ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಭ್ರಮ: ಚೊಚ್ಚಲ ಹೆರಿಗೆ ಖುಷಿಯಲ್ಲಿರುವವರ ಸಂತಸ ಹೆಚ್ಚಿಸಿದ ಜಿಲ್ಲಾಧಿಕಾರಿ: ಗರ್ಭೀಣಿಯರಿಗೆ ಸೀಮಂತದ ಸಡಗರ

ಕಾರವಾರ: ಹಿಂದೂ ಸಂಪ್ರದಾಯದಲ್ಲಿ ಗರ್ಭೀಣಿ ಸ್ತ್ರೀಗೆ ಮೊದಲ ಹೆರಿಗೆ ವೇಳೆಗೆ ಸೀಮಂತ ಸಾಮಾನ್ಯ. ಶಾಸ್ತ್ರೋಕ್ತವಾಗಿ ನಡೆಯುವ ಈ ಸಂಭ್ರಮದ ಕಾರ್ಯಕ್ರಮದಲ್ಲಿ ಮನೆಮಂದಿಯೆಲ್ಲ ಸೇರಿ ಗರ್ಭೀಣಿಗೆ ಅರಿಶಿನ ಕುಂಕುಮ ಇಟ್ಟು ಉಡಿ ತುಂಬಿ ಹಾರೈಸಲಾಗುತ್ತದೆ. ಆದರೆ ಉತ್ತರಕನ್ನಡದಲ್ಲಿ ಇಂತಹದೊಂದು ಸಂಪ್ರದಾಯವನ್ನು ಸ್ವತಃ ಜಿಲ್ಲಾಧಿಕಾರಿಯೇ ತಮ್ಮ‌ ಕಚೇರಿಯಲ್ಲಿ ಆಯೋಜಿಸುವ ಮೂಲಕ ಚೊಚ್ಚಲ ಹೆರಿಗೆ ಖುಷಿಯಲ್ಲಿರುವವರ ಖುಷಿಯನ್ನು ಇಮ್ಮಡಿಗೊಳಿಸಿದ್ದಾರೆ.

ಹೌದು ಉತ್ತರಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೂರಾರು ಮಹಿಳೆಯರ ಉಪಸ್ಥಿತಿಯಲ್ಲಿ ನಡೆದ ಇಂತಹದೊಂದು ಅಪರೂಪದ ಕಾರ್ಯಕ್ರಮ ಗರ್ಭೀಣಿ ಸ್ತ್ರೀಯರ ಸಂತಸವನ್ನು ಇಮ್ಮಡಿಗೊಳಿಸಿದೆ. ಸ್ವತಃ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರೇ ಐವರು ಗರ್ಭೀಣಿಯರಿಗೆ ಅರಿಶಿನ ಕುಂಕುಮ ಹಚ್ಚಿ, ಹೂವು ಮೂಡಿಸಿ, ಹಸಿರು ಗಾಜಿನ ಬಳೆಗಳನ್ನು ತೊಡಿಸಿ, ಹೊಸ ಸೀರೆ ನೀಡಿ, ಆರತಿ ಬೆಳಗಿ, ಉಡಿ ತುಂಬಿಸಿದರು.

ಬಳಿಕ ಸಿಹಿ ತಿನ್ನಿಸಿ, ಸುಖ ಪ್ರಸವವಾಗಿ ತಾಯಿ ಮಗು ಸದಾ ಆರೋಗ್ಯವಾಗಿರಲಿ ಎಂದು ಹಾರೈಸಿದರು. ಜಿಲ್ಲಾಧಿಕಾರಿಯೇ ಸತಃ ನಿಂತು ಈ ಸೀಮಂತ ಮಾಡಿರುವುದು ಸೀಮಂತಕ್ಕೊಳಗಾದ ಗರ್ಭೀಣಿಯರ ಸಂತಸಕ್ಕೆ ಪಾರವೇ ಇಲ್ಲದಂತಾಯಿತು. ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಈ ಸೀಮಂತ ಕಾರ್ಯಕ್ರಮ ಉಳ್ಳವರ ಮನೆಯಲ್ಲಿ ಅದ್ದೂರಿಯಾಗಿ ನಡೆಸಲಾಗುತ್ತೆ. ಆದರೆ ಸಾಮಾನ್ಯ ಕುಟುಂಬದ ಮಹಿಳೆಯರಿಗೂ ಈ ಸೀಮಂತ ಸಂಭ್ರಮ ನೀಡುವ ನಿಟ್ಟಿನಲ್ಲಿ ಆಯೋಜಿಸಿದ್ದ ಅರ್ಥಪೂರ್ಣ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಲು ಕಾರಣವಾಯಿತು.

