ಭಟ್ಕಳ: ಭಟ್ಕಳ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ 2023-24 ನೇ ಸಾಲಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳಿಂದ “ಸ್ವಾಗತ ಕಾರ್ಯಕ್ರಮವು” ನಡೆಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹೊನ್ನಾವರ ಸರ್ಕಾರಿ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರವಿ ಗೌಡ ಕಾರ್ಯಕ್ರಮ ಉದ್ಘಾಟಿಸಿ “ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಅರಿತು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಅಂತರಾಷ್ಟಿಯ ಖ್ಯಾತಿಯ ವೇಗದ ಕುಂಚ ಕಲಾವಿದ ಶ್ರೀ ವಿಲಾಸ ನಾಯಕ ಮಾತನಾಡಿ ಯುವಜನತೆ ಶಿಕ್ಷಣದ ಜೊತೆಯಲ್ಲಿ ಕೌಶಲ್ಯವನ್ನು ಅಭಿವೃದ್ದಿಪಡಿಸಿಕೊಂಡು ನೈತಿಕತೆಯನ್ನು ಪಾಲಿಸಿ ಉತ್ತಮ ಪ್ರಜೆಗಳಾಗಬೇಕು ಎಂದರು. ಈ ಸಂದರ್ಭದಲ್ಲಿ ಯುವ ಮತದಾರರ ನೊಂದಣಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಅಲ್ಲದೇ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟುಗಳಿಗೆ ಗೌರವಿಸಲಾಯಿತು.
ಭಟ್ಕಳ ತಾಲೂಕಿನಲ್ಲಿ ಸುದೀರ್ಘಾವಧಿಯಿಂದ ತೆರಿಗೆ ಸಲಹೆಗಾರರಾಗಿ ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಅನುಭವವನ್ನು ಧಾರೆಯೆರೆದಿರುವ ಕೃಷ್ಣಾನಂದ ಯಾಜಿ ಯವರನ್ನು ಹಳೆ ವಿದ್ಯಾರ್ಥಿಗಳ ವತಿಯಿಂದ ಗೌರವಿಸಲಾಯಿತು. ಟ್ರಸ್ಟಿ ನಾಗೇಶ ಭಟ್ ರವರು ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಪಾಲಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಟ್ಕಳ ಎಜುಕೇಶನ್ ಟ್ರಸ್ಟ’ನ ಅಧ್ಯಕ್ಷ ಡಾ. ಸುರೇಶ ನಾಯಕ್ ‘ವಿದ್ಯಾರ್ಥಿಗಳು ಪದವಿಯ ಮೂರು ವರ್ಷಗಳನ್ನು ಸೂಕ್ತವಾಗಿ ಉಪಯೋಗಿಸಿ, ಉನ್ನತ ಹುದ್ದೆಯನ್ನೇರಬೇಕು’ ಎಂದು ಹೇಳಿದರು.
2022-23ನೇ ಸಾಲಿನ ವಿವಿಧ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪ್ರಾಂಶುಪಾಲರಾದ ಶ್ರೀನಾಥ ಪೈ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಗಳನ್ನು ಉಪಪ್ರಾಂಶುಪಾಲರಾದ ವಿಶ್ವನಾಥ ಭಟ್ಟ, ಉಪನ್ಯಾಸಕರಾದ ಸುಬ್ರಮಣ್ಯ ನಾಯ್ಕ ಪರಿಚಯಿಸಿದರೆ, ಬಿ.ಕಾಂ ವಿಭಾಗದ ಉಪಪ್ರಾಂಶುಪಾಲ ಪಿ.ಎಸ್. ಹೆಬ್ಬಾರ್ ಸ್ವಾಗತಿಸಿದರು, ಉಪನ್ಯಾಸಕರಾದ ಈಶ್ವರ ಜಿ ವಂದಿಸಿದರು ಹಾಗೂ ವಿದ್ಯಾರ್ಥಿಗಳಾದ ಮಿಥಾಲಿ ಪ್ರಭು, ಸಹನಾ ನಾಯ್ಕ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