Big News
Trending

ವಿಸ್ಮಯ ಟಿ.ವಿ ವರದಿ ಎಫೆಕ್ಟ್: ಕೊನೆಗೂ ಎಚ್ಚೆತ್ತುಕೊಂಡ ಅಧಿಕಾರಿಗಳು : ಬೇಳಾ ಬಂದರ್ ಪ್ರದೇಶದಲ್ಲಿ ನಡೆಯಿತು ಸ್ವಚ್ಚತಾ ಕಾರ್ಯ

ಅಂಕೋಲಾ: ಸಾರ್ವಜನಿಕರ ವಾಯು ವಿಹಾರ ಮತ್ತಿತರ ಉಪಯೋಗಕ್ಕೆ ಬಳಕೆಯಾಗಬೇಕಿದ್ದ ಅಂಕೋಲಾ ಪುರಸಭೆ ವ್ಯಾಪ್ತಿಯ ಬೇಳಾ ಬಂದರದ ಬಹುಪಯೋಗಿ ಪ್ರಮುಖ ಸ್ಥಳವೊಂದು, ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಂತಿದ್ದು, ಕುಡುಕರ ಮೋಜಿನ ತಾಣವಾದಂತಿದೆ ಎಂಬ ತಲೆ ಬರಹದಡಿ ವಿಸ್ಮಯ ವಾಹಿನಿ ವರದಿ ಪ್ರಕಟಿಸಿದ ಬೆನ್ನಿಗೇ ಎಚ್ಚೆತ್ತುಕೊಂಡ ಸ್ಥಳೀಯ ಪುರಸಭೆಯವರು, ಸ್ವಚ್ಚತಾ ಕಾರ್ಯಕ್ಕೆ ಮುಂದಾಗಿದ್ದು, ಈ ಕುರಿತು ಧ್ವನಿ ಎತ್ತಿದ್ದ ವಕೀಲ ಉಮೇಶ ನಾಯ್ಕ ಹಾಗೂ ವರದಿ ಪ್ರಕಟಿಸಿ ಸಂಬAಧಿಸಿದವರ ಗಮನ ಸೆಳೆದ ವಿಸ್ಮಯ ವಾಹಿನಿಗೆ ಸ್ಥಳೀಯರು ಮೆಚ್ಚುಗೆ ಸೂಚಿಸಿದ್ದಾರೆ.

ಅಂಕೋಲಾ ಪುರಸಭೆ ವ್ಯಾಪ್ತಿಯ , ಬೇಳಾ ಬಂದರ ಗ್ರಾಮದ ಕಸ್ಟಮ ಇಲಾಖೆಗೆ ಸೇರಿದ ಜಾಗದ ಪಕ್ಕದ ಸ್ಥಳವು ಈ ಹಿಂದಿನಿAದಲೂ ಸಾರ್ವಜನಿಕ ಬಳಕೆಗೆ ಉಪಯೋಗವಾಗುತ್ತಿದ್ದು ಪ್ರತಿನಿತ್ಯ ಇಲ್ಲಿ ನೂರಾರು ಜನ ವೃದ್ಧರು, ಸಾರ್ವಜನಿಕರು ವಾಯುವಿಹಾರಕ್ಕೆ ಬಂದು, ಇಲ್ಲಿ ಕೆಲ ಹೊತ್ತು ಕಳೆಯುತ್ತಿದ್ದಾರೆ.

ಈ ಸ್ಥಳದಲ್ಲಿ ಶ್ರೀ ವೆಂಕಟರಮಣ ದೇವರ ಜಲಕ್ರೀಡೆ, ಗಣೇಶ ವಿಸರ್ಜನೆ ಮತ್ತಿತರ ಧಾರ್ಮಿಕ ಕಾರ್ಯಗಳು ನಡೆಯುತ್ತದೆ. ಈ ಹಿಂದೆ ಬೊಬ್ರವಾಡಾ ಗಾ.ಪಂ ಗೆ ಸೇರಿದ್ದ ಈ ಸ್ಥಳ, ಬದಲಾದ ಭೌಗೋಳಿಕ ಕ್ಷೇತ್ರ ವಿಂಗಡನೆಯಲ್ಲಿ ಪುರಸಭೆ ವ್ಯಾಪ್ತಿಗೆ ಸೇರ್ಪಡೆಯಾಗಿ ಕೆಲ ವರ್ಷಗಳೇ ಕಳೆದಿದ್ದು. ಈ ಹಿಂದೆ ಇಲ್ಲಿ, ನಾಗರಿಕರು ಕುಳಿತು ಕೊಳ್ಳಲು ಆಸನದ ಅನುಕೂಲ ಕಲ್ಪಿಸಲಾಗಿತ್ತು.

