ಅಂಕೋಲಾ: ರಾಜ್ಯದ ಹಲವೆಡೆ ವಿವಿಧ ಹಂತದ ಅಧಿಕಾರಿಗಳ ಮನೆಗಳ ಮೇಲೆ ನಡೆಯುತ್ತಿರುವ ಲೋಕಾಯುಕ್ತ ದಾಳಿ ಮುಂದುವರೆದಂತಿದೆ. ಅದರ ಭಾಗವಾಗಿ ಅಂಕೋಲಾ ತಾಲೂಕು ಮೂಲದ ಹೊರ ಜಿಲ್ಲೆಯಲ್ಲಿ ಅಧಿಕಾರಿಯಾಗಿರುವ ಅಧಿಕಾರಿ ಓರ್ವರ ಬೆಲೇಕೇರಿಯ ಮೂಲ ಮನೆಯಲ್ಲಿಯೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಉಡುಪಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜೇಶ ಎಚ್ ನಾಯಕ ಎನ್ನುವವರು ವಾಸವಿದ್ದ ಕುಂದಾಪುರದ ಮನೆ ಮತ್ತು ಉಡುಪಿಯ ವಾಣಿಜ್ಯ ತೆರಿಗೆ ಕಚೇರಿಯ ಮೇಲೆ ದಾಳಿ ನಡೆದಿದೆ ಎನ್ನಲಾಗಿದ್ದು, ಇದೇ ವೇಳೆ (ಏಕ ಕಾಲದಲ್ಲಿ)ಅಂಕೋಲಾ ತಾಲೂಕಿನ ಬೆಲೇಕೇರಿಯಲ್ಲಿಯೂ ಲೋಕಾಯುಕ್ತ ಅಧಿಕಾರಿ ಸುರೇಶ ಅವರ ನೇತೃತ್ವದ ತಂಡ ಜೈನ ಬೀರ ದೇವಸ್ಥಾನದ ಆವರಣದ ಬಳಿ ತಮ್ಮ ವಾಹನ ನಿಲ್ಲಿಸಿ ಹತ್ತಿರವೇ ಇದ್ದ ಮನೆಯ ಮೇಲೆ ದಾಳಿ ನಡೆಸಿದ್ದು, ಕಾಗದ ಪತ್ರ ಮತ್ತಿತರ ಪರಶೀಲನೆಯಲ್ಲಿ ತೊಡಗಿದಂತಿದೆ.
ಕೋಳಿ ಕೂಗುವ ಮುನ್ನ ನಸುಕಿನ ಜಾವದಲ್ಲಿಯೇ ಕದ ಬಡಿದ ಅಪರಿಚಿತ ತಂಡ ಕಂಡು,ತಮ್ಮ ಹಂಚಿನ ಮನೆಯಲ್ಲಿಯೇ ವಾಸವಿದ್ದ ರಾಜೇಶ ಅವರ ವೃದ್ಧ ತಂದೆ – ತಾಯಿಗಳು ಕೊಂಚ ಆತಂಕಗೊಂಡಂತೆ ಕಂಡರೂ, ನಂತರ ವಿಷಯ ತಿಳಿದು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಸಹಕರಿಸಿದರು ಎನ್ನಲಾಗಿದೆ. ರಾಜೇಶ್ ನಾಯಕ ಅವರ ಕಚೇರಿ,ವಾಸವಿದ್ದ ಮನೆ,ತಂದೆ ತಾಯಿಗಳು ವಾಸವಿದ್ದ ಮೂಲ ಮನೆ ಮೇಲೆ ದಾಳಿ ನಡೆದಿದೆ ಎನ್ನಲಾಗಿದ್ದು,ಹೆಂಡತಿಯ ತವರು ಮನೆ ಮೇಲೂ ಏಕಕಾಲಕ್ಕೆ ದಾಳಿ ನಡೆದಿರುವ ಸಾಧ್ಯತೆಗಳು ಕೇಳಿ ಬಂದಿದ್ದು ಈ ಕುರಿತು ಸ್ಪಷ್ಟ ಮಾಹಿತಿಗಳು ತಿಳಿದು ಬರಬೇಕಿದೆ.
ವಿವಿಧಡೆ ದಾಳಿ ನಡೆಸಿರುವ ಲೋಕಾಯುಕ್ತ ತಂಡ ತನಿಖೆ ಮತ್ತು ಪರಿಶೀಲನೆ ಮುಂದುವರಿಸಿದ್ದು,ಅದು ಪೂರ್ಣಗೊಂಡ ಬಳಿಕವಷ್ಟೇ, ಅಧಿಕಾರಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆಯೇ ಎಂಬ ಅಧಿಕೃತ ಮತ್ತು ನಿಖರ ಮಾಹಿತಿ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