ಸಿಡಿಲು ಮಳೆಯ ಆರ್ಭಟ: ಎರಡು ಮನೆಗಳಿಗೆ ಹಾನಿ: ಮಹಿಳೆ ಅಸ್ವಸ್ಥ

ಅಂಕೋಲಾ: ತಾಲೂಕಿನಲ್ಲಿ ರಾತ್ರಿ ಗುಡುಗು ಸಿಡಿಲಿನೊಂದಿಗೆ ಮಳೆ ಜೋರಾಗಿ ಅರ್ಭಟಿಸಿದ್ದು ಕೆಲಹೊತ್ತು ಹಲವೆಡೆ, ಜನಜೀವನ ಅಸ್ತವ್ಯಸ್ತವಾಗುವಂತಾಗಿದ್ದು, ಇದೇ ವೇಳೆ ತಾಲೂಕಿನ ಎರಡು ಮನೆಗಳ ಮೇಲೆ ಎರಗಿದ ಹಠಾತ್ ಸಿಡಿಲಿನಿಂದ,ಮಹಿಳೆಯೋರ್ವರು ಆಘಾತಗೊಂಡ ಘಟನೆ ಅಗಸೂರು ಗ್ರಾಮದ ಹಿತ್ತಲಗದ್ದೆಯಲ್ಲಿ ಸಂಭವಿಸಿದೆ.

ರಂಜಿತಾ ಜಗದೀಶ ಗೌಡ ಎಂಬಾಕೆ ತನ್ನ ಒಂದುವರೆ ತಿಂಗಳ ಮಗುವಿನೊಂದಿಗೆ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಸಂಜೆ 7.30 ರ ಸುಮಾರಿಗೆ ಮನೆಗೆ ಬಂದೆರಗಿದ ಸಿಡಿಲಿನ ಆರ್ಭಟಕ್ಕೆ ರಂಜಿತಾ ತೀವ್ರ ಆಘಾತ ಹಾಗೂ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದರೆ, ಅದೃಷ್ಟವಶಾತ್ ಅವಳ ಮಡಿಲಿನಲ್ಲಿದ್ದ ಪುಟ್ಟ ಕಂದಮ್ಮ ಅಪಾಯದಿಂದ ಬಚಾವ ಆಗಿದ್ದಾಳೆ.. ಸಿಡಿಲಿನಿಂದಾಗಿ ಮನೆಯ ಗೋಡೆ ಬಿರುಕು ಬಿಟ್ಟು, ವಿದ್ಯುತ್ ಉಪಕರಣಗಳು ಸುಟ್ಟು ಹೋಗಿದ್ದು, ಅಸ್ವಸ್ಥಗೊಂಡ ಮಹಿಳೆಯನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತಹಶೀಲ್ಧಾರ ಅಶೋಕ ಭಟ್ಟ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯ ಆರೋಗ್ಯ ವಿಚಾರಿಸಿದ್ದು, ಕಂದಾಯ ನಿರೀಕ್ಷಕ ಭಾರ್ಗವ ನಾಯಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಗದೀಶ ರಾಮಾ ಗೌಡ ಮನೆಗೆ 50,000 ಬೀರಾ ದೇವು ಗೌಡ ಮನೆಗೆ 30000 ಹಾನಿ ಅಂದಾಜಿಸಲಾಗಿದೆ. ಕಳೆದ ಒಂದೆರಡು ದಿನಗಳ ಹಿಂದೆಯೂ ಬೇಳಾ ಬಂದರ ಗ್ರಾಮದಲ್ಲಿ ವಕೀಲರೋರ್ವರ ಮನೆಯ ಪಕ್ಕದ ಜಮೀನಿನ ತೆಂಗಿನ ಮರ ಒಂದಕ್ಕೆ ಸಿಡಲು ಬಡಿದು ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿತ್ತು.

ಸೋಮವಾರ ಪಟ್ಟಣ ಹಾಗೂ ಗ್ರಾಮಾಂತರ ಭಾಗದ ಅನೇಕ ಕಡೆ ಮಳೆ, ಗುಡುಗು- ಮಿಂಚು , ಸಿಡಿಲಿನ ಅಬ್ಬರ ಜೋರಾಗಿ ,ಹಲವರು ಭಯ ಬೀತಿಗೊಳ್ಳುವಂತಾಗಿತ್ತಲ್ಲದೇ, ಸುರಿದ ಭಾರೀ ಮಳೆಯಿಂದ ಕೆಲ ರಸ್ತೆ ಮತ್ತಿತರ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿರುವುದು, ವಿದ್ಯುತ್ : ವ್ಯತ್ಯಯ ಸೇರಿದಂತೆ ಕೆಲ ಕಾಲ ಜನ – ಜೀವನ ಅಸ್ತವ್ಯಸ್ತ ವಾಗುವಂತಾಗಿತ್ತು. ನಂತರ ಮಳೆ ಗುಡುಗು ಸಿಡಿಲಿನ ಆರ್ಭಟ ಕಡಿಮೆಯಾಗಿ ಎಲ್ಲವೂ ಸಹಜ ಸ್ಥಿತಿಗೆ ಮರಳಿ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version