ಈಗ ಈ ಆಸನಗಳು ಮತ್ತು ಅಕ್ಕ ಪಕ್ಕಗಳಲ್ಲಿ ಗಿಡಗಂಟಿ, ಮುಳ್ಳು ಗಿಡಗಳು ಬೆಳೆದಿದ್ದು ಹೆಚ್ಚಿನ ಆಸನಗಳು ಮುಳ್ಳಿನ ಆಸನಗಳಾಗಿತ್ತಲ್ಲದೇ, ನಾನಾ ಕಾರಣಗಳಿಂದ ಉಪಯೋಗಕ್ಕೆ ಬಾರದಂತಾಗಿತ್ತು. ಈ ಕುರಿತು ಮತ್ತು ಇಲ್ಲಿನ ಸಮುದ್ರ ಹಿನ್ನೀರಿನ ಈ ಭಾಗದಲ್ಲಿ ಹಸಿರು ಕಾಂಡ್ಲಾವನ , ನೀರಿನಲ್ಲಿ ಮುಳುಗೇಳುವ ಹಕ್ಕಿಗಳ ಕಲರವ ಅತ್ಯುತ್ತಮ ಪ್ರವಾಸಿ ತಾಣದಂತೆ ಕಂಗೊಳಿಸುತ್ತಿದ್ದರೂ. ಇಲ್ಲಿ ಸ್ವಚ್ಚತೆ ನಿರ್ವಹಣೆ ಮಾಡಬೇಕಿದ್ದ ಪುರಸಭೆಯವರ ಅಲಕ್ಷ್ಯ ಮತ್ತಿತರ ಕಾರಣಗಳಿಂದ ವಾತಾವರಣ ಗಬ್ಬೆದ್ದು ನಾರುವಂತಾಗಿದೆಯಲ್ಲದೇ, ಕೆಲ ಕುಡುಕರ ಮೋಜು ಮಸ್ತಿ ತಾಣವಾಗಿಯೂ ಇದು ಬದಲಾಗಿದ್ದು. ಇಲ್ಲಿಯ ಅವ್ಯವಸ್ಥೆ ಸರಿಪಡಿಸುವಂತೆ ಸ್ಥಳೀಯ ನಿವಾಸಿ ಮತ್ತು ವಕೀಲರಾದ ಉಮೇಶ ನಾಯ್ಕ ಆಡಳಿತ ವ್ಯವಸ್ಥೆ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದರು.

ಈ ಕುರಿತು ವಿಸ್ಮಯ ವಾಹಿನಿ ವಿಸ್ತೃತ ವರದಿ ಪ್ರಕಟಿಸಿ ಸಂಬoಧಿತ ಇಲಾಖೆಗಳ ಗಮನಕ್ಕೆ ತಂದಿತ್ತು. ವರದಿಯಿಂದ ಎಚ್ಚೆತ್ತು ಕೊಂಡ ಸ್ಥಳೀಯ ಪುರಸಭೆಯವರು, ತಮ್ಮ ಪೌರ ಕಾರ್ಮಿಕ ಸಿಬ್ಬಂದಿಗಳನ್ನು ಕಳುಹಿಸಿ, ರಾಶಿ ರಾಶಿಯಾಗಿ ಬಿದ್ದ ಕಸ ತ್ಯಾಜ್ಯ ಸಂಗ್ರಹಿಸಿ, ತ್ಯಾಜ್ಯ ವಿಲೇವಾರಿ ವಾಹನದ ಮೂಲಕ ಒಯ್ದಿದ್ದಾರೆ.

ಅಲ್ಲದೇ ಆಸನಗಳ ಮತ್ತು ಅಕ್ಕ ಪಕ್ಕದ ಪ್ರದೇಶಗಳಲ್ಲಿ ಬೆಳೆದಿದ್ದ ಗಿಡ-ಗಂಟಿ, ಮುಳ್ಳುಗಳನ್ನು ಕತ್ತರಿಸಿ, ಸ್ವಚ್ಚತೆಗೆ ಕ್ರಮ ಕೈಗೊಂಡಿದ್ದಾರೆ. ತಡವಾಗಿಯಾದರೂ ಎಚ್ಚೆತ್ತುಕೊಂಡು ಪುರಸಭೆ, ಜಿಲ್ಲೆಯ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೂ ಕೂಡಲೇ ಕ್ರಮ ಕೈಗೊಂಡು, ಗಬ್ಬೆದ್ದು ನಾರುತ್ತಿದ್ದ ಸುತ್ತಲಿನ ಪರಿಸರ ಸ್ವಚ್ಛತೆಗೆ ಮುಂದಾಗಿದ್ದು, ಈ ಕುರಿತು ಧ್ವನಿ ಎತ್ತಿದ್ದ ಸ್ಥಳೀಯ ನಿವಾಸಿ ಮತ್ತು ವಕೀಲ ಉಮೇಶ ನಾಯ್ಕ, ವಿಸ್ತೃತ ವರದಿ ಪ್ರಕಟಿಸಿ ಸಂಬAಧಿಸಿದ ಇಲಾಖೆ ಗಮನ ಸೆಳೆದ ವಿಸ್ಮಯ ವಾಹಿನಿಗೆ ಸ್ಥಳೀಯರನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬರಲಿರುವ ಕೆಲ ದಿನಗಳಲ್ಲಿ ಹತ್ತಿರದ ಸರಕಾರಿ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಆಚರಣೆಗೆ ತೆರೆದುಕೊಳ್ಳಲಿದ್ದು, ಸ್ಥಳೀಯ ನಾಗರಿಕರು, ಪ್ರಮುಖರು, ಕೂಡಿಕೊಂಡು ಸುತ್ತ ಮುತ್ತಲ ಪರಿಸರದ ಇನ್ನಷ್ಟು ಸ್ವಚ್ಚತೆಗೆ ಕಾರ್ಯ ಪ್ರವೃತ್ತರಾಗಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button