ಮಧ್ಯರಾತ್ರಿ ಗುಂಪುಕಟ್ಟಿಕೊಂಡು ಓಡಾಡಬೇಡಿ ಎಂದು ಹೇಳಿದ್ದಕ್ಕೆ ಆಕ್ರೋಶ: ಬೀಟ್ ಪೊಲೀಸರ ಮೇಲೆ ಹಲ್ಲೆ: 10 ಮಂದಿಯ ಬಂಧನ

ಕಾರವಾರ: ರಾತ್ರಿ ಬೀಟ್ ಕರ್ತವ್ಯದಲ್ಲಿದ್ದ ಈರ್ವರು ಪೊಲೀಸ್ ಸಿಬ್ಬಂದಿ ಮೇಲೆ ಕ್ಷುಲ್ಲಕ ಕಾರಣಕ್ಕೆ ಯುವಕರ ತಂಡವೊಂದು ಹಲ್ಲೆ ನಡೆಸಿದೆ. ಪ್ರಕರಣದಲ್ಲಿ 10 ಮಂದಿಯನ್ನ ಬಂಧಿಸಲಾಗಿದ್ದು, ಇನ್ನೋರ್ವನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ರಾತ್ರಿ ಕಾರವಾರ ನಗರದ ಬೈತಖೋಲ್ ನಲ್ಲಿ ಬೀಟ್ ಕರ್ತವ್ಯದಲ್ಲಿದ್ದ ನಗರ ಠಾಣೆಯ ಕಾನ್ಸ್ಟೇಬಲ್ ಗಳಾದ ಗಣೇಶ್ ಕುರಿಯವರ್ ಹಾಗೂ ಹರೀಶ್ ಗವಾಣಿಕರ ಎಂಬುವವರ ಮೇಲೆ ಹಲ್ಲೆ ನಡೆದಿದೆ. ಬೈತಖೋಲ್ ಭೂದೇವಿ ದೇವಸ್ಥಾನದ ಬಳಿ ಮಧ್ಯರಾತ್ರಿ 1.30ರ ವೇಳೆಗೆ ಗುಂಪು ಕಟ್ಟಿಕೊಂಡು ಕುಳಿತಿದ್ದ ತಂಡಕ್ಕೆ ಮನೆಗೆ ತೆರಳುವಂತೆ ಸೂಚಿಸಿದ್ದನ್ನೇ ನೆಪ ಮಾಡಿಕೊಂಡ ಆರೋಪಿಗಳು, ಪೊಲೀಸ್ ಸಿಬ್ಬಂದಿ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.

ಬೈತಖೋಲ್ ನಿವಾಸಿಗಳಾದ ಸುನೀಲ ಗೌಡ, ಮಂಜುನಾಥ ಗೌಡ, ಸಂದೇಶ್, ರಘುವೀರ, ನಿತಿನ್ ಗೌಡ, ಗಗನ ಗೌಡ, ಅನುರಾಗ ಗೌಡ, ಉಮೇಶ್ ಜನಕಪ್ರಸಾದ್, ವಿತೇಶ ಗೌಡ, ಯುವರಾಜ ಗೌಡ, ಸುಚಿತ ಗೌಡ ಎನ್ನುವವರ ಮೇಲೆ ಕಾರವಾರ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version