ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರಕಿಸುವ ಪ್ರಾಮಾಣಿಕ ಪ್ರಯತ್ನ: ಶಾಸಕ ಭೀಮಣ್ಣ

ಶಿರಸಿ: ಅಧಿಕಾರಕ್ಕೆ ಹೇಗೆ ಆತುರ ಪಡುತ್ತೇವೆಯೋ ಹಾಗೆಯೇ ಅಭಿವೃದ್ಧಿಯ ಕುರಿತು ತುಡಿತಹೊಂದಿರಬೇಕು. ಜನರು ಯಾವ ಉದ್ದೇಶಕ್ಕೆ ನಮಗೆ ಅಧಿಕಾರ ನೀಡಿದ್ದಾರೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಕ್ಷೇತ್ರದ ಶಾಸಕನಾಗಿ ಮಾಡುತ್ತೇನೆ ಎಂದು ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಶನಿವಾರತಾಲೂಕಿನ ಕುಳವೆ ಗ್ರಾ.ಪಂ ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ತಾಲೂಕಾ ಪಂಚಾಯತ, ಜಿಲ್ಲಾ ಪಂಚಾಯತದಿAದ ಆಯೋಜಿಸಿದ್ದ ವಸತಿ ಯೋಜನೆಯ ಫಲಾನುಭವಿಗಳಿಗೆ ಕಾಮಗಾರಿ ಆದೇಶಪತ್ರ ವಿತರಿಸಿ ಮಾತನಾಡಿದ ಅವರು,ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ಲಭಿಸಿ, 77 ವರ್ಷ ಕಳೆದಿದೆ. ಆದರೆ ಇನ್ನೂ ಕೆಲ ಗ್ರಾಮೀಣ ಪ್ರದೇಶಗಳು ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಈ ಹಿನ್ನೆಲೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮೀಣ ಭಾಗಕ್ಕೆ ಆರ್ಥಿಕ ಶಕ್ತಿ ನೀಡುತ್ತಿದೆ.

ಜನರು ಯಾವ ಉದ್ಧೇಶಕ್ಕೆ ನಮ್ಮನ್ನು ಆಯ್ಕೆ ಮಾಡಿದ್ದಾರೆ ಎಂಬುದನ್ನು ಜನಪ್ರತಿನಿಧಿಗಳು ಅರ್ಥೈಸಿಕೊಳ್ಳಬೇಕು ಎಂದ ಅವರು, ಅಭಿವೃದ್ಧಿ ಎನ್ನುವುದು ನಿರಂತರ ಪ್ರಕ್ತಿಯೆ. ಬದಲಾದ ಸರ್ಕಾರದಲ್ಲಿ ಹಿಂದಿನ ಸರ್ಕಾರ ಮಂಜೂರಿ ಮಾಡಿದ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಿಲ್ಲ. ಹಿಂದಿನ ಸರ್ಕಾರ, ಹಿಂದಿನ ಶಾಸಕರು ಮಂಜೂರಿ ಮಾಡಿಸಿದ ಕಾಮಗಾರಿಗಳನ್ನು ರದ್ಧುಗೊಳಿಸಲಾಗುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಶಾಸಕರು ಬದಲಾದರೂ ಕಾಮಗಾರಿಗಳು ನಿರಂತರವಾಗಿ ನಡೆಯುತ್ತದೆ ಎಂದರು.

ಹಳದಿ ರೋಗ, ಎಲೆಚುಕ್ಕೆ ರೋಗವು ಅಡಿಕೆ ಬೆಳೆಗಾರರಿಗೆ ಮಾರಕವಾಗಿದೆ. ಸರ್ಕಾರದಿಂದ ತೋಟಗಾರಿಕಾ ಇಲಾಖೆ ಮೂಲಕ ಉಚಿತವಾಗಿ ಜೌಷಧಿ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ತೋಟಗಾರಿಕಾ ಇಲಾಖೆ ಸಚಿವರನ್ನು ಭೇಟಿ ಮಾಡಿ ಸೂಕ್ತ ಪರಿಹಾರ ಒದಗಿಸುವಂತೆ ವಿನಂತಿಸಲಾಗಿದ್ದು, ರೋಗ ತಡೆಗಟ್ಟುವ ಬಗ್ಗೆ ತಜ್ಞರ ಜತೆ ಸಭೆ ನಡೆಸಿ, ತಳಮಟ್ಟದ ಅಧ್ಯಯನ ನಡೆಸಲು ಕಾರ್ಯಪ್ರವೃತ್ತರಾಗಲು ಕೋರಲಾಗಿದೆ ಎಂದರು.

ವಿಸ್ಮಯ ನ್ಯೂಸ್ ಶಿರಸಿ

Exit mobile version