ಕಾಣೆಯಾಗಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ದೂರದ ಮುಂಬೈನಲ್ಲಿ ಪತ್ತೆ: ಮಾಯಾ ನಗರಿಯಿಂದ ಮನೆಗೆ ಮರಳಿದ ಮಗನ ಕಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟ ಕುಟುಂಬಸ್ಥರು

ಅಂಕೋಲಾ : ಮನೆಯಿಂದ ಶಾಲೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಎಸ್.ಎಸ್. ಎಲ್ ಸಿ ವಿದ್ಯಾರ್ಥಿ, ಬಹು ಹೊತ್ತಾದರೂ ಮನೆಗೆ ಮರಳದಿರುವುದರಿಂದ ಆತಂಕಗೊಂಡಿದ್ದ , ಪಾಲಕರು ತಮ್ಮ ಮಗ ಎಲ್ಲಿಯೋ ಹೋಗಿ ಕಾಣೆಯಾಗಿರುವ, ಅಥವಾ ಆತನ ಅಪಹರಣದ ಸಂಶಯ ವ್ಯಕ್ತಪಡಿಸಿ ಇತ್ತೀಚೆಗೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಅದಾಗಿ 2 ದಿನದಲ್ಲಿ ಈಗ ಅದೇ ವಿದ್ಯಾರ್ಥಿ ದೂರದ ಮುಂಬೈಯಲ್ಲಿ ಪತ್ತೆಯಾಗಿದ್ದು, ವಿದ್ಯಾರ್ಥಿ ಕಾಣೆ ಪ್ರಕರಣ ಸದ್ಯ ಸುಖಾಂತ್ಯ ಕಂಡಂತಾಗಿದೆ.

ತಾಲೂಕಿನ ಗ್ರಾಮೀಣ ಪ್ರದೇಶದ ನಿವಾಸಿಯಾಗಿದ್ದ (15) ವರ್ಷ ವಯಸ್ಸಿನ ಬಾಲಕ, ಪಟ್ಟಣದ ಖಾಸಗಿ ಕಾನ್ವೆಂಟ್ ನಲ್ಲಿ ಎಸ್.ಎಸ್ ಎಲ್ ಸಿ ವಿದ್ಯಾಭ್ಯಾಸ ಮಾಡುತ್ತಿದ್ದು, ದಿನಾಂಕ 30-10 – 2023 ರಂದು ಬೆಳಿಗ್ಗೆ 8 ಗಂಟೆಗೆ ತನ್ನ ಮನೆಯಿಂದ ಹೋದವನು, ಎಂದಿನಂತೆ ಟ್ಯೂಶನ್ ಗೂ ಹೋಗದೇ, ಶಾಲೆಗೂ ಹೋಗದೇ, ಮನೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಅಥವಾ ಆತನಿಗೆ ಯಾರಾದರೂ ಅಪಹರಿಸಿಕೊಂಡು ಹೋಗಿರುವ ಸಂಶಯ ಇದ್ದು, ಕಾಣೆಯಾದ ತನ್ನ ಮಗನನ್ನು ಪತ್ತೆ ಮಾಡಿಕೊಡಿ ಎಂದು, ನೊಂದ ತಂದೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣವನ್ನು ದಾಖಲಿಸಿಕೊಂಡ ಅಂಕೋಲಾ ಪೊಲೀಸರು ಆತನ ಪತ್ತೆಗೆ ಮುಂದಾಗಿರುವ ವೇಳೆ, ದೂರದ ಮುಂಬೈನಲ್ಲಿ ಮಗ ಸಿಕ್ಕಿರುವ ಶುಭ ಸುದ್ದಿ ಕುಟುಂಬಸ್ಥರಿಗೆ ಬಂದಿದೆ, ಸಿಪಿಐ ಸಂತೋಷ ಶೆಟ್ಟಿ ಸೂಚನೆ ಮೇರೆಗೆ ಸ್ಥಳೀಯ ಪೊಲೀಸರೊಂದಿಗೆ ಮಗನನ್ನು ಮನೆಗೆ ಕರೆತರಲು ಕುಟುಂಬಸ್ಥರು ತೆರಳಿ, ಅಲ್ಲಿಂದ ಮಗನನ್ನು ಸುರಕ್ಷಿತವಾಗಿ ಮನೆಗೆ ವಾಪಸ ಕರೆದು ಕೊಂಡು ಬಂದಿದ್ದಾರೆ.