ಇನ್ನು ಪೋಷಣ್ ಮಾಸಾಚರಣೆಯಡಿ ಜಿಲ್ಲೆಯಾದ್ಯಂತ ಇಂಥ ಕಾರ್ಯಕ್ರಮ ನಡೆಯಲಿದ್ದು, ಗರ್ಭೀಣಿ ಸ್ತ್ರೀಯರು ಪೂರಕ ಪೌಷ್ಟಿಕ ಆಹಾರ ಸ್ವೀಕರಿಸಬೇಕೆನ್ನುವ ಉದ್ದೇಶದಿಂದ ಸೀಮಂತ ಶಾಸ್ತ್ರ ನೆರವೇರಿಸಲಾಗುತ್ತಿದೆ. ಮುಂದೆ ಜಿಲ್ಲೆಯಲ್ಲಿ ಪ್ರತಿ ತಿಂಗಳ ಮೊದಲ ಶುಕ್ರವಾರ ಮತ್ತು ತೃತೀಯ ಶುಕ್ರವಾರ ಇಂಥ ಕಾರ್ಯಕ್ರಮ ನಡೆಸುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಮಹಿಳೆಯರು ತಯಾರಿಸಿದ ಸಿಹಿ ಖಾದ್ಯಗಳು ಪ್ರದರ್ಶಿಸಲಾಯಿತು. ಇನ್ನು ಇದೇ ವೇಳೆ‌ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇದ್ದ 105 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿ, ಆಯ್ಕೆಯಾದ ಮಹಿಳೆಯರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದರು.‌ಕೆಲಸವನ್ನು ಶ್ರದ್ದೆಯಿಂದ ಮಾಡುವಂತೆ ಸೂಚನೆ ನೀಡಿದರು.

ಇದರ ಜೊತೆಯಲ್ಲಿ ಶಿಶುಗಳಿಗೆ 6 ತಿಂಗಳ ನಂತರ ತಾಯಿಯ ಎದೆಹಾಲಿನ ಜೊತೆಗೆ ಪೌಷ್ಟಿಕ ಆಹಾರ ಸೇವನೆ ಆರಂಭಿಸುವ ಕಾರ್ಯಕ್ರಮವಾದ ಶಿಶುಪ್ರಾಶನದಲ್ಲಿ, ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೂರಕವಾದ ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ತಿನ್ನಿಸಿದರು. ಜಿಲ್ಲಾಧಿಕಾರಿ ಅವರಿಂದ ಪೌಷ್ಟಿಕ ಆಹಾರ ಸ್ವೀಕರಿಸಿದ ಹಾಲುಗಲ್ಲದ ಕಂದಮ್ಮಗಳು ಆಹಾರವನ್ನು ಬಾಯಿ ಚಪ್ಪರಿಸಿ ಆನಂದಿಸಿದರು.

ಒಟ್ಟಾರೆ ಚೊಚ್ಚಲ ಹೆರಿಗೆ ಖುಷಿಯಲ್ಲಿರುವ ಮಹಿಳೆಯರಿಗೆ ಸ್ವತಃ ಜಿಲ್ಲಾಧಿಕಾರಿಯೇ ಸೀಮಂತ ಮಾಡಿರುವುದು ಗರ್ಭೀಣಿಯರ ಸಂತಸಕ್ಕೆ ಕಾರಣವಾಗಿದೆ. ಜೊತೆಗೆ ಈ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಮುಂಜಾಗೃತೆ, ಆರೈಕೆಗಳ ಬಗ್ಗೆಯೂ ತಿಳಿವಳಿಕೆ ನೀಡುತ್ತಿರುವುದು ಮೆಚ್ಚುಗೆಗೆ ಕಾರಣವಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version