ ನಿರ್ಬಂಧವನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 

ಅಕ್ಟೋಬರ್ 8 ರಂದು ಅಧಿಕಾರಿಗಳು ಆಗಮಿಸಿ ತಪಾಸಣೆ ನಡೆಸದಿದ್ದರೆ ಸಾರ್ವಜನಿಕರ ಹಿತ ದೃಷ್ಟಿಯಿಂದ ಅಧಿಸೂಚನೆ ಹಿಂಪಡೆಯಲಾಗುವುದು, ತಪಾಸಣಾ ಪೂರ್ವ ಅವಧಿಯಲ್ಲಿ ಸುರಂಗ ಮಾರ್ಗಗಳಲ್ಲಿ ಯಾವುದೇ ಅನಾಹುತ ಸಂಭವಿಸಿದರೆ ಅದಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಯೋಜನಾಧಿಕಾರಿ ಹೊಣೆಯಾಗಿರುತ್ತಾರೆ ಎಂದು ನಿಬಂಧನೆಗಳನ್ನು ವಿಧಿಸಲಾಗಿದ್ದು , ಅವಳಿ ಸುರಂಗ ಮಾರ್ಗಗಳು ಸಂಚಾರಕ್ಕೆ ತೆರೆದುಕೊಳ್ಳಲಿವೆ.

ನಾನಾ ಕಾರಣಗಳಿಂದ ಚತುಷ್ಪಥ ಹೆದ್ದಾರಿ ಟನೆಲ್ (ಸುರಂಗ ಮಾರ್ಗ) ದ ಕುರಿತು ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮೊನ್ನೆಯಷ್ಟೇ ಎಂ.ಎಲ್ ಸಿ ಗಣಪತಿ ಉಳ್ವೇಕರ ನೇತೃತ್ವದಲ್ಲಿ ಸಾರ್ವಜನಿಕ ಪ್ರತಿಭಟನೆ ನಡೆದಿದ್ದು, ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ತೆರಳಿ, ಎರಡು ದಿನಗಳ ಒಳಗೆ ಸುರಂಗ ಮಾರ್ಗ ಸಂಚಾರ ನಿರ್ಭಂಧ ತೆರವಿಗೆ ಕ್ರಮ ವಹಿಸುವ ಭರವಸೆ ನೀಡಿದ್ದನ್ನು ಸ್ಮರಿಸಬಹುದಾಗಿದೆ. ಜಿಲ್ಲಾಧಿಕಾರಿಗಳು ಗಾಂಧೀ ಜಯಂತಿಯಂದೇ ಹೊರಡಿಸಿದ ಅಧಿಸೂಚನೆ ಹೆದ್ದಾರಿ ಸಂಚಾರಿಗಳ ಪಾಲಿಗೆ ಹಸಿರು ನಿಶಾನೆ ಆದಂತಿದ್ದು, ಹಲವರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button