ತಾಲೂಕಿನಲ್ಲಿ ಸುದ್ದಿಗೆ ಕಾರಣವಾಗಿದ್ದ ವಿದ್ಯಾರ್ಥಿ ಕಾಣೆ ಪ್ರಕರಣ ಕಳೆದೆರಡು ದಿನಗಳ ಹಿಂದೇ ಸುಖಾಂತ್ಯ ಗೊಂಡು, ಆತನ ಕುಟುಂಬಸ್ಥರು ಮತ್ತು ತಾಲೂಕಿನ ಶಿಕ್ಷಣ ಪ್ರೇಮಿಗಳು ಹಾಗೂ ಮಾನವೀಯ ಹೃದಯವಂತರನೇಕರು ಸಂತಸ ವ್ಯಕ್ತಪಡಿಸಿದ್ದಾರೆ.

ಮೊಬೈಲ್ ನೋಡುತ್ತ ನೋಡುತ್ತಾ ತಾನೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹೆಸರು ಮಾಡಬೇಕು ಎಂದು ತನ್ನ ಆತ್ಮೀಯರಲ್ಲಿ ಆಗಾಗ ಹೇಳಿಕೊಳ್ಳುತ್ತಿದ್ದ ಎನ್ನಲಾದ ಈ ವಿದ್ಯಾರ್ಥಿ ಅದೇ ಉದ್ದೇಶದಿಂದ, ಊರು ಬಿಟ್ಟು ಮಾಯಾ ನಗರಿ ಮುಂಬೈಗೆ ಹೋಗಿದ್ದನೇ? ಎಂಬಿತ್ಯಾದಿ ಮಾತುಗಳು ಸ್ಥಳೀಯ ಕೆಲವರಿಂದ ಕೇಳಿ ಬಂದಂತಿದ್ದರೂ, ಬಾಲ ಬುದ್ಧಿಯ ಬಾಲಕ ಅರಿವಿದ್ದೋ ಇಲ್ಲದೆಯೋ ದೂರದ ಪ್ರಯಾಣ ಮಾಡಿ ಮನೆಗೆ ವಾಪಸ್ಸಾಗಿದ್ದು, ಮತ್ತೆ ಆತನಿಗೆ ಆ ಘಟನೆಯ ಕುರಿತು ಮೇಲಿಂದ ಮೇಲೆ ಪ್ರಶ್ನಿಸದೇ , ಆತನ ಭವಿಷ್ಯದ ದೃಷ್ಟಿಯಿಂದ ಆತನಲ್ಲಿ ಆತ್ಮ ವಿಶ್ವಾಸ ತುಂಬಿ, ಆತ ಬಾಳಿ – ಬೆಳೆಯಲು ಸರ್ವರ ಸಹಕಾರ – ಪ್ರೋತ್ಸಾಹ ಅವಶ್ಯವಿದೆ ಎನ್ನುತ್ತಾರೆ ಕುಟುಂಬಸ್ಥರು. ಅಂತೂ ಇಂತೂ ಈ ಪ್ರಕರಣ ಸುಖಾಂತ್ಯ ಕಂಡಂತಾಗಿದ್ದು , ಮನೆ ಹಾಗೂ ಕುಟುಂಬಸ್ಥರಲ್ಲಿ ಮೂಡಿದ್ದ ಆತಂಕ ದೂರವಾಗಿ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version